– ಕೆ.ಪಿ.ನಾಗರಾಜ್
ಇತಿಹಾಸ ಯಾವತ್ತೂ ವೇದಿಕೆಯ ಮೇಲಿದ್ದವರ ಹೆಸರನ್ನೇ ನೆನಪಿಟ್ಟುಕೊಳ್ಳುತ್ತದೆ. ವೇದಿಕೆಯ ಹಿಂದೆ ನಿಂತವರನ್ನು ಬಹಳ ಬಾರಿ ಮರೆತುಬಿಡುತ್ತದೆ. ದೇವೇಗೌಡರು (HD Deve Gowda) ಪ್ರಧಾನಿಯಾದ ದಿನ ಇಡೀ ದೇಶ ಅವರ ಹೆಸರನ್ನು ನೆನಪಿಸಿಕೊಂಡಿತು. ಕುಮಾರಸ್ವಾಮಿ ಮುಖ್ಯಮಂತ್ರಿ ಆದ ದಿನ ಕರ್ನಾಟಕ ಅವರ ಹೆಸರನ್ನು ಕೂಗಿತು. ಈ ಕುಟುಂಬದ ರಾಜಕೀಯದ ಬಗ್ಗೆ ಸಾವಿರಾರು ಪುಟಗಳು ಬರೆಯಲ್ಪಟ್ಟಿವೆ. ಆದರೆ ಆ ಎಲ್ಲ ಪುಟಗಳ ನಡುವೆ ಕಾಣಿಸದ ಒಂದು ಹೆಸರು ಇತ್ತು. ಆ ಹೆಸರೇ ಚೆನ್ನಮ್ಮ. ಅವರು ಸುದ್ದಿಯಾಗಲಿಲ್ಲ. ಭಾಷಣ ಮಾಡಲಿಲ್ಲ. ಅಧಿಕಾರದ ಕುರ್ಚಿಯಲ್ಲಿ ಕುಳಿತುಕೊಳ್ಳಲಿಲ್ಲ. ಆದರೆ ಅಧಿಕಾರದಲ್ಲಿದ್ದವರ ಮನೆ ಕುಸಿಯದಂತೆ ನೋಡಿಕೊಂಡರು. ಅದೇ ಅವರ ಬದುಕಿನ ದೊಡ್ಡ ಸಾಧನೆ.
ರಾಜಕೀಯದಲ್ಲಿ ಅಧಿಕಾರ ಸಿಗುವುದು ಕಷ್ಟ. ಆದರೆ ಅಧಿಕಾರವನ್ನು ಜೀರ್ಣಿಸಿಕೊಳ್ಳುವುದು ಅದಕ್ಕಿಂತ ಕಷ್ಟ. ಹುದ್ದೆ ಬಂದರೆ ಚಪ್ಪಾಳೆಗಳು ಬರುತ್ತವೆ. ಅನುಯಾಯಿಗಳು ಬರುತ್ತಾರೆ. ಅಭಿನಂದನೆಗಳು ಬರುತ್ತವೆ. ಆದರೆ ಅದೇ ಅಧಿಕಾರ ಮನೆ ಬಾಗಿಲು ದಾಟಿ ಒಳಗೆ ಬಂದರೆ, ಅನೇಕ ಕುಟುಂಬಗಳು ಮೌನವಾಗಿ ಒಡೆಯುತ್ತವೆ. ಒಂದು ಟಿಕೆಟ್ ಅಣ್ಣ-ತಮ್ಮನನ್ನು ದೂರ ಮಾಡುತ್ತದೆ. ಒಂದು ಕುರ್ಚಿ ತಂದೆ-ಮಗನ ನಡುವೆ ಅಂತರ ಬೆಳೆಸುತ್ತದೆ. ಒಂದು ಚುನಾವಣೆ ರಕ್ತದ ಸಂಬಂಧಕ್ಕೂ ರಾಜಕೀಯದ ಬಣ್ಣ ಹಚ್ಚಿಬಿಡುತ್ತದೆ. ಆದರೆ ಈ ಎಲ್ಲ ಬಿರುಗಾಳಿಗಳ ಮಧ್ಯೆಯೂ ಒಂದು ಕುಟುಂಬವನ್ನು ಕುಟುಂಬವಾಗಿಯೇ ಉಳಿಸಿಕೊಳ್ಳುವುದು ರಾಜಕೀಯದಿಂದ ಸಾಧ್ಯವಿಲ್ಲ. ಅದು ಒಬ್ಬ ಮಹಿಳೆಯ ಸಹನೆಯಿಂದ ಮಾತ್ರ ಸಾಧ್ಯ. ಆ ಸಹನೆಯ ಹೆಸರು
ಚೆನ್ನಮ್ಮ.
ಹಾಸನದ ಹಳ್ಳಿಯ ಮಣ್ಣಿನಿಂದ ದೇವೇಗೌಡರು ರಾಜಕೀಯ ಪಯಣ ಆರಂಭಿಸಿದಾಗ, ಅವರ ಜೊತೆ ಯಾವುದೇ ಅಧಿಕಾರ ಇರಲಿಲ್ಲ. ಇದ್ದದ್ದು ಕನಸು. ಇದ್ದದ್ದು ಹೋರಾಟ. ಇದ್ದದ್ದು ನಂಬಿಕೆ. ಆ ನಂಬಿಕೆಗೆ ಮತ್ತೊಂದು ಹೆಸರು ಚೆನ್ನಮ್ಮ. ರಾಜಕೀಯದಲ್ಲಿ ಇರುವ ಗಂಡನನ್ನು ಮದುವೆಯಾಗುವುದು ಎಂದರೆ, ಒಬ್ಬ ಮನುಷ್ಯನನ್ನು ಮದುವೆಯಾಗುವುದಲ್ಲ. ಒಂದು ಹೋರಾಟವನ್ನು ಮದುವೆಯಾಗುವುದು. ಅನಿಶ್ಚಿತತೆಯನ್ನು ಮದುವೆಯಾಗುವುದು. ಕಾಯುವುದನ್ನು ಮದುವೆಯಾಗುವುದು. ಅವರು ಅದನ್ನೆಲ್ಲ ನಗುತ್ತಲೇ ಬದುಕಿದರು. ದೇವೇಗೌಡರು ಹಳ್ಳಿಯಿಂದ ಬೆಂಗಳೂರಿಗೆ ಹೋದರು. ಬೆಂಗಳೂರಿಂದ ದೆಹಲಿಗೆ ಹೋದರು. ಶಾಸಕರಾದರು, ಮುಖ್ಯಮಂತ್ರಿಯಾದರು, ಪ್ರಧಾನಿಯಾದರು. ಆದರೆ ಅವರು ಎಷ್ಟೇ ಎತ್ತರಕ್ಕೆ ಹೋದರೂ, ಹಿಂದಿರುಗಿ ಬರುವ ಮನೆ ಮಾತ್ರ ಬದಲಾಗಲಿಲ್ಲ. ಆ ಮನೆಯೊಳಗೆ ಅವರನ್ನು ಕಾಯುತ್ತಿದ್ದ ಮುಖ ಬದಲಾಗಲಿಲ್ಲ. ಅದು ಚೆನ್ನಮ್ಮ.

ಒಂದು ಸಾಮಾನ್ಯ ಮನೆಯನ್ನು ನಡೆಸುವುದೇ ಸುಲಭವಲ್ಲ. ಅದರಲ್ಲೂ ಒಂದು ರಾಜಕೀಯ ಮನೆಯನ್ನಾ? ಬೆಳಗ್ಗೆಯಿಂದ ರಾತ್ರಿ ತನಕ ಕಾರ್ಯಕರ್ತರ ಓಡಾಟ, ಬಂಧುಗಳ ಆಗಮನ. ಜನರ ಸಮಸ್ಯೆಗಳು. ಅಧಿಕಾರದ ಒತ್ತಡ, ಸೋಲಿನ ನಿರಾಶೆ, ಗೆಲುವಿನ ಸಂಭ್ರಮ, ಮಾಧ್ಯಮದ ಕಣ್ಣು ಇವೆಲ್ಲವೂ ಒಂದೇ ಮನೆಯೊಳಗೆ ಪ್ರತಿದಿನ ಉಸಿರಾಡುತ್ತಿರುತ್ತವೆ. ಅಂಥ ಮನೆಯಲ್ಲಿ ಅಡುಗೆ ಮಾಡುವವಳು ಮಾತ್ರ ಹೆಂಗಸಲ್ಲ, ಅವಳು ಸಂಬಂಧಗಳನ್ನು ಹೊಲಿಯುವವಳು, ಮನಸ್ಸುಗಳನ್ನು ಜೋಡಿಸುವವಳು. ಮಾತಿಗಿಂತ ಮೌನದಿಂದ ಸಮಸ್ಯೆಗಳನ್ನು ಬಗೆಹರಿಸುವವಳು. ಚೆನ್ನಮ್ಮ (Chennamma Deve Gowda) ಅವರು ಅದನ್ನೇ ಮಾಡಿದರು.
ಗಂಡ ದೇಶದ ಪ್ರಧಾನಿ. ಒಬ್ಬ ಮಗ ಎರಡು ಬಾರಿ ಮುಖ್ಯಮಂತ್ರಿ. ಇನ್ನೊಬ್ಬ ಮಗ ರಾಜ್ಯ ರಾಜಕಾರಣದ ಪ್ರಭಾವಿ ನಾಯಕ. ಸೊಸೆ, ಮೊಮ್ಮಕ್ಕಳು ಎಲ್ಲರೂ ರಾಜಕೀಯ ಅಂಗಳದಲ್ಲೇ ನಿಂತವರು. ಇವರ ಎಲ್ಲಾ ಅಹಂ, ಆಸೆ, ಒತ್ತಡ, ನಿರೀಕ್ಷೆ, ನೋವು ಇವೆಲ್ಲವನ್ನೂ ಒಂದೇ ಊಟದ ತಟ್ಟೆಯ ಮುಂದೆ ಕೂರಿಸಿ, ‘ಮೊದಲು ಊಟ ಮಾಡಿ’ ಎಂದು ಹೇಳುವುದು ಎಷ್ಟು ಕಷ್ಟ ಎನ್ನುವುದು ಮನೆಯ ಮಹಿಳೆಗೆ ಮಾತ್ರ ಗೊತ್ತು. ಆ ಕೆಲಸವನ್ನು ಮಾಡಿದವರು ಚೆನ್ನಮ್ಮ. ಚೆನ್ನಮ್ಮ ಅವರ ರಾಜಕೀಯ ಅಧಿಕಾರ ಶೂನ್ಯ. ಆದರೆ ಅವರ ನೈತಿಕ ಅಧಿಕಾರ ಅಪಾರ. ಅದಕ್ಕೆ ಯಾವುದೇ ಪ್ರಮಾಣವಚನ ಬೇಕಾಗಲಿಲ್ಲ. ಯಾವ ಹುದ್ದೆಯೂ ಬೇಕಾಗಲಿಲ್ಲ. ಅವರು ಮನೆಯ ಕೇಂದ್ರವಾಗಿದ್ದರು ಅಷ್ಟೇ.
ನಾವು ದೇವೇಗೌಡರನ್ನು ನೋಡಿದ್ದೇವೆ. ಕುಮಾರಸ್ವಾಮಿಯನ್ನು ನೋಡಿದ್ದೇವೆ. ಈ ಕುಟುಂಬದ ರಾಜಕೀಯದ ಏರಿಳಿತಗಳನ್ನು ನೋಡಿದ್ದೇವೆ. ಆದರೆ ಈ ಎಲ್ಲ ನಾಯಕರು ಸಂಜೆ ಮನೆಗೆ ಬಂದಾಗ, ಅವರು ಮೊದಲು ರಾಜಕಾರಣಿಗಳಾಗಿರಲಿಲ್ಲ. ಅವರು ಗಂಡ, ಮಕ್ಕಳು, ಮೊಮ್ಮಕ್ಕಳು. ಆ ಮನೆಯನ್ನು ಮತ್ತೆ ಮನೆ ಮಾಡುವ ಕೆಲಸವನ್ನು ಪ್ರತಿದಿನ ಮಾಡುತ್ತಿದ್ದವರು ಚೆನ್ನಮ್ಮ. ಕೆಲವು ಮರಗಳು ಹಣ್ಣು ಕೊಡುವುದರಿಂದ ದೊಡ್ಡದಾಗುವುದಿಲ್ಲ, ನೆರಳು ಕೊಡುವುದರಿಂದ ದೊಡ್ಡದಾಗುತ್ತವೆ. ಕೆಲವು ಮಹಿಳೆಯರು ಹೆಸರು ಮಾಡುವುದರಿಂದ ದೊಡ್ಡವರಾಗುವುದಿಲ್ಲ, ಹೆಸರು ಮಾಡಿದವರನ್ನು ಕಾಪಾಡುವುದರಿಂದ ದೊಡ್ಡವರಾಗುತ್ತಾರೆ. ಚೆನ್ನಮ್ಮ ಅಂಥ ಆಲದಮರ.

ದೇವೇಗೌಡರು ದೇಶವನ್ನು ಮುನ್ನಡೆಸಿದರು. ಕುಮಾರಸ್ವಾಮಿ ರಾಜ್ಯವನ್ನು ಮುನ್ನಡೆಸಿದರು. ಈ ಕುಟುಂಬದವರು ರಾಜಕೀಯವನ್ನೇ ಮುನ್ನಡೆಸಿದರು. ಆದರೆ ಈ ಎಲ್ಲರಿಗೂ ನೆಮ್ಮದಿಯಾಗಿ ಹಿಂದಿರುಗುವ ಒಂದು ಮನೆ ಇತ್ತು. ಆ ಮನೆಯ ಹೆಸರೇ ಚೆನ್ನಮ್ಮ. ಇಂದು ಆ ಮನೆ ಅದೇ ಇದೆ. ಗೋಡೆಗಳು ಅದೇ ಇವೆ. ಅಂಗಳ ಅದೇ ಇದೆ. ಚಿತ್ರಗಳು ಅದೇ ಇವೆ. ಆದರೆ ಮನೆಯೊಳಗಿನ ಗಾಳಿ ಮಾತ್ರ ಬದಲಾಗಿರುತ್ತದೆ. ಯಾಕೆಂದರೆ ಮನೆಯೊಳಗೆ ಮನೆ ಬೆಳಕು ಆರಿದೆ.
ಕೆಲವು ಬದುಕುಗಳು ಪ್ರಶಸ್ತಿಗಳಿಗಾಗಿ ಬದುಕುವುದಿಲ್ಲ. ಕೆಲವು ಬದುಕುಗಳು ಇತಿಹಾಸದ ಪುಟಗಳಿಗಾಗಿ ಬದುಕುವುದಿಲ್ಲ. ಅವು ಒಂದು ಕುಟುಂಬದ ಉಸಿರಾಗಿರಲು ಬದುಕುತ್ತವೆ. ಚೆನ್ನಮ್ಮ ಅವರು ಅಂತಹ ಬದುಕು. ಅವರು ಕೇವಲ ದೇವೇಗೌಡರ ಪತ್ನಿಯಾಗಿರಲಿಲ್ಲ. ಅವರು ಒಂದು ರಾಜಕೀಯ ಕುಟುಂಬದ ಮೌನದ ಬೆನ್ನೆಲುಬು. ಒಂದು ಮನೆಯ ಆತ್ಮ. ಒಂದು ಮನೆಯ ಆಲದಮರ. ಆ ಆಲದಮರ ಬಿದ್ದಿದೆ. ಈಗ ನೆರಳಿನ ಬೆಲೆ ಎಲ್ಲರಿಗೂ ಗೊತ್ತಾಗುತ್ತದೆ.
