ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ, ‘ಟಗರು ಪಲ್ಯ’ ಖ್ಯಾತಿಯ ನಾಗಭೂಷಣ್ (Nagabhushan) ಅವರ ಜನ್ಮದಿನದ ಪ್ರಯುಕ್ತ ಅವರ ಹೊಸ ಚಿತ್ರದ ಅಧಿಕೃತ ಘೋಷಣೆಯಾಗಿದೆ. ಕಸ್ತೂರಿ ಟಾಕೀಸ್ ಬ್ಯಾನರ್‌ನಡಿ ನಿರ್ಮಾಪಕ ಎಸ್. ಕೆ. ಸಂತೋಷ್ ಅವರು ನಿರ್ಮಿಸುತ್ತಿರುವ, ‘ಪ್ರೊಡಕ್ಷನ್ ನಂ. 2’ ಎಂದು ತಾತ್ಕಾಲಿಕವಾಗಿ ಹೆಸರಿಡಲಾಗಿರುವ ಈ ಚಿತ್ರವನ್ನು ಜಗದೀಶ್ ಎನ್. ಕೋಲಾರ ನಿರ್ದೇಶಿಸುತ್ತಿದ್ದಾರೆ. ಆಗಸ್ಟ್ 17 ರಂದು ನಟ ನಾಗಭೂಷಣ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಈ ವಿಶೇಷ ದಿನದಂದೇ ಚಿತ್ರತಂಡ ಹೊಸ ಸಿನಿಮಾದ ವಿವರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಜಗದೀಶ್ ಎನ್. ಕೋಲಾರ, ಇದೊಂದು 90ರ ದಶಕದ ಹಿನ್ನೆಲೆಯಲ್ಲಿ ಸಾಗುವ ಅಪ್ಪಟ ಕೌಟುಂಬಿಕ ಕಥಾಹಂದರ ಎಂದು ತಿಳಿಸಿದ್ದಾರೆ. ನಾಗಭೂಷಣ್ ಅವರು ಈ ಹಿಂದೆಂದೂ ಇಂಥ ವಿಭಿನ್ನ ಪಾತ್ರ ಹಾಗೂ ಕಾಲಘಟ್ಟದ ಕಥೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಸದ್ಯ ಚಿತ್ರದ ಚಿತ್ರಕಥೆಯ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ನಾಗಭೂಷಣ್ ಅವರು ಕಥೆ ಕೇಳಿದ ತಕ್ಷಣವೇ ಮೆಚ್ಚಿ ಒಪ್ಪಿಕೊಂಡಿದ್ದಾರೆ. ತಮ್ಮ ವೃತ್ತಿಜೀವನದಲ್ಲೇ ಇದೊಂದು ಅತ್ಯುತ್ತಮ ಸಿನಿಮಾವಾಗಲಿದೆ ಎಂಬ ಭರವಸೆಯನ್ನೂ ನಟ ವ್ಯಕ್ತಪಡಿಸಿದ್ದಾರೆ.
ಮುಂದುವರಿದು ಮಾತನಾಡಿದ ನಿರ್ದೇಶಕರು, ‘ಟಗರು ಪಲ್ಯ’ ಚಿತ್ರಕ್ಕಿಂತ ಇದು ಸಂಪೂರ್ಣ ಭಿನ್ನವಾದ ಶೈಲಿಯಲ್ಲಿ ಮೂಡಿಬರಲಿದೆ ಎಂದಿದ್ದಾರೆ. ಸದಾ ಹೊಸ ಬಗೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ನಾಗಭೂಷಣ್ ಅವರಿಗಾಗಿಯೇ ವಿಶೇಷವಾಗಿ ರೂಪಿಸಿದ ಫ್ರೆಶ್ ಕಂಟೆಂಟ್ ಇದಾಗಿದ್ದು, ರೆಗ್ಯುಲರ್ ಚೌಕಟ್ಟಿನಿಂದ ಹೊರತಾಗಿದೆ. ಇನ್ನೂ ಎರಡು ತಿಂಗಳೊಳಗೆ ಚಿತ್ರದ ಮುಹೂರ್ತ ನೆರವೇರಿಸಿ ಶೂಟಿಂಗ್ ಆರಂಭಿಸುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.
ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಗರಡಿಯಲ್ಲಿ ಸುಮಾರು 7–8 ವರ್ಷಗಳ ಕಾಲ ಪಳಗಿ, 10ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಜಗದೀಶ್ ಎನ್. ಕೋಲಾರ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ. ಶೀಘ್ರದಲ್ಲೇ ಕಲಾವಿದರು ಮತ್ತು ತಂತ್ರಜ್ಞರ ಮಾಹಿತಿಯನ್ನು ತಂಡ ಪ್ರಕಟಿಸಲಿದೆ.

