ತುಮಕೂರು: ಶಾಲಾ ಆವರಣದಲ್ಲಿ 10 ವರ್ಷದ ವಿದ್ಯಾರ್ಥಿಯೊಬ್ಬ (Student Death) ಆಟವಾಡುತ್ತಿದ್ದ ವೇಳೆ ಪಿಲ್ಲರ್ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ (Building pillar Collapse ) ಚಿಕ್ಕನಾಯಕನಹಳ್ಳಿ ತಾಲೂಕಿನ ಬೆಳಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮತ್ತಿಘಟ್ಟ ಗ್ರಾಮದ ಆನಂದ್ ಮೂರ್ತಿ ಅವರ ಮಗ ಧನುಷ್ (10) ಮೃತ ವಿದ್ಯಾರ್ಥಿ. ಧನುಷ್ ಬೆಳಗಿಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ.
ಇಂದು ಬೆಳಗ್ಗೆ ಎಂದಿನಂತೆ ಧನುಷ್ ಶಾಲೆಗೆ ಬಂದಿದ್ದ. ಶಾಲೆ ಆರಂಭವಾಗುವ ಮುನ್ನ ಸ್ನೇಹಿತರ ಜೊತೆ ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ. ಈ ವೇಳೆ ಶಾಲೆಯ ಪಕ್ಕದಲ್ಲಿರುವ ನಂದಿನಿ ಹಾಲಿನ ಡೈರಿ ಕಟ್ಟಡದ ಪಿಲ್ಲರ್ ಏಕಾಏಕಿ ಕುಸಿದು ಧನುಷ್ ಮೇಲೆ ಬಿದ್ದಿದೆ. ಪಿಲ್ಲರ್ ನೇರವಾಗಿ ತಲೆಯ ಮೇಲೆ ಬಿದ್ದ ಪರಿಣಾಮ ಧನುಷ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೆಳಗ್ಗೆ ಸುಮಾರು 9:30ರ ವೇಳೆಗೆ ಈ ದುರ್ಘಟನೆ ನಡೆದಿದೆ. ಇದನ್ನೂ ಓದಿ: ಕೇಸ್ ಇತ್ಯರ್ಥಕ್ಕೆ ಲಂಚಕ್ಕೆ ಕೈಯೊಡ್ಡಿದ ಪಿಎಸ್‌ಐ ʻಲೋಕಾʼ ಬಲೆಗೆ
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಹಂದನಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಟ್ಟಡದ ಕಾಮಗಾರಿ ಕಳಪೆಯಾಗಿದ್ದರಿಂದಲೇ ಪಿಲ್ಲರ್ ಕುಸಿದಿದೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.ಇದನ್ನೂ ಓದಿ: ಗಾಂಜಾ ಮತ್ತಲ್ಲಿ ವಿದ್ಯಾರ್ಥಿಗೆ ಮಾರಣಾಂತಿಕ ಹಲ್ಲೆ – ವಿಡಿಯೋ ವೈರಲ್

