ಬೆಳಗಾವಿ: ಸುವರ್ಣಸೌಧದ ಮುಂದೆ ಡಿ. 10ರಂದು ಸುರ್ಯೋದಯದಿಂದ ಸೂರ್ಯಾಸ್ತದವರೆಗೆ 2ಎ ಮೀಸಲಾತಿಗಾಗಿ(2A reservation) ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಕೆಲಸ ಮಾಡುತ್ತೇವೆ. ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಬೇಕು ಎಂದು ಎಂದು ಪಂಚಮಸಾಲಿ ಸಮಾಜದ ಕೂಡಲ ಸಂಗಮದ ಬಸವ ಜಯಮೃತ್ಯಂಜಯ ಸ್ವಾಮೀಜಿ(Basava Jaya Mrityunjaya Swamiji) ಹೇಳಿದರು.
ಕೊಪ್ಪಳ ನಗರದ ಕುಷ್ಟಗಿ ರಸ್ತೆಯ ಪಂಚಮಸಾಲಿ ಸಮುದಾಯ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪಂಚಮಸಾಲಿ ಮೀಸಲಾತಿ ಚಳುವಳಿ ನಿರಂತರವಾಗಿ ಮಾಡುತ್ತಿದ್ದೇವೆ. 2024 ರಲ್ಲಿ ಬೆಳಗಾವಿ ಸುವರ್ಣಸೌಧದ(Suvarna Soudha) ಮುಂದೆ 2ಎ ಮೀಸಲಾತಿಗಾಗಿ ಪ್ರತಿಭಟನೆ ನಡೆಸುವಾಗ, ಸಮಾಜದ ಹೋರಾಟಗಾರರ ಮೇಲೆ ಲಾಟಿ ಚಾರ್ಜ್ ಆಯಿತು. ಈ ನೋವಿನ ದಿನವನ್ನು ಲಿಂಗಾಯತರ ಮೇಲಿನ ದೌರ್ಜನ್ಯ ದಿನವಾಗಿ ಆಚರಿಸುತ್ತೇವೆ. ಡಿ.ಕೆ.ಶಿವಕುಮಾರ ಹೊಸದಾಗಿ ಮುಖ್ಯಮಂತ್ರಿಯಾಗಿದ್ದು, ಇವರ ಮತ್ತು ಸರ್ಕಾರದ ಗಮನ ಸೆಳೆಯಲು ಡಿ. 10ರಂದು ಬೆಳಗಾವಿಯಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದು, ಎಲ್ಲರೂ ಭಾಗವಹಿಸಬೇಕು. ನಮ್ಮ ಹಕ್ಕು ಈಡೇರುವವರೆಗೂ ಹೋರಾಟ ಮಾಡುತ್ತೇವೆ ಎಂದರು.
ಪಂಚಮಸಾಲಿ ಸಮಾಜಕ್ಕೆ (Panchamasali Lingayat community) 2ಎ ಮೀಸಲಾತಿ ನೀಡಬೇಕು. ಇದು ನಮ್ಮ ಮೂಲ ಗುರಿಯಾಗಿದೆ. ಇಲ್ಲವಾದರೆ ಎಲ್ಲ ಲಿಂಗಾಯತರನ್ನು ಕೇಂದ್ರ ಓಬಿಸಿ ಪಟ್ಟಿಗೆ ಸೇರಿಸಬೇಕು. ಇದನ್ನು ಮಾಡಲಾಗದಿದ್ದರೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ 2ಡಿ ಮೀಸಲಾತಿಯು ಸುಫ್ರಿಂ ಕೋರ್ಟಿನಲ್ಲಿದೆ. ಇದನ್ನು ಇತ್ಯರ್ಥ ಪಡಿಸಿ, ನೀಡಬೇಕು. ಡಿ.ಕೆ.ಶಿವಕುಮಾರ್ ಮೀಸಲಾತಿ ಪಾದಯಾತ್ರೆಯ ಸಮಯದಲ್ಲಿ ಚಿತ್ರದುರ್ಗಕ್ಕೆ ಬಂದು, ನನಗೆ ಅವಕಾಶ ಸಿಕ್ಕರೆ ಸಮಾಜದ ಕೈಹಿಡಿಯುವ ಭರವಸೆ ನೀಡಿದ್ದರು. ಇದನ್ನು ನೆನಪಿಸುತ್ತೇವೆ ಎಂದರು.
ಮೀಸಲಾತಿ ಎನ್ನುವುದು ಕಬ್ಬಿಣದ ಕಡಲೆ. ಸಂವಿಧಾನ, ಕಾನೂನು ಬದ್ಧವಾಗಿ ಕೊಡಬೇಕಾಗಿದೆ. ಆಶಾವಾದ ಇದೆ. ಮೀಸಲಾತಿ ಆದೇಶ ಪತ್ರ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸಭೆ ಮಾಡಿ, ಜನರನ್ನು ಕರೆತರುವ ಕೆಲಸ ಮಾಡಬೇಕು. ಈ ಮೂಲಕ ಪ್ರತಿ ಹಳ್ಳಿಯಿಂದ ಬೆಳಗಾವಿಯ ಸುವರ್ಣಸೌಧಕ್ಕೆ ಬರಬೇಕು. ಈಗಾಗಲೇ ಬೀದರ್, ವಿಜಯಪುರ, ಕಲಬುರಗಿ ಸೇರಿ ವಿವಿಧ ಜಿಲ್ಲೆಗಳಲ್ಲಿ ಸಭೆ ನಡೆಸಿದ್ದೇನೆ. ಇನ್ನುಳಿದ ಜಿಲ್ಲೆಗಳಲ್ಲೂ ಸಭೆ ಮಾಡುತ್ತೇವೆ. ಇದರಿಂದಾಗಿ ಸಾವಿರಾರು ಸಂಖ್ಯೆಯ ಜನರು ಬರುವ ನಿರೀಕ್ಷೆ ಇದೆ. ಹೋರಾಟ ಯಶಸ್ವಿ ಗೊಳಿಸಬೇಕು ಎಂದರು.
