ಬರ್ನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಬಹಿರಂಗ ದಾಳಿಯ ಬೆದರಿಕೆ ಹಾಗೂ ಕದನ ವಿರಾಮ ಮೀರಿ ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ (Isreal) ನಡೆಸಿದ ಭೀಕರ ವೈಮಾನಿಕ ದಾಳಿಯಿಂದ ಕೆರಳಿರುವ ಇರಾನ್ (Iran) ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯುತ್ತಿದ್ದ ಉನ್ನತ ಮಟ್ಟದ ಶಾಂತಿ ಮಾತುಕತೆಯಿಂದ ದಿಢೀರನೆ ಹೊರನಡೆದಿದೆ
ಈ ಹಠಾತ್ ಬೆಳವಣಿಗೆಯಿಂದಾಗಿ ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿಯುವ ಆತಂಕ ಎದುರಾಗಿದೆ.
ಸ್ವಿಟ್ಜರ್ಲೆಂಡ್‌ನಲ್ಲಿ ಉಭಯ ದೇಶಗಳ ಪ್ರತಿನಿಧಿಗಳ ನಡುವೆ ಅತ್ಯಂತ ಮಹತ್ವದ ಮತ್ತು ಸೂಕ್ಷ್ಮ ಹಂತದ ಸಂಧಾನ ಪ್ರಕ್ರಿಯೆಗಳು ನಡೆಯುತ್ತಿದ್ದವು. ಇದೇ ವೇಳೆ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗ ವಾಗ್ದಾಳಿ ನಡೆಸಿದ ಟ್ರಂಪ್, “ಲೆಬನಾನ್‌ನಲ್ಲಿರುವ ಇರಾನ್ ಬೆಂಬಲಿತ ಹೆಜ್ಬೊಲ್ಲಾ ಸಂಘಟನೆಯು ತಕ್ಷಣವೇ ದಾಳಿಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ, ಕಳೆದ ವಾರ ನಡೆಸಿದ್ದಕ್ಕಿಂತಲೂ ಭೀಕರವಾಗಿ ಇರಾನ್ ಮೇಲೆ ಮತ್ತೆ ಸೈನಿಕ ದಾಳಿ ನಡೆಸುತ್ತೇವೆ” ಎಂದು ನೇರ ಎಚ್ಚರಿಕೆ ನೀಡಿದ್ದರು. ಮಾತುಕತೆಯ ಮೇಜಿನ ಮೇಲಿರುವಾಗಲೇ ಅಮೆರಿಕ ಅಧ್ಯಕ್ಷರು ನೀಡಿದ ಈ ಬೆದರಿಕೆ ಇರಾನ್ ನಿಯೋಗವನ್ನು ತೀವ್ರವಾಗಿ ಕೆರಳಿಸಿತು.

ಅಮೆರಿಕ ಮತ್ತು ಇರಾನ್ ನಡುವೆ ಇತ್ತೀಚೆಗೆ ಏರ್ಪಟ್ಟಿದ್ದ ಕದನ ವಿರಾಮ ಒಪ್ಪಂದದ ನಿಯಮಗಳನ್ನು ಇಸ್ರೇಲ್ ಗಾಳಿಗೆ ತೂರಿರುವುದು ಇರಾನ್ ಆಕ್ರೋಶಕ್ಕೆ ಮತ್ತೊಂದು ಪ್ರಮುಖ ಕಾರಣ. ಒಪ್ಪಂದದ ಪ್ರಕಾರ ಇಸ್ರೇಲ್ ದಕ್ಷಿಣ ಲೆಬನಾನ್ ಮೇಲಿನ ದಾಳಿಗಳನ್ನು ಸ್ಥಗಿತಗೊಳಿಸಬೇಕಿತ್ತು. ಆದರೆ ಇಸ್ರೇಲ್ ಸೇನೆಯು ನಿರಂತರವಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 32 ನಾಗರಿಕರು ಸಾವನ್ನಪ್ಪಿದ್ದರು. ಇದನ್ನು “ವಿಶ್ವಾಸದ್ರೋಹ” ಎಂದು ಕರೆದಿರುವ ಇರಾನ್, ಮಾತುಕತೆಯ ವೇದಿಕೆಯಿಂದ ಹೊರನಡೆಯುವ ಮೂಲಕ ತನ್ನ ಪ್ರತಿರೋಧ ತೋರಿಸಿದೆ.
ಇಸ್ರೇಲ್‌ನ ದಾಳಿ ಹಾಗೂ ಟ್ರಂಪ್ ಬೆದರಿಕೆಗೆ ತಕ್ಷಣವೇ ಕಾರ್ಯಪ್ರವೃತ್ತವಾಗಿರುವ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ವಿಶ್ವದ ಅತ್ಯಂತ ಪ್ರಮುಖ ತೈಲ ಸಾಗಣೆಯ ಕಡಲ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz)ಸಂಪೂರ್ಣವಾಗಿ ಮುಚ್ಚಿರುವುದಾಗಿ ಘೋಷಿಸಿದೆ. ಇದು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರೀ ಆತಂಕ ಮೂಡಿಸಿದೆ. ಇದನ್ನೂ ಓದಿ: ವಿಶ್ವಕ್ಕೆ ಶಾಕ್ – ಇರಾನ್‌ನಿಂದ ಮತ್ತೆ ಹಾರ್ಮುಜ್ ಜಲಸಂಧಿ ಬಂದ್

ಇರಾನ್‌ನ ಮುಖ್ಯ ಸಂಧಾನಕಾರ ಮೊಹಮ್ಮದ್ ಬಾಗೇರ್ ಗಲಿಬಾಫ್ ಅವರು, “ಅಮೆರಿಕ ತನ್ನ ಭಾಷೆಯ ಮೇಲೆ ನಿಗಾ ಇಡಬೇಕು, ನಮ್ಮ ಸಶಸ್ತ್ರ ಪಡೆಗಳು ಯಾವುದೇ ಬೆದರಿಕೆಗೆ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧವಾಗಿವೆ” ಎಂದು ತಿರುಗೇಟು ನೀಡಿದ್ದಾರೆ.
ಇರಾನ್ ನಿಯೋಗ ಮಾತುಕತೆಯಿಂದ ಹೊರನಡೆದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮಧ್ಯಸ್ಥಿಕೆ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಕತಾರ್ ರಾಜತಾಂತ್ರಿಕ ಒಪ್ಪಂದ ಮುರಿದುಬೀಳದಂತೆ ತಡೆಯಲು ಹರಸಾಹಸ ಪಡುತ್ತಿವೆ. ಇರಾನ್ ನಿಯೋಗವನ್ನು ಸಮಾಧಾನಪಡಿಸಲು ಮತ್ತು ಉಭಯ ದೇಶಗಳನ್ನು ಮರಳಿ ಸಂಧಾನದ ಮೇಜಿಗೆ ತರಲು ತೆರೆಮರೆಯ ತೀವ್ರ ಪ್ರಯತ್ನಗಳು ಮುಂದುವರಿದಿವೆ.
