ಬೆಂಗಳೂರು: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ(International Yoga Day) ಅಂಗವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೂ (Jail) ವಿಶೇಷ ಯೋಗಾಭ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೊಲೆ ಪ್ರಕರಣದ ಆರೋಪಿಯಾಗಿ ಸದ್ಯ ಜೈಲು ಪಾಲಾಗಿರುವ ನಟ ದರ್ಶನ್ (Darshan) ಹಾಗೂ ಅವರ ಗ್ಯಾಂಗ್ ಈ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದಾರೆ.
ಕಾರಾಗೃಹದ ಎಲ್ಲಾ ಕೈದಿಗಳಿಗಾಗಿ ಸಾಮೂಹಿಕ ಯೋಗಾಭ್ಯಾಸ ಹಮ್ಮಿಕೊಳ್ಳಲಾಗಿತ್ತು. ಆದರೆ, ತಮಗೆ ತೀವ್ರ ಬೆನ್ನು ನೋವಿನ (Back Pain) ಸಮಸ್ಯೆ ಇದೆ ಎಂದು ಹೇಳಿದ್ದ ನಟ ದರ್ಶನ್, ಆರಂಭದಲ್ಲಿ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲು ನಿರಾಕರಿಸಿದ್ದರು.
ಈ ವಿಷಯ ತಿಳಿದ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿ ಅಲೋಕ್ ಕುಮಾರ್ (Alok Kumar) ಅವರು ದರ್ಶನ್ ಅವರನ್ನು ಕಚೇರಿಗೆ ಕರೆಸಿಕೊಂಡು ಮಾತನಾಡಿದರು.”ಬೆನ್ನು ನೋವಿನ ಸಮಸ್ಯೆ ಇದ್ದರೆ ಯೋಗ ಮಾಡುವುದರಿಂದಲೇ ಅದು ಗುಣವಾಗುತ್ತದೆ, ಆರೋಗ್ಯಕ್ಕೂ ತುಂಬಾ ಒಳ್ಳೆಯದು” ಎಂದು ದರ್ಶನ್ ಅವರಿಗೆ ಮನವರಿಕೆ ಮಾಡಿಕೊಟ್ಟು, ಯೋಗ ಮಾಡುವಂತೆ ಸಲಹೆ ನೀಡಿದರು. ಇದನ್ನೂ ಓದಿ: ಯೋಗವು ಕೇವಲ ದೈಹಿಕ ಕಸರತ್ತಲ್ಲ, ಇದು ಮಾನವ ಚೇತನದ ಅದ್ಭುತ ಅಭಿವ್ಯಕ್ತಿ: ಮೋದಿ
ಇದೇ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಪವಿತ್ರಾ ಗೌಡ (Pavithra Gowda) ಅವರು ಮಹಿಳಾ ಕೈದಿಗಳ ವಿಭಾಗದಲ್ಲಿ ನಡೆದ ಸಾಮೂಹಿಕ ಯೋಗಾಭ್ಯಾಸದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಜೈಲಿನ ಇತರ ಮಹಿಳಾ ಕೈದಿಗಳ ಜೊತೆ ಸಾಲಿನಲ್ಲಿ ಕುಳಿತು ಪವಿತ್ರಾ ಗೌಡ ಅವರು ಯೋಗ ಮತ್ತು ಧ್ಯಾನ ಮಾಡಿದರು. ಪರಪ್ಪನ ಅಗ್ರಹಾರ ಜೈಲಿನ ಇತಿಹಾಸದಲ್ಲೇ ಹೈಪ್ರೊಫೈಲ್ ಕೈದಿಗಳು ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದು ಇದೇ ಮೊದಲು ಎನ್ನಲಾಗಿದೆ.
