ವಾಷಿಂಗ್ಟನ್: ಶಾಂತಿ ಮಾತುಕತೆಯಿಂದ ಇರಾನ್(Iran) ಹೊರ ನಡೆದ ಬೆನ್ನಲ್ಲೇ ಕಚ್ಚಾ ತೈಲ ದರ 2% ರಷ್ಟು ಏರಿಕೆ ಕಂಡಿದೆ.
ಅಂತರರಾಷ್ಟ್ರೀಯ ಮಟ್ಟದ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ(Crude oil) ಬೆಲೆ ಪ್ರತಿ ಬ್ಯಾರೆಲ್‌ಗೆ 82.30 ಡಾಲರ್(7,700 ರೂ.) ತಲುಪಿದ್ದರೆ ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ (WTI) ಕಚ್ಚಾ ತೈಲದ ಬೆಲೆಯೂ ಸಹ ಪ್ರತಿ ಬ್ಯಾರೆಲ್‌ಗೆ 78 ಡಾಲರ್(7,300 ರೂ.) ಗಡಿಯನ್ನು ದಾಟಿದೆ.
ಅಮೆರಿಕ(USA) ಮತ್ತು ಇರಾನ್ ನಡುವೆ ಸ್ವಿಟ್ಜರ್ಲೆಂಡ್‌ನಲ್ಲಿ ಅತ್ಯಂತ ಸೂಕ್ಷ್ಮವಾದ ಶಾಂತಿ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನೀಡಿರುವ ಹೊಸ ಮಿಲಿಟರಿ ಬೆದರಿಕೆಯು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ.
ಕಳೆದ ವಾರವಷ್ಟೇ ಉಭಯ ದೇಶಗಳ ನಡುವೆ ಉದ್ವಿಗ್ನತೆ ಕಡಿಮೆ ಮಾಡಲು 60 ದಿನಗಳ ಕದನ ವಿರಾಮ ಮತ್ತು ಮಾತುಕತೆಯ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇದರ ಭಾಗವಾಗಿ ಸ್ವಿಟ್ಜರ್ಲೆಂಡ್‌ನ ಬರ್ಗೆನ್‌ಸ್ಟಾಕ್ ರೆಸಾರ್ಟ್‌ನಲ್ಲಿ ಉನ್ನತ ಮಟ್ಟದ ಸಂಧಾನ ಸಭೆಗಳು ಆರಂಭವಾಗಿದ್ದವು.

ಭಾನುವಾರ ಸಭೆ ನಡೆಯುತ್ತಿದ್ದಾಗ ಟ್ರಂಪ್ ಅವರ ಬೆದರಿಕೆಯ ಎಚ್ಚರಿಕೆ ಹೊರಬೀಳುತ್ತಿದ್ದಂತೆ ಇರಾನ್ ನಿಯೋಗ ಮಾತುಕತೆ ವೇದಿಕೆಯಿಂದ ಹೊರ ನಡಿದಿದೆ. ಇದು ಜಾಗತಿಕ ತೈಲ ಪೂರೈಕೆಯಲ್ಲಿ ಮತ್ತೆ ವ್ಯತ್ಯಯ ಉಂಟಾಗಬಹುದು ಎಂಬ ಆತಂಕವನ್ನು ಹೂಡಿಕೆದಾರರಲ್ಲಿ ಮೂಡಿಸಿದ್ದು, ಬೆಲೆ ಏರಿಕೆಗೆ ನೇರ ಕಾರಣವಾಗಿದೆ. ಇದನ್ನೂ ಓದಿ: ಟ್ರಂಪ್ ಧಮಕಿಗೆ ಇರಾನ್ ಕೆಂಡ: ಶಾಂತಿ ಮಾತುಕತೆ ವೇದಿಕೆಯಿಂದ ಇರಾನ್ ಹೊರ ನಡೆದಿದ್ದು ಯಾಕೆ?
