ರಾಯಚೂರು: ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಲು ಕಾರಣರಾದ 17 ಜನ ಶಾಸಕರು ಹಾಗೂ ಮಾಜಿ ಶಾಸಕರಿಗೂ ಸಚಿವ ಸ್ಥಾನ ನೀಡಬೇಕು ಎಂದು ಮಾಜಿ ಶಾಸಕ ಹೆಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ.
ದೇವದುರ್ಗದ ತಿಂಥಿಣಿಯಲ್ಲಿ ನಾಳೆ ನಡೆಯಲಿರುವ ಹಾಲುಮತ ಸಾಂಸ್ಕೃತಿಕ ಉತ್ಸವದ ನಿಮಿತ್ತ ಆಗಮಿಸಿರುವ ಹೆಚ್.ವಿಶ್ವನಾಥ್ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟ ವಿಸ್ತರಣೆಯಾದರೆ 17 ಜನರಿಗೂ ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ. ಮೈತ್ರಿ ಸರ್ಕಾರವನ್ನು ಅಧಿಕಾರದಿಂದ ಇಳಿಸಿ ಜನಪರ ಸರ್ಕಾರ ಅಧಿಕಾರ ಹಿಡಿಯುವಲ್ಲಿ 17 ಜನ ಮಾಜಿ ಹಾಗೂ ಹಾಲಿ ಶಾಸಕರು ಕಾರಣವಾಗಿದ್ದಾರೆ. ಉಪ ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ನೀಡಬಾರದೆಂದು ಯಾವುದೇ ಕೋರ್ಟ್ ಹೇಳಿಲ್ಲ. ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೆ ಮುಂದೆ ನೋಡೋಣ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಹೆಚ್.ವಿಶ್ವನಾಥ್ಗೆ ಸರ್ಕಾರದ ಶಾಕ್
Advertisement
Advertisement
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳೂರು ಗಲಭೆ ಕುರಿತು ಸಿಡಿ ಬಿಡುಗಡೆ ಮಾಡಿರುವ ಕುರಿತು ಮಾತಮಾಡಿದ ವಿಶ್ವನಾಥ್ ಅವರು, ಅಧಿಕಾರ ಕಳೆದುಕೊಂಡ ನಂತರ ಅವರು ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದಾರೆ. ತಾವು ಒಬ್ಬ ರಾಜ್ಯದ ನಾಯಕ ಎನ್ನುವುದನ್ನು ತೋರಿಸಿಕೊಳ್ಳಲು ಹೀಗೆ ಹೇಳುತ್ತಿದ್ದಾರೆ. ಇಷ್ಟು ದಿನಗಳ ಬಳಿಕ ಸಿಡಿ ಬಿಡುಗಡೆ ಮಾಡುವ ಅವಶ್ಯಕತೆ ಇರಲಿಲ್ಲ. ಈ ಸಿಡಿಗಳೇ ನಕಲಿ ಎಂದು ಹೇಳಿದರು.