ಬೆಂಗಳೂರು: ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ನವೆಂಬರ್ 22ರಂದು ನಡೆದ ಸಾಮಾನ್ಯ ಜ್ಞಾನ ವಿಷಯದ ಪರೀಕ್ಷೆಯಲ್ಲಿ ಯಾವುದೇ ಲೋಪವಾಗಿಲ್ಲ. ಪ್ರಶ್ನೆಗಳ ಪುನರಾವರ್ತನೆ ಉದ್ದೇಶಪೂರ್ವಕವಾಗಿದ್ದು, ಇದರಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರಬಹುದು ಎನ್ನುವ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸ್ಪಷ್ಟಪಡಿಸಿದೆ.
ಈ ಎರಡೂ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ ಕೆಲವು ವಿಷಯಗಳ ಪಠ್ಯಕ್ರಮ ಒಂದೇ ಆಗಿತ್ತು. ಹೀಗಾಗಿ ಒಂದೇ ದಿನ ಪರೀಕ್ಷೆ ನಡೆಸಲಾಗಿದ್ದು, ಪ್ರಶ್ನೆಗಳ ಪುನರಾವರ್ತನೆಯಿಂದ ಯಾವುದೇ ಅಕ್ರಮ ನಡೆಯಲು ಅವಕಾಶವಿರಲಿಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 22ರಂದು ಬೆಳಿಗ್ಗೆ 9:30ಕ್ಕೆ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಪರೀಕ್ಷೆ ಆರಂಭವಾಗಿತ್ತು. ಬಳಿಕ ಅದೇ ದಿನ ಬೆಳಿಗ್ಗೆ 10:30ಕ್ಕೆ ವಸತಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಪರೀಕ್ಷೆ ಪ್ರಾರಂಭಗೊಂಡಿತ್ತು. ಎರಡೂ ಪರೀಕ್ಷೆಗಳ ಮುಕ್ತಾಯದ ಸಮಯ ಮಧ್ಯಾಹ್ನ 12:30 ಆಗಿತ್ತು.
ಪರೀಕ್ಷೆಯ ಅವಧಿ ಮುಗಿಯುವವರೆಗೂ ಯಾವುದೇ ಅಭ್ಯರ್ಥಿಗೆ ಪರೀಕ್ಷಾ ಕೊಠಡಿಯಿಂದ ಹೊರಹೋಗಲು ಅವಕಾಶವಿರುವುದಿಲ್ಲ. ಅಲ್ಲದೆ, ಪ್ರಾಂಶುಪಾಲರ ಪರೀಕ್ಷೆ ಆರಂಭವಾದ ವೇಳೆಯಲ್ಲಿಯೇ ವಸತಿ ಶಾಲಾ ಶಿಕ್ಷಕರ ಹುದ್ದೆಯ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಹಾಜರಿದ್ದರು. ಹೀಗಾಗಿ ಒಂದು ಪರೀಕ್ಷೆಯ ಪ್ರಶ್ನೆಗಳನ್ನು ಮತ್ತೊಂದು ಪರೀಕ್ಷೆಯ ಅಭ್ಯರ್ಥಿಗಳಿಗೆ ಮುಂಚಿತವಾಗಿ ತಿಳಿದುಕೊಳ್ಳಲು ಅಥವಾ ಹಂಚಿಕೊಳ್ಳಲು ಸಾಧ್ಯವಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಎರಡೂ ಪರೀಕ್ಷೆಗಳ ಆರಂಭದ ಸಮಯದಲ್ಲಿ ಒಂದು ಗಂಟೆಯ ವ್ಯತ್ಯಾಸವಿದ್ದರೂ, ಮುಕ್ತಾಯದ ಸಮಯವನ್ನು ಒಂದೇ ರೀತಿ ನಿಗದಿಪಡಿಸಲಾಗಿತ್ತು. ಇದು ಪ್ರಜ್ಞಾಪೂರ್ವಕವಾಗಿ ಕೈಗೊಂಡ ನಿರ್ಧಾರವಾಗಿದ್ದು, ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ನೈಟ್ ಲೈಫ್ ವಿಸ್ತರಣೆಗೆ ಹೆಚ್ಚಾಯ್ತು ಒತ್ತಾಯ: ಪ್ರಧಾನಿ ಸಲಹೆ ನೆನಪಿಸಿದ ಕೃಷ್ಣ ಬೈರೇಗೌಡ!
ಇದೇ ವೇಳೆ, ಪ್ರಾಧಿಕಾರವು ಯಾವುದೇ ಪರೀಕ್ಷೆಗೆ 1,500 ರೂ. ಶುಲ್ಕ ಸಂಗ್ರಹಿಸಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಅಭ್ಯರ್ಥಿಗಳಿಗೆ ಆರ್ಥಿಕ ಹೊರೆಯಾಗಬಾರದು ಎಂಬ ಉದ್ದೇಶದಿಂದ ವಿವಿಧ ಇಲಾಖೆಗಳ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಹಾಗೂ ದ್ವಿತೀಯ ದರ್ಜೆ ಸಹಾಯಕ (ಎಸ್ಡಿಎ) ಹುದ್ದೆಗಳ ಪರೀಕ್ಷೆಗಳಿಗೆ ಸಾಮಾನ್ಯ ಅರ್ಜಿ ಮತ್ತು ಒಂದೇ ಶುಲ್ಕದ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಅವರು ವಿವರಿಸಿದ್ದಾರೆ.ಇದನ್ನೂ ಓದಿ: ಆಸ್ತಿಗಾಗಿ ತಂಗಿಯನ್ನೇ ಕ್ರಿಕೆಟ್ ಬ್ಯಾಟ್ನಿಂದ ಹೊಡೆದು ಕೊಂದ ವಕೀಲ
