ಬರ್ನ್: ಅಮೆರಿಕ ಮತ್ತು ಇರಾನ್ ಶಾಂತಿ ಒಪ್ಪಂದದ ಮಾತುಕತೆ ಮತ್ತೊಮ್ಮೆ ಹಳಿ ತಪ್ಪಿದೆ. ಮಾತುಕತೆ ಅರ್ಧಕ್ಕೆ ಬಿಟ್ಟು ಇರಾನ್ ನಿಯೋಗ ಸಭೆಯಿಂದ ಎದ್ದು ಹೊರನಡೆದಿದೆ.
ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಭಾನುವಾರ ಇರಾನ್ ಮತ್ತು ಅಮೆರಿಕ ನಡುವೆ ಮೊದಲ ಸುತ್ತಿನ ಮಾತುಕತೆಯಲ್ಲಿ 80 ನಿಮಿಷಗಳ ಕಾಲ ಚರ್ಚೆ ನಡೆಸಲಾಯಿತು. ಆದರೆ, ಮಾತುಕತೆ ನೀರಸಗೊಂಡಿದ್ದು, ಫೋಟೊ ಸೆಷನ್‌ನಲ್ಲಿ ಭಾಗವಹಿಸದೇ ಇರಾನ್ ವಾಪಸ್ ತೆರಳಿದೆ.
ಇರಾನ್, ಅಮೆರಿಕ, ಪಾಕಿಸ್ತಾನ ಮತ್ತು ಕತಾರ್ ಇತ್ತೀಚೆಗೆ ಸಹಿ ಹಾಕಿದ್ದ ಇಸ್ಲಾಮಾಬಾದ್ ತಿಳುವಳಿಕೆ ಒಪ್ಪಂದ (MoU) ಅಡಿಯಲ್ಲಿ ಆರಂಭಿಕ ಸುತ್ತಿನ ಮಾತುಕತೆಗೆ ಸಭೆ ಸೇರಿದ್ದವು. ಬರ್ಗೆನ್‌ಸ್ಟಾಕ್ ರೆಸಾರ್ಟ್‌ನಲ್ಲಿ ಸಭೆ ಏರ್ಪಡಿಸಲಾಗಿತ್ತು.
ಮಾತುಕತೆ ಪ್ರಾರಂಭವಾಗುವ ಮೊದಲು ಆಯೋಜಕರು ಮತ್ತು ಅಮೆರಿಕದ ನಿಯೋಗದ ಸದಸ್ಯರು ಎರಡೂ ಕಡೆಯವರ ನಡುವೆ ಹ್ಯಾಂಡ್‌ಶೇಕ್ ಮತ್ತು ಜಂಟಿ ಫೋಟೋ ಸೆಷನ್ ಅನ್ನು ಯೋಜಿಸಿದ್ದರು. ಆದಾಗ್ಯೂ, ಇರಾನಿನ ಮುಖ್ಯ ಸಮಾಲೋಚಕ ಮೊಹಮ್ಮದ್ ಬಘರ್ ಗಾಲಿಬಾಫ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಇದರಲ್ಲಿ ಭಾಗವಹಿಸಲು ನಿರಾಕರಿಸಿದರು.
