ನ್ಯೂಯಾರ್ಕ್: ಫಿಫಾ ವಿಶ್ವಕಪ್ 2026ರ (FIFA WorldCup 2026) ಫೈನಲ್ ಪಂದ್ಯದ ಅತ್ಯಂತ ದೊಡ್ಡ ಆಕರ್ಷಣೆ ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ (Lionel Messi). ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ಸ್ಪೇನ್ ಮತ್ತು ಅರ್ಜೆಂಟೀನಾ ನಡುವೆ ನಡೆಯಲಿರುವ ಅಂತಿಮ ಹಣಾಹಣಿ 39ರ ಹರೆಯದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಪಾಲಿಗೆ ಕೊನೇ ವಿಶ್ವಕಪ್ ಪಂದ್ಯವಾಗುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.

ಮುಂದಿನ ವಿಶ್ವಕಪ್ ವೇಳೆ ಅವರಿಗೆ 43 ವರ್ಷ ವಯಸ್ಸಾಗಿರುತ್ತದೆ. ಆ ವಯಸ್ಸಿನಲ್ಲಿ ಅವರು ಮತ್ತೊಂದು ವಿಶ್ವಕಪ್‌ಗೆ ಮರಳುವುದು ಕೊಂಚ ಕಷ್ಟದ ಮಾತು. ಹೀಗಾಗಿ ಈ ಬಾರಿ ಫೈನಲ್ ಪಂದ್ಯದ ಬಳಿಕ ಮೆಸ್ಸಿ ನಿವೃತ್ತಿ ಹೇಳುವ ಸಾಧ್ಯತೆ ಹೆಚ್ಚಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಆದ್ರೆ ಈ ಬಗ್ಗೆ ಮೆಸ್ಸಿ ಈ ವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

2026ರ ಫಿಫಾ ವಿಶ್ವಕಪ್‌ನಲ್ಲಿ ಈಗಾಗಲೇ 8 ಗೋಲು ಮತ್ತು 4 ಅಸಿಸ್ಟ್‌ಗಳನ್ನು ನೀಡುವ ಮೂಲಕ ಮೆಸ್ಸಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮೆಸ್ಸಿ ಹಲವು ಐತಿಹಾಸಿಕ ದಾಖಲೆಗಳನ್ನು ಮುರಿಯಲು ಸಜ್ಜಾಗಿದ್ದಾರೆ.
