– ಸಿಇಒಗೆ ಸಿಗುವ ಸವಲತ್ತುಗಳೇನು? ಅರ್ಜಿ ಸಲ್ಲಿಕೆಗೆ ಯಾರು ಅರ್ಹರು?
ಅಯೋಧ್ಯೆ: ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ (Shri Ram Janmbhoomi Teerth Kshetra Trust) ಇತ್ತೀಚೆಗಷ್ಟೇ ಹೊಸ ಸಾರಥಿ ಬಂದಿದ್ದಾರೆ. ರಾಮ ಮಂದಿರದ ಹುಂಡಿ ಹಣ ಲೂಟಿ ಹಗರಣದ ನೈತಿಕ ಹೊಣೆ ಹೊತ್ತು ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ ನೀಡಿದ ಬೆನ್ನಲ್ಲೇ ತಾತ್ಕಾಲಿಕ ಪ್ರಧಾನ ಕಾರ್ಯದರ್ಶಿಯನ್ನಾಗಿ ನಿವೃತ್ತ ಐಎಫ್‌ಎಸ್ ಅಧಿಕಾರಿ ಕೃಷ್ಣಮೋಹನ್ (Krishna Mohan) ಅವರನ್ನು ನೇಮಕ ಮಾಡಲಾಗಿದೆ. ಇದಾದ ಒಂದೇ ವಾರದಲ್ಲಿ ರಾಮಮಂದಿರ ಟ್ರಸ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮೊದಲ ಬಾರಿಗೆ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ)ಯನ್ನ ನೇಮಿಸಲು ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
श्री राम जन्मभूमि तीर्थक्षेत्र (न्यास) श्री राम जन्मभूमि मंदिर के मुख्य कार्यकारी अधिकारी पद के लिए योग्य जनों से आवेदन आमंत्रित करता है
आवेदन की अंतिम तिथि: शनिवार १८ जुलाई २०२६; सायं ४ बजे
Shri Ram Janmabhoomi Teerth Kshetra (Trust) invites applications from eligible… pic.twitter.com/PHa0MbT5kY
— Shri Ram Janmbhoomi Teerth Kshetra (@ShriRamTeerth) July 13, 2026
ರಾಮ ಮಂದಿರದ (Ram Mandir) ನಿರ್ವಹಣಾ ಕಾರ್ಯಗಳನ್ನು ವೃತ್ತಿಪರಗೊಳಿಸಲು ಮತ್ತು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವ ಉದ್ದೇಶದಿಂದ ಸಿಇಒ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಪೂರ್ಣ ಕಾರ್ಪೊರೇಟ್ ಶೈಲಿಯ ಹುದ್ದೆ ಇದಾಗಿದೆ. ಆಕರ್ಷಕ ವೇತನದೊಂದಿಗೆ ಐಷಾರಾಮಿ ಬಂಗಲೆ ಹಾಗೂ ವಾಹನ ಭದ್ರತಾ ಸೌಲಭ್ಯಗಳನ್ನೂ ನೀಡುವುದಾಗಿ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ…
ಅರ್ಜಿ ಸಲ್ಲಿಸಲು ಯಾರು ಅರ್ಹರು?
ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸಿಇಒ ಹುದ್ದೆಗೆ (CEO Job) ಹೊಸಬರು ಅರ್ಜಿ ಸಲ್ಲಿಸಲು ಅವಕಾಶ ಇರೋದಿಲ್ಲ, ಅನುಭವಿಗಳಿಗೆ ಮಾತ್ರ ಅವಕಾಶವಿದ್ದು, ಕಟ್ಟುನಿಟ್ಟಿನ ಅರ್ಹತಾ ಮಾನದಂಡಗಳನ್ನ ರೋಪಿಸಲಾಗಿದೆ. ಅವು ಈ ಕೆಳಗಿನಂತಿವೆ…
- ಅಭ್ಯರ್ಥಿಯು 20 ವರ್ಷಗಳ ಆಡಳಿತಾತ್ಮಕ ಅನುಭವ ಹೊಂದಿರುವ ನಿವೃತ್ತ ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗಿರಬೇಕು.
- ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಪ್ರಧಾನ ಕಾರ್ಯದರ್ಶಿ ಅಥವಾ ಅದಕ್ಕಿಂತ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿರಬೇಕು.
- ಅಭ್ಯರ್ಥಿಯು ಸಂಪೂರ್ಣವಾಗಿ ಶುದ್ಧ ಮತ್ತು ಕಳಂಕವಿಲ್ಲದ ವ್ಯಕ್ತಿಯಾಗಿರಬೇಕು.
- ಹಿಂದಿ ಮತ್ತು ಇಂಗ್ಲಿಷ್ ಭಾಷೆ ಕಡ್ಡಾಯ
ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಯಾವಾಗ?
ಜುಲೈ 18 ರಂದು ಸಂಜೆ 4 ಗಂಟೆಯೊಳಗೆ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸಿಇಒ ಜವಾಬ್ದಾರಿಗಳೇನು?
ರಾಮ ಮಂದಿರದ ಸಿಇಒ ಹುದ್ದೆಗೇರಿದವರು ಕೇವಲ ಆಡಳಿತ ಅಧಿಕಾರಿಯಾಗಿರುವುದಿಲ್ಲ. ಇಡೀ ಸಂಕೀರ್ಣದ ನಿರ್ವಹಣೆಗೆ ಜವಾಬ್ದಾರರಾಗಿರುತ್ತಾರೆ.
- ಪ್ರತಿದಿನ ಭೇಟಿ ನೀಡುವ ಲಕ್ಷಾಂತರ ಭಕ್ತರ ಭದ್ರತೆ ಮತ್ತು ದರ್ಶನಕ್ಕೆ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡುವುದು.
- ದೇವಾಲಯ ಟ್ರಸ್ಟ್‌ನ ನಿಧಿಗಳು, ಕಾಣಿಕೆಗಳು ಮತ್ತು ಹಣಕಾಸಿನ ವಹಿವಾಟುಗಳ ಲೆಕ್ಕ ಪರಿಶೋಧಿಸುವುದು.
- ದೇವಾಲಯ ಸಂಕೀರ್ಣದೊಳಗೆ ನಡೆಯುತ್ತಿರುವ ಇತರ ಅಭಿವೃದ್ಧಿ ಕಾರ್ಯಗಳನ್ನ ಮೇಲ್ವಿಚಾರಣೆ ಮಾಡುವುದು.
ಸಿಇಒಗೆ ಸಿಗುವ ಸವಲತ್ತುಗಳೇನು?
ಸಿಇಒ ಹುದ್ದೆಯು ಜವಾಬ್ದಾರಿಯುತ ಹುದ್ದೆಯಾಗಿರುವುದರಿಂದ ವಿಐಪಿಗೆ ಸಮನಾದ ವೇತನ ಪ್ಯಾಕೇಜ್‌ಗಳನ್ನ ನೀಡಲಾಗುತ್ತದೆ. ಇದೆಲ್ಲವನ್ನು ನೇರವಾಗಿ ಟ್ರಸ್ಟ್ ನಿಧಿಯಿಂದಲೇ ಪಾವತಿಸಲಾಗುತ್ತದೆ.
ಆಕರ್ಷಕ ವೇತನ ಪ್ಯಾಕೇಜ್
ಸಿಇಒ ವೇತನವು ಪ್ರಮುಖ ಸರ್ಕಾರಿ ಇಲಾಖೆಯಲ್ಲಿ (ಕ್ಯಾಬಿನೆಟ್ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿಯಂತಹ) ಉನ್ನತ ಅಧಿಕಾರಿ ಅಥವಾ ಪ್ರಮುಖ ಕಂಪನಿಯಲ್ಲಿನ ಉನ್ನತ ಕಾರ್ಯನಿರ್ವಾಹಕರಿಗೆ ಸಮನಾಗಿರುತ್ತದೆ.

ಅಯೋಧ್ಯೆಯಲ್ಲಿ ಐಷಾರಾಮಿ ಬಂಗಲೆ
ಸಿಇಒಗೆ ಅಯೋಧ್ಯೆಯಲ್ಲೇ ಸುಸಜ್ಜಿತ ಸರ್ಕಾರಿ ಅಥವಾ ಟ್ರಸ್ಟ್ ಒಡೆತನದ ಬಂಗಲೆ ಸೌಲಭ್ಯ ಒದಗಿಸಲಾಗುತ್ತದೆ. ಇದರಲ್ಲಿ ಕಚೇರಿ ಮತ್ತು ಭದ್ರತಾ ಸಿಬ್ಬಂದಿಗೂ ವಸತಿ ಸೌಕರ್ಯ ಇರುತ್ತದೆ.
ಅಧಿಕೃತ ವಾಹನಗಳು ಮತ್ತು ಭದ್ರತೆ
ಅಯೋಧ್ಯೆಯಲ್ಲಿ ಸುಗಮ ಕಾರ್ಯನಿರ್ವಹಣೆ ಮತ್ತು ವಿಐಪಿ ವ್ಯವಸ್ಥೆಯನ್ನ ಖಚಿತಪಡಿಸಿಕೊಳ್ಳಲು, ಸಿಇಒಗೆ ಐಷಾರಾಮಿ ವಾಹನಗಳು (ಎಸ್‌ಯುವಿ) ಮತ್ತು ಪ್ರತ್ಯೇಕ ಚಾಲಕನ ಸೌಲಭ್ಯ ನೀಡಲಾಗುತ್ತದೆ. ಅವರ ಭದ್ರತೆಗಾಗಿ ವಿಶೇಷ ಗಾರ್ಡ್‌ಗಳನ್ನ ಸಹ ನಿಯೋಜಿಸಲಾಗುತ್ತದೆ.
ಇತರ ಸವಲತ್ತುಗಳು
ವೈದ್ಯಕೀಯ ವಿಮೆ, ಪ್ರಯಾಣ ಭತ್ಯೆ, ಫೋನ್ ಮತ್ತು ಇಂಟರ್ನೆಟ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನ ಒದಗಿಸಲಾಗುತ್ತದೆ.
ನಿಧಿ ಎಲ್ಲಿಂದ ಬರುತ್ತದೆ?
ಸಿಇಒಗೆ ನೀಡಲಾಗುವ ಎಲ್ಲಾ ಸೌಲಭ್ಯಗಳ ಸಂಪೂರ್ಣ ವೆಚ್ಚವನ್ನು ಉತ್ತರ ಪ್ರದೇಶ ಸರ್ಕಾರ ಅಥವಾ ಕೇಂದ್ರ ಸರ್ಕಾರ ಭರಿಸುವುದಿಲ್ಲ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿಧಿಯಿಂದಲೇ ಭರಿಸಲಾಗುತ್ತದೆ.
