ನವದೆಹಲಿ: ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದೆ.
ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಎಸ್‌ಐಆರ್ ಅಗತ್ಯ ಅಂತ ಸಿಜೆ ಸೂರ್ಯಕಾಂತ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಹೇಳಿದೆ. ಅಲ್ಲದೆ, ಚುನಾವಣಾ ಆಯೋಗಕ್ಕೆ ಈ ರೀತಿಯ ಎಸ್‌ಐಆರ್ ನಡೆಸುವ ಸಂಪೂರ್ಣ ಅಧಿಕಾರ ಇದೆ ಅಂತ ಸ್ಪಷ್ಟಪಡಿಸಿದೆ. ಈ ಮೂಲಕ ಎಸ್‌ಐಆರ್ ಪ್ರಕ್ರಿಯೆ ವಿರುದ್ಧ ಎದ್ದಿದ್ದ ರಾಜಕೀಯ ಹಾಗೂ ಕಾನೂನು ಹೋರಾಟಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ತೆರೆ ಎಳೆದಿದೆ.
ಚುನಾವಣಾ ಆಯೋಗದ ಅಧಿಕಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ತಳ್ಳಿಹಾಕಿದ ನ್ಯಾಯಪೀಠ, ಎಸ್‌ಐಆರ್ ಕ್ರಮವು ಕಾನೂನುಬದ್ಧವಾಗಿದ್ದು, ಇದು ಸ್ವಚ್ಛ ಮತ್ತು ನ್ಯಾಯಸಮ್ಮತ ಚುನಾವಣೆಗೆ ಸಹಕಾರಿಯಾಗುತ್ತದೆ. ಚುನಾವಣಾ ಆಯೋಗ ತನ್ನ ಅಧಿಕಾರ ವ್ಯಾಪ್ತಿ ಮೀರಿಲ್ಲ ಅಂದಿದೆ. ಇದೇ ವೇಳೆ, ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟರೆ ಪೌರತ್ವ ರದ್ದಾಗಲ್ಲ ಅಂತಲೂ ಸುಪ್ರೀಂಕೋರ್ಟ್ ಹೇಳಿದೆ. ಅಲ್ಲದೆ, ಈ ಪ್ರಕ್ರಿಯೆಯಲ್ಲಿ ಪೌರತ್ವದ ಪ್ರಶ್ನೆ ಎದುರಾದಾಗ ಚುನಾವಣಾ ಆಯೋಗದ ವ್ಯಾಪ್ತಿ ಎಷ್ಟು ಎಂಬುದರ ಕುರಿತು ನ್ಯಾಯಾಲಯವು ಕೆಲವು ಕಟ್ಟುನಿಟ್ಟಾದ ಮಿತಿಗಳನ್ನು ವಿಧಿಸಿದೆ.
ಜನಪ್ರತಿನಿಧಿ ಕಾಯ್ದೆಯಡಿಯಲ್ಲಿ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವ ಅಥವಾ ಕೈಬಿಡುವ ಸೀಮಿತ ಉದ್ದೇಶಕ್ಕಾಗಿ ಮಾತ್ರ ಪೌರತ್ವದ ಬಗ್ಗೆ ಪರಿಶೀಲಿಸುವ ಅಧಿಕಾರವಿದೆಯೇ ಹೊರತು, ಒಬ್ಬ ವ್ಯಕ್ತಿಯು ದೇಶದ ಪ್ರಜೆಯೋ ಅಥವಾ ಪ್ರಜೆಯಲ್ಲವೋ ಎಂದು ಅಂತಿಮವಾಗಿ ತೀರ್ಮಾನಿಸುವ ಅಧಿಕಾರ ಆಯೋಗಕ್ಕಿಲ್ಲ ಎಂದಿದೆ.
