ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತದ ಚುನಾವಣಾ ವ್ಯವಸ್ಥೆಯನ್ನು (India’s Electoral System) ಶ್ಲಾಘಿಸಿದ್ದು, ಅಮೆರಿಕದ ಚುನಾವಣೆಗಳಲ್ಲಿ ಪೌರತ್ವ ಮತ್ತು ಮತದಾರರ ಗುರುತಿನ ಪುರಾವೆಗಳನ್ನು ಕಡ್ಡಾಯಗೊಳಿಸುವ ಸೇವ್ ಅಮೆರಿಕಾ ಕಾಯ್ದೆಯನ್ನು ಅಂಗೀಕರಿಸಬೇಕೆಂದು ಕರೆ ನೀಡಿದ್ದಾರೆ.
ಟ್ರೂತ್ ಸೋಶಿಯಲ್‌ನಲ್ಲಿನ ಪೋಸ್ಟ್‌ನಲ್ಲಿ ಟ್ರಂಪ್, ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಇತ್ತೀಚಿನ ಸಂಭಾಷಣೆಯನ್ನು ಉಲ್ಲೇಖಿಸಿದ್ದಾರೆ. ಭಾರತದಲ್ಲಿ ಮತದಾರರಿಗೆ ಫೋಟೊ ಗುರುತಿನ ಚೀಟಿ ಬಳಸುವ ವಿಚಾರವನ್ನು ಟ್ರಂಪ್ ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ 1 ಕೋಟಿ ಮತದಾರರಲ್ಲಿ ಅರ್ಧಕ್ಕರ್ಧ ಔಟ್ – ಎಸ್‌ಐಆರ್‌ನಲ್ಲಿ ಮಹಾ ಲೋಪವೆಂದ ಕಾಂಗ್ರೆಸ್
ಮಾನ್ಯವಾದ ಫೋಟೊ ಐಡಿ ಇಲ್ಲದೇ ನೀವು ಅಮೆರಿಕದಲ್ಲಿ ಚುನಾವಣೆಗಳನ್ನು ನಡೆಸಲು ಹೇಗೆ ಸಾಧ್ಯ ಎಂದು ನಮ್ಮ ಆಡಳಿತವನ್ನು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕೇಳಿದ್ದರೆಂದು ಟ್ರಂಪ್ ತಿಳಿಸಿದ್ದಾರೆ.
ಕಳೆದ ಸಾರ್ವತ್ರಿಕ ಚುನಾವಣೆಯನ್ನು ಉಲ್ಲೇಖಿಸುತ್ತಾ ಟ್ರಂಪ್, ಭಾರತದ ಕಳೆದ ಚುನಾವಣೆಯಲ್ಲಿ 646,000,000 ಮತದಾರರಿದ್ದರು. ಶೇ. 1 ಕ್ಕಿಂತ ಕಡಿಮೆ ಜನರು ಮೇಲ್ ಮೂಲಕ ಮತ ಚಲಾಯಿಸಿದ್ದಾರೆ. ಅಲ್ಲಿ ಪ್ರತಿಯೊಬ್ಬ ಮತದಾರರು ಮಾನ್ಯ ಫೋಟೊ ಗುರುತಿನ ದಾಖಲೆಯನ್ನು ಹೊಂದಿರಲೇಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಸ್‌ಐಆರ್‌ಗೆ ಸಮ್ಮತಿಸಿ ಸುಪ್ರೀಂ ಕೋರ್ಟ್ ಆದೇಶ
ನಾವು ಈಗಲೇ ದಿ ಸೇವ್ ಅಮೆರಿಕಾ ಆಕ್ಟ್ ಅನ್ನು ಅಂಗೀಕರಿಸಬೇಕಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಶ್ವೇತಭವನದ ಪ್ರಕಾರ, ಪ್ರಸ್ತಾವಿತ ಶಾಸನವು ಫೆಡರಲ್ ಚುನಾವಣೆಗಳಲ್ಲಿ ಅಮೆರಿಕದ ನಾಗರಿಕರು ಮಾತ್ರ ಮತ ಚಲಾಯಿಸಲು ಅರ್ಹರಾಗಿರುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ.

