– ವೆರಿಫಿಕೇಷನ್ ಆಡಿಟ್ ಬಳಿಕ ಫಲಾನುಭವಿಗಳ ಸಂಖ್ಯೆ 38% ಇಳಿಕೆ
– 14,000 ಪುರುಷರಿಂದ ಯೋಜನೆಯ ಪ್ರಯೋಜನ ಪಡೆಯಲು ಯತ್ನ
ಮುಂಬೈ: ಕರ್ನಾಟಕದ (Karnataka) ಗೃಹಲಕ್ಷ್ಮೀ ಯೋಜನೆಯಲ್ಲಿ ನಡೆದ ಫಲಾನುಭವಿಗಳ ಪರಿಷ್ಕರಣೆ ಮಾದರಿಯಲ್ಲಿ ಮಹಾರಾಷ್ಟ್ರ ಸರ್ಕಾರವು `ಮುಖ್ಯಮಂತ್ರಿ ಮಾಝಿ ಲಾಡ್ಕಿ ಬಹಿನ್ ಯೋಜನೆ’ಯ (Ladki Bahin) ಫಲಾನುಭವಿಗಳ ಸಮಗ್ರ ಪರಿಶೀಲನೆ ನಡೆಸಿದ ಬಳಿಕ 92 ಲಕ್ಷ ಮಹಿಳೆಯರನ್ನು ಯೋಜನೆಯಿಂದ ಕೈಬಿಟ್ಟಿದೆ. ಇದು ಯೋಜನೆಯ ಗರಿಷ್ಠ 2.43 ಕೋಟಿ ಫಲಾನುಭವಿಗಳ ಪೈಕಿ ಸುಮಾರು 38% ಆಗಿದೆ.
ಆರ್‌ಟಿಐ ದಾಖಲೆಗಳ ಮಾಹಿತಿ ಪ್ರಕಾರ, ಸರ್ಕಾರ ನಡೆಸಿದ ಇ-ಕೆವೈಸಿ (E-KYC) ಹಾಗೂ ಅರ್ಹತಾ ಪರಿಶೀಲನೆಯಲ್ಲಿ ಅನರ್ಹರು ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.ಇದನ್ನೂ ಓದಿ: ವಯನಾಡಿನಲ್ಲಿ ಭೂಕುಸಿತವಾದರೂ ಪ್ರಿಯಾಂಕಾ ಗಾಂಧಿ ಏಕೆ ಬರಲಿಲ್ಲ? – ಬಿಜೆಪಿ ಪ್ರಶ್ನೆ
ಇ-ಕೆವೈಸಿ ಪೂರ್ಣಗೊಳಿಸದ 62 ಲಕ್ಷ ಮಹಿಳೆಯರು, ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ರೂ.ಗಿಂತ ಹೆಚ್ಚಿರುವ 16 ಲಕ್ಷ, ಸರ್ಕಾರಿ ನೌಕರರ ಕುಟುಂಬದ ಸದಸ್ಯರಾಗಿರುವ 4.42 ಲಕ್ಷ, ಇತರೆ ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯುತ್ತಿದ್ದ 3.6 ಲಕ್ಷ, ಒಂದೇ ಕುಟುಂಬದಲ್ಲಿ ಇಬ್ಬರಿಗಿಂತ ಹೆಚ್ಚು ಫಲಾನುಭವಿಗಳಿರುವ 2.5 ಲಕ್ಷ, 65 ವರ್ಷ ಮೇಲ್ಪಟ್ಟ 1.8 ಲಕ್ಷ, ಜಿಲ್ಲಾಮಟ್ಟದ ಪರಿಶೀಲನೆಯಲ್ಲಿ ಅನರ್ಹರೆಂದು ಗುರುತಿಸಲ್ಪಟ್ಟಿದೆ.
ಹಿರಿಯ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಸರ್ಕಾರವು ಫಲಾನುಭವಿಗಳಿಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸುಮಾರು ಎಂಟು ತಿಂಗಳ ಅವಧಿಯನ್ನು ನೀಡಿತ್ತು. ಆ ಸಮಯದಲ್ಲಿ ಅನೇಕ ಮಹಿಳೆಯರು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿಫಲರಾಗಿದ್ದಾರೆ. ಇದರ ಪರಿಣಾಮವಾಗಿ ಸುಮಾರು 55 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಸದ್ಯ ಮರು ಪರಿಶೀಲನೆ ಪ್ರಕ್ರಿಯೆಯ ನಂತರವೇ ಅಂತಿಮ ಫಲಾನುಭವಿಗಳ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಅಧಿಕಾರಿಗಳ ಅಂದಾಜಿನ ಪ್ರಕಾರ, ಯೋಜನೆಯಡಿ ಅನರ್ಹವಾಗಿ ಹಣ ಪಡೆದಿದ್ದವರಿಗೆ ಇದುವರೆಗೆ ಸುಮಾರು 14 ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತ ಪಾವತಿಯಾಗಿದ್ದು, ಸುಮಾರು 10 ತಿಂಗಳುಗಳ ಕಾಲ ಲಾಭ ಪಡೆದಿದ್ದಾರೆ. ಪರಿಶೀಲನೆಯ ಬಳಿಕ ಮುಂದಿನ ಕಂತುಗಳನ್ನು ಸ್ಥಗಿತಗೊಳಿಸಲಾಗಿದೆ. ಇನ್ನೂ 14,000 ಪುರುಷರು ಯೋಜನೆಯ ಪ್ರಯೋಜನ ಪಡೆಯಲು ಯತ್ನಿಸಿದ್ದರು ಎನ್ನಲಾಗಿದೆ.ಇದನ್ನೂ ಓದಿ: ಬದರಿನಾಥ್ ದೇಣಿಗೆ ಕಳವು: ಪ್ರಮುಖ ಆರೋಪಿ ಡೆಹ್ರಾಡೂನ್‌ನಲ್ಲಿ ಅರೆಸ್ಟ್
