ಮಂಡ್ಯ: ಕಬಿನಿ ಜಲಾಶಯದ ಬಳಿಕ ಇದೀಗ ಕೃಷ್ಣರಾಜ ಸಾಗರ (KRS) ಅಣೆಕಟ್ಟಿನ ನೀರಿನ ವಿಚಾರವೂ ರಾಜ್ಯದಲ್ಲಿ ಚರ್ಚೆಗೆ ಬಂದಿದೆ. ಈ ನಡುವೆ KRS ಜಲಾಶಯಕ್ಕೆ ಕೇವಲ 1,961 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಆದರೆ, ಡ್ಯಾಂನಿಂದ ನದಿಗೆ 4,917 ಕ್ಯೂಸೆಕ್‌ಗೂ ಅಧಿಕ ನೀರು ಹೊರಬಿಡಲಾಗುತ್ತಿದೆ.
KRSನಿಂದ ತಮಿಳುನಾಡಿಗೆ ಕದ್ದುಮುಚ್ಚಿ ಕಾವೇರಿ ನೀರು ಹರಿಸಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಒಳಹರಿವಿಗಿಂತ ಹೊರಹರಿವು ಹೆಚ್ಚಾಗಿರುವುದೇ ಈಗ ರೈತರ ಆತಂಕಕ್ಕೆ ಕಾರಣವಾಗಿದೆ.
ಈ ಹಿಂದೆ ಕುಡಿಯುವ ನೀರು ಹಾಗೂ ನಾಲೆಗಳಿಗೆ ಸುಮಾರು 2,000 ದಿಂದ 2,500 ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು. ಆದರೆ ಇದೀಗ ಏಕಾಏಕಿ ಹೊರಹರಿವಿನ ಪ್ರಮಾಣ ಹೆಚ್ಚಿಸಿರುವುದು ಯಾಕೆ ಎಂಬ ಪ್ರಶ್ನೆ ರೈತರದ್ದು.
ಕಳೆದ ಆಗಸ್ಟ್ 15ರಿಂದಲೇ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೆ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ ಎಂಬ ಅನುಮಾನ ರೈತ ಸಂಘಟನೆಗಳಲ್ಲಿ ಮೂಡಿದೆ. ಜಲಾಶಯಕ್ಕೆ ಬರುತ್ತಿರುವ ನೀರು ಕಡಿಮೆಯಾಗಿರುವ ಸಮಯದಲ್ಲೇ ಇಷ್ಟೊಂದು ಪ್ರಮಾಣದ ನೀರನ್ನು ನದಿಗೆ ಬಿಡುತ್ತಿರುವುದರ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
“ಕುಡಿಯುವ ನೀರು, ನಾಲೆಗಳ ಹೆಸರಿನಲ್ಲಿ ನೀರು ಬಿಡಲಾಗುತ್ತಿದೆ. ಆದರೆ ನಿಜವಾಗಿಯೂ ನೀರು ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು” ಎಂದು ರೈತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ನಿವೃತ್ತ ಶಿಕ್ಷಕನ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್ – ಆಸ್ತಿ, ಪ್ರಿಯಕರನಿಗಾಗಿ ತಂದೆಯನ್ನೇ ಕೊಲೆಗೈದ ಮಗಳು
ಇದು ಮಂಡ್ಯ ಭಾಗದ ರೈತರಲ್ಲಿ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. KRS ನೀರಿನ ಮೇಲೆ ಜಿಲ್ಲೆಯ ರೈತರ ನಿರೀಕ್ಷೆ ದೊಡ್ಡದು. ಹೀಗಾಗಿ ನೀರು ಬಿಡುವ ವಿಚಾರದಲ್ಲಿ ಯಾವುದೇ ಮುಚ್ಚುಮರೆ ಇರಬಾರದು ಎಂಬುದು ಅನ್ನದಾತರ ಮಾತು.
ತಕ್ಷಣವೇ ನೀರು ಬಿಡುವುದನ್ನು ನಿಲ್ಲಿಸಿ, ಒಳಹರಿವು-ಹೊರಹರಿವಿನ ಸಂಪೂರ್ಣ ಲೆಕ್ಕವನ್ನು ಸರ್ಕಾರ ಬಹಿರಂಗಪಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ. ಆದರೆ, ತಮಿಳುನಾಡಿಗೆ ನಿಜವಾಗಿಯೂ ನೀರು ಹರಿಸಲಾಗುತ್ತಿದೆಯೇ ಅಥವಾ ಕುಡಿಯುವ ನೀರು ಹಾಗೂ ನಾಲೆಗಳ ಅಗತ್ಯಕ್ಕಾಗಿ ನೀರು ಬಿಡಲಾಗುತ್ತಿದೆಯೇ ಎಂಬುದಕ್ಕೆ ಸರ್ಕಾರ ಮತ್ತು ನೀರಾವರಿ ಅಧಿಕಾರಿಗಳ ಸ್ಪಷ್ಟನೆ ಇನ್ನೂ ಮುಖ್ಯವಾಗಿದೆ. ಇದನ್ನೂ ಓದಿ: ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು – ಡಿಸಿ ಕಚೇರಿ ಮುತ್ತಿಗೆಗೆ BJP ಕಾರ್ಯಕರ್ತರ ಯತ್ನ; 40 ಮಂದಿ ವಿರುದ್ಧ FIR

