ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ, ಜಾಗತಿಕ ಮಟ್ಟದಲ್ಲಿ ಅತ್ಯಂತ ನಿರೀಕ್ಷೆ ಮೂಡಿಸಿರುವ ಟಾಕ್ಸಿಕ್ (Toxic) ಚಿತ್ರದ ಅಧಿಕೃತ ಬಿಡುಗಡೆಯ ದಿನಾಂಕ ಕೊನೆಗೂ ಘೋಷಣೆಯಾಗಿದೆ. ಹರಿದಾಡುತ್ತಿದ್ದ ಎಲ್ಲಾ ಊಹಾಪೋಹದ ಸುದ್ದಿಗಳಿಗೆ ಬ್ರೇಕ್ ಹಾಕಿದ ಯಶ್, ತಮ್ಮ ಬಹುನಿರೀಕ್ಷಿತ ಚಿತ್ರವನ್ನುಆಗಸ್ಟ್ 26ರಂದು ಪ್ರಪಂಚದಾದ್ಯಂತ ಅದ್ಧೂರಿಯಾಗಿ ರಿಲೀಸ್ ಮಾಡುವುದಾಗಿ ಪ್ರಕಟಿಸಿದ್ದಾರೆ.
ಈ ಚಿತ್ರವು ಇದೇ ಜೂನ್ 4 ರಂದು ತೆರೆಗೆ ಬರಬೇಕಿತ್ತು. ಆದರೆ ಜಾಗತಿಕ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಡುಗಡೆಯನ್ನು ಮುಂದೂಡಲಾಗಿತ್ತು. ಇತ್ತೀಚೆಗೆ ಅಮೆರಿಕದ ಲಾಸ್ ವೇಗಾಸ್‌ನಲ್ಲಿ ನಡೆದ ಪ್ರತಿಷ್ಠಿತ ‘ಸಿನಿಮಾಕಾನ್’ (CinemaCon) ಚಲನಚಿತ್ರ ಪ್ರದರ್ಶನದಲ್ಲಿ ಯಶ್ ಅವರು ಭಾಗವಹಿಸಿದ್ದರು.
ಹಾಲಿವುಡ್ ಹಾಗೂ ಅಂತರರಾಷ್ಟ್ರೀಯ ವಿತರಕರಿಂದ ಈ ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆ ಕಂಡು, ಸಿನಿಮಾದ ಬಿಸಿನೆಸ್ ಅನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ವಿಸ್ತರಿಸಲು ಯಶ್ ಮತ್ತು ಗೀತು ಮೋಹನ್‌ದಾಸ್ ತಂಡ ಹೊಸ ಮಾಸ್ಟರ್ ಪ್ಲಾನ್ ಮಾಡಿಕೊಂಡಿತು. ಅಂತರರಾಷ್ಟ್ರೀಯ ಮಟ್ಟದ ದೊಡ್ಡ ವಿತರಣಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಮಯ ಬೇಕಾಗಿದ್ದರಿಂದ ಚಿತ್ರದ ಬಿಡುಗಡೆ ದಿನಾಂಕವನ್ನು ಆಗಸ್ಟ್‌ಗೆ ಮುಂದೂಡಲಾಗಿದೆ.
View this post on Instagram
ಚಿತ್ರದ ಬಿಡುಗಡೆ ತಡವಾಗುತ್ತಿದ್ದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಟಾಕ್ಸಿಕ್ ಸಿನಿಮಾ ಮರುಚಿತ್ರೀಕರಣ ಮಾಡಲಾಗುತ್ತಿದೆ, ನಿರ್ದೇಶಕರ ಜೊತೆ ಭಿನ್ನಾಭಿಪ್ರಾಯವಿದೆ ಎಂಬ ನೆಗೆಟಿವ್ ವದಂತಿಗಳು ಹರಡಿದ್ದವು. ಆದರೆ ಈಗ ಯಶ್ ಅವರು ನೇರವಾಗಿ ಅಂತಿಮ ಬಿಡುಗಡೆಯ ದಿನಾಂಕವನ್ನು ಪ್ರಕಟಿಸುವ ಮೂಲಕ ಅಂತಹ ಎಲ್ಲಾ ಸುಳ್ಳು ಸುದ್ದಿಗಳ ಬಾಯಿ ಮುಚ್ಚಿಸಿದ್ದಾರೆ. ಸಿನಿಮಾ ಈಗಾಗಲೇ ಸಂಪೂರ್ಣ ಸಿದ್ಧವಾಗಿದ್ದು, ಕೇವಲ ಜಾಗತಿಕ ಪ್ರಚಾರ ಮತ್ತು ರಿಲೀಸ್ ಪ್ಲಾನಿಂಗ್ ಕೆಲಸಗಳು ನಡೆಯುತ್ತಿವೆ ಎಂದು ಟೀಮ್ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಟಾಕ್ಸಿಕ್‌ನಲ್ಲಿ ರುಕ್ಮಿಣಿ ವಸಂತ್ ಗ್ಲ್ಯಾಮರ್ ಲುಕ್ ಅನಾವರಣ
ಕೆವಿಎನ್ ಪ್ರೊಡಕ್ಷನ್ಸ್ (KVN Productions) ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಒಟ್ಟಿನಲ್ಲಿ ಆಗಸ್ಟ್ 26 ರಂದು ಬಾಕ್ಸ್ ಆಫೀಸ್‌ನಲ್ಲಿ ಯಶ್ ಅವರ ಜಾಗತಿಕ ಸಾಮ್ರಾಜ್ಯದ ಅಬ್ಬರ ಶುರುವಾಗುವುದು ಗ್ಯಾರಂಟಿ.
