ಬೆಂಗಳೂರು: ನನ್ನ ರಾಜಕೀಯ ನಿಷ್ಠೆ ಪಕ್ಷಕ್ಕೆ ಮಾತ್ರ. ಪಕ್ಷ ನಮಗೆ ತಾಯಿ ಸಮಾನ. ಅದಕ್ಕೆ ದ್ರೋಹ ಮಾಡಿದವರು ಮಂಜುನಾಥನ ಮನೆಯಲ್ಲಿ ಸುಳ್ಳು ಪ್ರಮಾಣ ಮಾಡಿದರೆ ಹೇಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ (Suresh Kumar) ಪ್ರಶ್ನಿಸಿದ್ದಾರೆ.
ವಿಧಾನಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡ ಮತದಾನ (Cross Voting) ಹಾಗೂ ಅದಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಲು ಬಿಜೆಪಿ ಶಾಸಕರನ್ನು ಧರ್ಮಸ್ಥಳಕ್ಕೆ(Dharmasthala) ಕರೆದೊಯ್ದು ಅಣೆ-ಪ್ರಮಾಣ ಮಾಡಿಸುವ ಚರ್ಚೆಗಳ ಕುರಿತು ಬಿಜೆಪಿ ಹಿರಿಯ ನಾಯಕ ಸುರೇಶ್ ಕುಮಾರ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.
ನಾನು ನನ್ನ ಪ್ರಾಮಾಣಿಕ ಅನಿಸಿಕೆಯನ್ನು ಪಕ್ಷದ ವೇದಿಕೆಯಲ್ಲಿ ಹೇಳಿದ್ದೇನೆ. ಧರ್ಮಸ್ಥಳಕ್ಕೆ ತನ್ನದೇ ಆದ ಪವಿತ್ರತೆ ಹಾಗೂ ಇತಿಹಾಸವಿದೆ. ರಾಜಕೀಯ ಪಕ್ಷವಾಗಿ ನಾವು ಧರ್ಮಸ್ಥಳ ಕ್ಷೇತ್ರವನ್ನು ಇಂತಹ ವಿಚಾರಗಳಿಗೆ ಬಳಸಿಕೊಳ್ಳಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯಾರೋ ಕೆಲವರು ತಾಯಿ ಸಮಾನವಾದ ಪಕ್ಷಕ್ಕೆ ಅಡ್ಡ ಮತದಾನದ ಮೂಲಕ ದ್ರೋಹ ಮಾಡಿದ್ದಾರೆ ಎಂಬ ನೋವು ರಾಜ್ಯಾಧ್ಯಕ್ಷರಿಗೆ ಇದೆ. ಆ ದ್ರೋಹಿಗಳನ್ನು ಪತ್ತೆ ಹಚ್ಚಲು ಧರ್ಮಸ್ಥಳದಲ್ಲಿ ಶಾಸಕಾಂಗ ಸಭೆ ನಡೆಸಿ ಪ್ರಮಾಣ ಮಾಡಿಸುವ ಆಲೋಚನೆ ನಡೆದಿದೆ. ಆದರೆ, ಪಕ್ಷಕ್ಕೆ ದ್ರೋಹ ಮಾಡಿದವರು ಅಲ್ಲಿಗೆ ಬಂದು ಮಂಜುನಾಥನ ಸನ್ನಿಧಿಯಲ್ಲೂ ಸುಳ್ಳು ಪ್ರಮಾಣ ಮಾಡಿದರೆ ಏನು ಮಾಡುವುದು? ಎಂಬ ಅನುಮಾನ ನನಗಿದೆ. ಒಂದು ವೇಳೆ ಪಕ್ಷವೇ ಧರ್ಮಸ್ಥಳದಲ್ಲಿ ಸಭೆ ಮಾಡಲು ತೀರ್ಮಾನಿಸಿದರೆ, ನಾನು ಬೆಂಗಳೂರಿನಿಂದ ಅಲ್ಲಿಗೆ ಪಾದಯಾತ್ರೆ ಮಾಡಲು ಸಿದ್ಧನಿದ್ದೇನೆ ಎಂದರು.
ಪಕ್ಷದಲ್ಲಿ ಉಂಟಾಗಿರುವ ಇತ್ತೀಚಿನ ಬೆಳವಣಿಗೆಗಳು ನೋವು ತಂದಿರುವುದು ನಿಜ. ಅಧ್ಯಕ್ಷರು ತಮಗಾಗಿರುವ ನೋವನ್ನು ಸಭೆಯಲ್ಲಿ ತೋಡಿಕೊಂಡಿದ್ದಾರೆ. ನಾನು ಬೇರೆಡೆಯಿಂದ ಈ ಪಕ್ಷಕ್ಕೆ ಬಂದವನಲ್ಲ, ಇದೇ ತತ್ವ-ಸಿದ್ಧಾಂತದಲ್ಲಿ ಹುಟ್ಟಿ ಬೆಳೆದವನು. ಹಾಗಾಗಿ ಪಕ್ಷದ ಶಿಸ್ತು ಮತ್ತು ನಿಷ್ಠೆ ನನಗೆ ಮುಖ್ಯ. ಇಂದು ಅಡ್ಡ ಮತದಾನ ಮಾಡಿದವರು ಯಾರು ಎಂಬುದು ಮುಚ್ಚಿಹೋಗಿರಬಹುದು. ಆದರೆ ಸತ್ಯ ಯಾವತ್ತಿದ್ದರೂ ಹೊರಬಂದೇ ಬರುತ್ತದೆ. ತಾಯಿ ಸಮಾನವಾದ ಪಕ್ಷಕ್ಕೆ ಹಾಗೂ ತಮ್ಮ ಆತ್ಮಸಾಕ್ಷಿಗೆ ಮೋಸ ಮಾಡಿದವರಿಗೆ ಮುಂದೆ ಕಾಲವೇ ತಕ್ಕ ಪಾಠ ಕಲಿಸಲಿದೆ ಎಂದು ಹೇಳಿದರು.
ಪರಿಷತ್ ಚುನಾವಣೆಯ ಈ ಅಡ್ಡ ಮತದಾನದ ಆಂತರಿಕ ಗೊಂದಲಗಳಿಂದಾಗಿ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಸಮ್ಮಿಶ್ರ ಮೈತ್ರಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗುವುದಿಲ್ಲ. ಮೈತ್ರಿ ಭದ್ರವಾಗಿದೆ. ಸದ್ಯ ಪಕ್ಷದಲ್ಲಿ ಅಡ್ಡ ಮತದಾನದ ಕುರಿತು ತನಿಖೆ ನಡೆಸಲು ಸಮಿತಿ ರಚನೆ ಮಾಡಲಾಗಿದ್ದು, ಇನ್ನು ಮೂರ್ನಾಲ್ಕು ದಿನಗಳಲ್ಲಿ ವರದಿ ಕೈಸೇರಲಿದೆ. ವರದಿ ಬಂದ ತಕ್ಷಣ ದ್ರೋಹ ಮಾಡಿದವರು ಯಾರು ಎಂಬುದು ಜಗಜ್ಜಾಹೀರಾಗಲಿದೆ ಎಂದು ತಿಳಿಸಿದರು.
ಇದೇ ವೇಳೆ ರಾಜ್ಯ ಸರ್ಕಾರದ ಆಡಳಿತ ವೈಖರಿ ಹಾಗೂ ಸಂಪನ್ಮೂಲ ಹಂಚಿಕೆ ಕುರಿತು ಮುಖ್ಯಮಂತ್ರಿಗಳ ನಡೆಗೆ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದ ಮುಖ್ಯಮಂತ್ರಿಯಾದವರು ಪಕ್ಷಾತೀತವಾಗಿ ಎಲ್ಲರನ್ನೂ ಒಂದೇ ಕಣ್ಣಿನಿಂದ ನೋಡಬೇಕು. ಇಡೀ ರಾಜ್ಯದ ಜನರನ್ನು ಒಂದೇ ಕುಟುಂಬದ ಸದಸ್ಯರಂತೆ ಕಾಣಬೇಕು. ಈ ಹಿಂದೆ ಮಾಜಿ ಸಿಎಂ ದೇವರಾಜ್ ಅರಸು ಅವರು ಸರ್ಕಾರಿ ಖಜಾನೆಯ ಹಣ ಇಡೀ ರಾಜ್ಯದ ಜನರಿಗೆ ಸೇರಿದ್ದು, ಅದನ್ನು ಎಲ್ಲರಿಗೂ ಸಮಾನವಾಗಿ ಹಂಚಬೇಕು ಎಂದು ಹೇಳಿದ್ದರು. ಪ್ರಸ್ತುತ ಮುಖ್ಯಮಂತ್ರಿಗಳು ಸಹ ಅದೇ ಹಾದಿಯಲ್ಲಿ ಸಾಗಬೇಕಿದೆಎಂದು ಕಿವಿಮಾತು ಹೇಳಿದರು.
