ಕೋಲಾರ: ರಾಜ್ಯದ ಮಾವಿನ (Mango) ತವರು ಕೋಲಾರ. ಇಲ್ಲಿ ಬೆಳೆಯುವ ಉತ್ಕೃಷ್ಟವಾದ ವಿವಿಧ ತಳಿಯ ಮಾವಿನ ಹಣ್ಣುಗಳು ವಿಶ್ವ ಪ್ರಸಿದ್ದಿ ಪಡೆದಿವೆ. ಇಂತಹ ಮಾವಿನ ಹಣ್ಣಿನ ಸೀಸನ್ ಆರಂಭವಾಗಿದ್ದು, ಆರಂಭದಲ್ಲೇ ಮಾವಿನ ಹಣ್ಣಿನ ಬೆಲೆ ಕುಸಿತವಾಗಿದೆ. ಹಣ್ಣುಗಳ ರಾಜ ಮಾವಿಗೆ ಬೆಂಬಲ ಬೆಲೆ ಅಥವಾ ಕನಿಷ್ಟ 10 ಸಾವಿರ ನೀಡುವಂತೆ ಒತ್ತಾಯ ಜೋರಾಗಿದ್ದು, ಇಂದು ಕೋಲಾರ ಬಂದ್‌ಗೆ (Kolar Bandh) ಕರೆ ನೀಡಲಾಗಿದೆ.
ಹೌದು, ಕಳೆದೊಂದು ತಿಂಗಳಿಂದ ಮಾವಿನ ಸೀಸನ್ ಆರಂಭವಾಗಿದೆ. ಆದರೆ ಆರಂಭದಲ್ಲೇ ಮಾವಿನ ಹಣ್ಣು ಬೆಲೆ ಕುಸಿತ ಕಂಡಿದೆ. ಈ ಹಿನ್ನೆಲೆ ಮಾವಿನ ತವರು ಶ್ರೀನಿವಾಸಪುರದ ಮಾವು ಬೆಳೆಗಾರರಿಗೆ ಆಘಾತ ಎದುರಾಗಿದೆ. ಈ ಬಾರಿ ಬೇಸಿಗೆಯ ಬಿಸಿಲು, ಕಳೆದ ತಿಂಗಳು ಸುರಿದ ಆಲಿಕಲ್ಲು ಸಹಿತ ಮಳೆ ಗಾಯದ ಮೇಲೆ ಬರೆ ಎಳೆದಿದೆ. ಈ ಬಾರಿ ಸುಮಾರು 60ರಿಂದ 70ರಷ್ಟು ಮಾವಿನ ಫಸಲು ಹಾಳಾಗಿ ಹೋಗಿದೆ. ಉಳಿದಿರುವ ಕೇವಲ 30ರಷ್ಟು ಮಾವಿನ ಫಸಲಿಗೆ ಉತ್ತಮ ಬೆಲೆ ಬರುತ್ತದೆ ಎಂದು ಎಲ್ಲರೂ ನಿರೀಕ್ಷೆ ಹೊಂದಿದ್ದರು. ಆದರೆ ಮಾವು ಬೆಳೆಗಾರರ ನಿರೀಕ್ಷೆ ಹುಸಿಯಾಗಿದೆ. ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಬೆಲೆ ಕುಸಿತವಾಗಿದೆ. ಇದನ್ನೂ ಓದಿ: 51 ವರ್ಷಗಳಿಂದ ಹಿಡಕಲ್ ಜಲಾಶಯದಲ್ಲಿ ಮುಳುಗಡೆಯಾಗಿದ್ದ ದೇವಸ್ಥಾನ ಮತ್ತೆ ಗೋಚರ!

ತೋತಾಪುರಿ, ಮಲಗೋವಾ, ಬೇನಿಷಾ, ರಸಪುರಿ, ಮಲ್ಲಿಕಾ ಸೇರಿದಂತೆ ಎಲ್ಲಾ ಮಾವಿನ ಹಣ್ಣಿನ ಬೆಲೆ ಮಾರುಕಟ್ಟೆಯಲ್ಲಿ ಕೆಜಿಗೆ 10 ರೂಪಾಯಿ ದಾಟುತ್ತಿಲ್ಲ. ಇದರಿಂದ ಒಳ್ಳೆಯ ಬೆಲೆಯ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ಆಘಾತ ಎದುರಾಗಿದೆ. ಕನಿಷ್ಟ ಟನ್‌ಗೆ 10 ಸಾವಿರ ರೂ. ನೀಡಬೇಕು. ಇಲ್ಲವಾದಲ್ಲಿ ಬೆಂಬಲ ಬೆಲೆ ನೀಡುವ ಮೂಲಕ ರೈತರ ನೆರವಿಗೆ ನಿಲ್ಲಬೇಕು. ಅಲ್ಲದೇ ಸ್ಥಳೀಯವಾಗಿ ಮಾವು ಸಂಸ್ಕರಣಾ ಘಟಕಗಳ ಸ್ಥಾಪನೆ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕಲಬುರಗಿ| ಕೃಷಿ ಹೊಂಡದಲ್ಲಿ ಮುಳುಗಿ ಚಿಕ್ಕಪ್ಪ-ಮಗನ ದುರ್ಮರಣ
ಕೋಲಾರ ಜಿಲ್ಲೆಯಲ್ಲಿ ಸುಮಾರು 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಈ ಪೈಕಿ ಶ್ರೀನಿವಾಸಪುರ ತಾಲೂಕು ಒಂದರಲ್ಲೇ ಸುಮಾರು 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಬಹುತೇಕ ರೈತರು ವರ್ಷಕ್ಕೊಮ್ಮೆ ಬರುವ ಮಾವಿನ ಫಸಲನ್ನೇ ನಂಬಿ ಜೀವನ ನಡೆಸುತ್ತಾರೆ. ಈ ವರ್ಷ ಬಿಸಿಲಿನ ತಾಪಮಾನ ಹಾಗೂ ಮಳೆ ಕಾರಣದಿಂದ ಮಾವಿನ ತೋಟಗಳಲ್ಲಿದ್ದ ಸುಮಾರು 70ರಷ್ಟು ಫಸಲು ಹಾಳಾಗಿದ್ದು, ಉಳಿದ 30ರಷ್ಟು ಫಸಲಿಗೂ ಕೂಡಾ ಬೆಲೆ ಇಲ್ಲದಂತಾಗಿದೆ. ಹಾಗಾಗಿ ಸರ್ಕಾರ ಮಾವು ಬೆಳೆಗಾರರ ಬೆಂಬಲಕ್ಕೆ ನಿಂತು ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮತ್ತೊಮ್ಮೆ ಹಳಿ ತಪ್ಪಿದ ಅಮೆರಿಕ-ಇರಾನ್ ಮಾತುಕತೆ; ಫೋಟೊ ಸೆಷನ್‌ನಲ್ಲಿ ಭಾಗವಹಿಸದೇ ಇರಾನ್ ವಾಪಸ್
