ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹೆಚ್ಚುತ್ತಿರುವ ಆಹಾರದ ಬೆಲೆಗಳಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರವು (Central Govt) ಒಂದು ನಿರ್ಣಾಯಕ ಹೆಜ್ಜೆಯನ್ನಿಟ್ಟಿದೆ.
ಜಾಗತಿಕ ಮಟ್ಟದಲ್ಲಿ ಸಕ್ಕರೆ ಪೂರೈಕೆಯಲ್ಲಿ ಮುಂಚೂಣಿಯಲ್ಲಿರುವ ಭಾರತವು, ತನ್ನ ರಫ್ತು ನಿಷೇಧವನ್ನು 2026ರ ಸೆಪ್ಟೆಂಬರ್‌ವರೆಗೆ ವಿಸ್ತರಿಸುವ ಮೂಲಕ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದೆ. ಕಬ್ಬಿನ ಇಳುವರಿಯಲ್ಲಿನ ಇಳಿಕೆ ಮತ್ತು ಮುಂಬರುವ ದಿನಗಳಲ್ಲಿ ಹಣದುಬ್ಬರ ಏರಿಕೆಯಾಗುವ ಭೀತಿಯ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಇದು ಸ್ಥಳೀಯ ಗ್ರಾಹಕರಿಗೆ ನಿರಾಳತೆ ತಂದರೂ, ಜಾಗತಿಕ ಮಾರುಕಟ್ಟೆಯಲ್ಲಿ (Global Market) ಸಂಚಲನ ಮೂಡಿಸಿದೆ. ಈ ನಿರ್ಧಾರ ಯಾಕೆ? ಇದರ ಹಿಂದಿನ ಪ್ರಮುಖ ಕಾರಣಗಳೇನು? ಮತ್ತು ಸಾಮಾನ್ಯ ಜನರ ಮೇಲೆ ಹೇಗೆ ಪ್ರಭಾವ ಬೀರಲಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುವ ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ ಈ ಆದೇಶ ಪ್ರಕಟಿಸಿದೆ. ಸಕ್ಕರೆ ರಫ್ತು ನೀತಿಯನ್ನು ಈ ಹಿಂದೆ ಇದ್ದ ‘ನಿರ್ಬಂಧಿತ’ ವರ್ಗದಿಂದ ‘ನಿಷೇಧಿತ’ ವರ್ಗಕ್ಕೆ ಬದಲಾಯಿಸಲಾಗಿದೆ. ಈ ನಿಷೇಧವು ಕಚ್ಚಾ ಸಕ್ಕರೆ, ಬಿಳಿ ಸಕ್ಕರೆ, ಮತ್ತು ಸಂಸ್ಕರಿಸಿದ ಸಕ್ಕ ರೆಸೇರಿದಂತೆ ಎಲ್ಲಾ ರೀತಿಯ ಸಕ್ಕರೆ ರಫ್ತುಗಳಿಗೂ ಅನ್ವಯಿಸುತ್ತದೆ.

ಈ ಕಠಿಣ ನಿಷೇಧದ ನಡುವೆಯೂ ಕೆಲವು ಪ್ರಮುಖ ವಿನಾಯಿತಿಗಳನ್ನು ನೀಡಲಾಗಿದೆ. ನಿಗದಿತ ಕೋಟಾದಡಿ ಯುರೋಪಿಯನ್ ಯೂನಿಯನ್ (EU) ಮತ್ತು ಅಮೆರಿಕ (USA) ದೇಶಗಳಿಗೆ ಮಾಡುವ ಸಕ್ಕರೆ ರಫ್ತುಗಳಿಗೆ ಈ ನಿಷೇಧ ಅನ್ವಯಿಸುವುದಿಲ್ಲ. ಭಾರತ ಸರ್ಕಾರದಿಂದ ವಿಶೇಷವಾಗಿ ಅನುಮೋದಿಸಲ್ಪಟ್ಟ ರಫ್ತು ಸರಕುಗಳು ಮತ್ತು ಈಗಾಗಲೇ ಸಾಗಣೆಯಲ್ಲಿರುವ (In Transit) ಆರ್ಡರ್‌ಗಳಿಗೆ ವಿನಾಯಿತಿ ಇರಲಿದೆ.
ಈ ಮೊದಲು 2023ರ ಅಕ್ಟೋಬರ್‌ನಿಂದ ಈ ನಿಷೇಧವು ಜಾರಿಯಲ್ಲಿತ್ತು, ಈಗ ಅದನ್ನು ಮತ್ತಷ್ಟು ಕಾಲ ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮುಖ್ಯವಾಗಿ ಎಲ್ ನಿನೋ ಹವಾಮಾನ ವೈಪರೀತ್ಯದಿಂದಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ಪ್ರಮುಖ ರಾಜ್ಯಗಳಲ್ಲಿ ಕಬ್ಬಿನ ಇಳುವರಿ ಕುಸಿದಿರುವುದು ಈ ಕಠಿಣ ನಿರ್ಧಾರಕ್ಕೆ ಪ್ರೇರೇಪಿಸಿದೆ.
ಈ ರಫ್ತು ನಿಷೇಧವು ದೇಶದ ಹಣದುಬ್ಬರ ಮೇಲೆ ನೇರ ಪರಿಣಾಮ ಬೀರಲಿದೆ. ಹಬ್ಬದ ದಿನಗಳಲ್ಲಿ ಸಕ್ಕರೆಗೆ ಬೇಡಿಕೆ ಹೆಚ್ಚಾಗುವುದರಿಂದ ಬೆಲೆಗಳು ಗಗನಕ್ಕೇರದಂತೆ ತಡೆಯುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಬ್ರೆಜಿಲ್ ನಂತರ ವಿಶ್ವದ ಎರಡನೇ ಅತಿದೊಡ್ಡ ಸಕ್ಕರೆ ಉತ್ಪಾದಕ ದೇಶವಾಗಿರುವ ಭಾರತದ ಈ ನಡೆಯಿಂದಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆಯ ಕೊರತೆ ಉಂಟಾಗುವ ಭೀತಿ ಎದುರಾಗಿದೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಕ್ಕರೆ ಬೆಲೆಗಳು ಏರಿಕೆಯಾಗುವ ಸಾಧ್ಯತೆಯಿದೆ. ಆದಾಗ್ಯೂ, ಸಂಕಷ್ಟದಲ್ಲಿರುವ ಕೆಲವು ಸ್ನೇಹಿ ರಾಷ್ಟ್ರಗಳಿಗೆ ವಿಶೇಷ ಪರವಾನಗಿ ಅಡಿಯಲ್ಲಿ ಸಕ್ಕರೆ ರಫ್ತು ಮಾಡಲು ಸರ್ಕಾರ ವಿನಾಯಿತಿ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಏಕಾಏಕಿ ಈ ಸಮ್ಯಸೆ ಎದುರಾಗಿದ್ದು ಏಕೆ?
ಸಕ್ಕರೆ ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಅಥವಾ ಅಸ್ಥಿರತೆ ಕಂಡುಬರಲು ಕೆಲವು ಕಾರಣಗಳಿವೆ.
ಬೇಡಿಕೆಯಲ್ಲಿನ ಬದಲಾವಣೆ: ಇತ್ತೀಚಿನ ವರದಿಗಳ ಪ್ರಕಾರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಕ್ಕರೆಯ ಬೇಡಿಕೆ ಕಡಿಮೆಯಾಗುತ್ತಿದೆ. ವಿಶೇಷವಾಗಿ ಅಮೆರಿಕ ಮತ್ತು ಯುರೋಪ್‌ನಂತಹ ರಾಷ್ಟ್ರಗಳಲ್ಲಿ ತೂಕ ಇಳಿಸುವ ಔಷಧಿಗಳ ಬಳಕೆ ಹೆಚ್ಚಾಗುತ್ತಿರುವುದು ಸಕ್ಕರೆ ಬಳಕೆಯನ್ನು ಕಡಿಮೆ ಮಾಡಿದೆ. ಜನರು ಹೆಚ್ಚು ಆರೋಗ್ಯ ಜಾಗೃತರಾಗುತ್ತಿರುವುದು ಸಕ್ಕರೆ ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.
ಬ್ರೆಜಿಲ್‌ನ ಪೂರೈಕೆ ಸಾಮರ್ಥ್ಯ: ವಿಶ್ವದ ಅತಿದೊಡ್ಡ ಸಕ್ಕರೆ ಉತ್ಪಾದಕ ದೇಶವಾದ ಬ್ರೆಜಿಲ್ ನಲ್ಲಿ ಕಬ್ಬಿನ ಬೆಳೆ ಚೆನ್ನಾಗಿ ಬಂದಿದೆ. ಬ್ರೆಜಿಲ್‌ನಿಂದ ಮಾರುಕಟ್ಟೆಗೆ ಹೆಚ್ಚಿನ ಸಕ್ಕರೆ ಹರಿದು ಬರುತ್ತಿರುವುದರಿಂದ ಜಾಗತಿಕವಾಗಿ ಬೆಲೆಗಳು ಇಳಿಕೆಯ ಹಾದಿಯಲ್ಲಿವೆ.
ಎಥೆನಾಲ್ ಉತ್ಪಾದನೆಯಲ್ಲಿನ ವ್ಯತ್ಯಾಸ: ಸಕ್ಕರೆ ಮಿಲ್‌ಗಳು ಕಬ್ಬಿನ ರಸವನ್ನು ಸಕ್ಕರೆ ತಯಾರಿಸಲು ಬಳಸುವ ಬದಲು ಎಥೆನಾಲ್ ತಯಾರಿಕೆಗೆ ಬಳಸುತ್ತವೆ. ಇದರಿಂದ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆಗಳು ಇಳಿಕೆಯಾದಾಗ ಅಥವಾ ಸರ್ಕಾರದ ನೀತಿಗಳು ಬದಲಾದಾಗ, ಮಿಲ್‌ಗಳು ಮತ್ತೆ ಸಕ್ಕರೆ ಉತ್ಪಾದನೆಯತ್ತ ಗಮನ ಹರಿಸುತ್ತವೆ, ಇದು ಮಾರುಕಟ್ಟೆಯಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸಿ ಬೆಲೆ ಕುಸಿತಕ್ಕೆ ಕಾರಣವಾಗುತ್ತದೆ
ಭಾರತದಂತಹ ಪ್ರಮುಖ ದೇಶಗಳು ರಫ್ತು ನಿಷೇಧ ಮುಂದುವರಿಸಿದಾಗ, ಸಕ್ಕರೆ ಮಿಲ್‌ಗಳ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಇದು ಷೇರು ಮಾರುಕಟ್ಟೆಯಲ್ಲಿ ಸಕ್ಕರೆ ಕಂಪನಿಗಳ ಷೇರು ಬೆಲೆಗಳು ಕುಸಿಯಲು ಕಾರಣವಾಗುತ್ತದೆ.

ಕೇಂದ್ರ ಸರ್ಕಾರವು ಸಕ್ಕರೆ ರಫ್ತಿನ ಮೇಲಿನ ನಿಷೇಧವನ್ನು ಸೆಪ್ಟೆಂಬರ್ 30, 2026 ರವರೆಗೆ ವಿಸ್ತರಿಸಲು ಹಲವಾರು ಪ್ರಮುಖ ಆರ್ಥಿಕ ಮತ್ತು ಭೌಗೋಳಿಕ ಕಾರಣಗಳಿವೆ. ಸರ್ಕಾರವು ಈ ಕಠಿಣ ನಿರ್ಧಾರವನ್ನು ಹಠಾತ್ ಆಗಿ ತೆಗೆದುಕೊಳ್ಳಲು ಕಾರಣವಾದ ಪ್ರಮುಖ ಅಂಶಗಳು ಇಲ್ಲಿವೆ:
ಕೇಂದ್ರ ಸರ್ಕಾರ ನಿಷೇಧ ವಿಸ್ತರಿಸಿದ್ದು ಏಕೆ?
ಭಾರತದ ಕಬ್ಬು ಉತ್ಪಾದನೆಯಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಈ ಭಾಗಗಳಲ್ಲಿ ಎಲ್ ನಿನೋ ಪ್ರಭಾವದಿಂದಾಗಿ ಮಳೆ ಕಡಿಮೆಯಾಗುವ ಸಾಧ್ಯತೆಯಿದೆ. ಮಳೆ ಕೊರತೆಯಾದರೆ ಕಬ್ಬಿನ ಇಳುವರಿ ಕುಸಿಯುತ್ತದೆ, ಇದು ಮುಂದಿನ ವರ್ಷಗಳಲ್ಲಿ ಸಕ್ಕರೆಯ ತೀವ್ರ ಅಭಾವಕ್ಕೆ ಕಾರಣವಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಸಕ್ಕರೆ ಅತ್ಯಗತ್ಯ ಆಹಾರ ವಸ್ತುವಾಗಿದೆ. ದೇಶದಲ್ಲಿ ಈಗಾಗಲೇ ಹಣದುಬ್ಬರ ಹೆಚ್ಚಾಗುತ್ತಿದ್ದು, ಹಾಲಿನ ಬೆಲೆ ಮತ್ತು ಇತರ ದಿನಸಿ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಸಕ್ಕರೆ ರಫ್ತು ಮುಂದುವರಿಸಿದರೆ ದೇಶೀಯ ಮಾರುಕಟ್ಟೆಯಲ್ಲಿ ಕೊರತೆ ಉಂಟಾಗಿ ಬೆಲೆಗಳು ಜನಸಾಮಾನ್ಯರ ಕೈಗೆಟುಕದಂತೆ ಏರಿಕೆಯಾಗಬಹುದು. ಇದನ್ನು ತಡೆಯಲು ಸರ್ಕಾರ ‘ಮೊದಲು ದೇಶೀಯ ಬಳಕೆ’ ಎಂಬ ನೀತಿಯನ್ನು ಅನುಸರಿಸುತ್ತಿದೆ.

ಇರಾನ್ ಮತ್ತು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಂತಹ ಪರಿಸ್ಥಿತಿಗಳು ಜಾಗತಿಕ ಪೂರೈಕೆ ಸರಪಳಿಯನ್ನು ಹದಗೆಡಿಸಿವೆ. ಕಬ್ಬು ಬೆಳೆಯಲು ಹೆಚ್ಚಿನ ರಸಗೊಬ್ಬರದ ಅಗತ್ಯವಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರ ಮತ್ತು ಇಂಧನದ ಬೆಲೆ ಹೆಚ್ಚಾಗುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಕಬ್ಬಿನ ಉತ್ಪಾದನಾ ವೆಚ್ಚ ಹೆಚ್ಚಾಗಬಹುದು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಫ್ತನ್ನು ನಿಲ್ಲಿಸಲಾಗಿದೆ.
ಭಾರತ ಸರ್ಕಾರವು ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ಹೊಂದಿದೆ. ಸಕ್ಕರೆಯನ್ನು ರಫ್ತು ಮಾಡುವ ಬದಲಿಗೆ, ಕಬ್ಬಿನ ರಸದಿಂದ ಎಥೆನಾಲ್ ತಯಾರಿಸಿ ಇಂಧನ ಅವಲಂಬನೆಯನ್ನು ಕಡಿಮೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಇದು ಪರಿಸರಕ್ಕೂ ಪೂರಕ ಮತ್ತು ಆರ್ಥಿಕವಾಗಿಯೂ ಲಾಭದಾಯಕ.
ಕೆಲವು ವರದಿಗಳ ಪ್ರಕಾರ, ಸಕ್ಕರೆ ಮಿಲ್‌ಗಳು ತಮ್ಮಲ್ಲಿರುವ ದಾಸ್ತಾನಿನ ಬಗ್ಗೆ ನೀಡುತ್ತಿರುವ ಮಾಹಿತಿ ಮತ್ತು ವಾಸ್ತವದ ನಡುವೆ ವ್ಯತ್ಯಾಸವಿರಬಹುದು ಎಂಬ ಅನುಮಾನ ಸರ್ಕಾರಕ್ಕಿದೆ. ಹೀಗಾಗಿ, ಯಾವುದೇ ಅನಿರೀಕ್ಷಿತ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸರ್ಕಾರವು ತನ್ನಲ್ಲಿ ಸಾಕಷ್ಟು ಬಫರ್ ಸ್ಟಾಕ್ ಇಟ್ಟುಕೊಳ್ಳಲು ಬಯಸುತ್ತಿದೆ.

ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘವು ಪ್ರಸಕ್ತ ಹಂಗಾಮಿನ ಒಟ್ಟು ಸಕ್ಕರೆ ಉತ್ಪಾದನಾ ಅಂದಾಜನ್ನು 32 ಮಿಲಿಯನ್ ಟನ್‌ಗಳಿಗೆ ಇಳಿಸಿದೆ. ಉತ್ಪಾದನೆ ಕುಂಠಿತಗೊಂಡಿರುವ ಕಾರಣ ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಚಿಲ್ಲರೆ ದರಗಳು ಹೆಚ್ಚಾಗದಂತೆ ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದರ ಜೊತೆ ಹಬ್ಬದ ಸೀಸನ್‌ಗಳಲ್ಲಿ ದೇಶದೊಳಗೆ ಸಕ್ಕರೆ ಕೊರತೆಯಾಗದಂತೆ ಬಫರ್ ಸ್ಟಾಕ್ ಕಾಯ್ದುಕೊಳ್ಳಲು ಮತ್ತು ಪಶ್ಚಿಮ ಏಷ್ಯಾ ಪ್ರಾಂತ್ಯದಲ್ಲಿ ನಡೆಯುತ್ತಿರುವ ಯುದ್ಧದ ಬಿಕ್ಕಟ್ಟಿನಿಂದಾಗಿ ಎದುರಾಗಬಹುದಾದ ಆಹಾರ ಹಣದುಬ್ಬರದ ಅಪಾಯದಿಂದ ದೇಶದ ಜನರನ್ನು ರಕ್ಷಿಸಲು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಭಾರತದಿಂದ ಸಕ್ಕರೆ ಆಮದು ಮಾಡಿಕೊಳ್ಳುವ ದೇಶಗಳು:
ಭಾರತವು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ಮತ್ತು ರಫ್ತು ಮಾಡುವ ದೇಶವಾಗಿದೆ. ಪ್ರಮುಖವಾಗಿ ಈ ದೇಶಗಳಿಗೆ ಸಕ್ಕರೆ ರಫ್ತಾಗುತ್ತದೆ.
ಆಫ್ರಿಕನ್ ದೇಶಗಳಾದ ಸೋಮಾಲಿಯಾ, ಸುಡಾನ್, ಜಿಬೂಟಿ, ಕೀನ್ಯಾ, ಉಗಾಂಡಾ, ತಾಂಜಾನಿಯಾ ಮತ್ತು ಬುರುಂಡಿ ಇವುಗಳು ಭಾರತದಿಂದ ರಫ್ತಾಗುವ ಸಕ್ಕರೆಯಲ್ಲಿ ಅತಿ ದೊಡ್ಡ ಪಾಲನ್ನು ಹೊಂದಿವೆ. ಇದರ ಜೊತೆಗೆ ಏಷ್ಯಾದ ನೆರೆಹೊರೆಯ ದೇಶಗಳಾದ ಬಾಂಗ್ಲಾದೇಶ, ಶ್ರೀಲಂಕಾ, ಯುಎಇ (UAE), ಯೆಮೆನ್, ನೇಪಾಳ, ವಿಯೆಟ್ನಾಂ ಮತ್ತು ಮಲೇಷ್ಯಾ ಭಾರತದಿಂದ ಸಕ್ಕರೆ ಆಮದು ಮಾಡಿಕೊಳ್ಳುತ್ತದೆ.
ಈ ದೇಶಗಳ ಹೊರತಾಗಿ ಅಮೆರಿಕ (USA) ಮತ್ತು ಯುರೋಪಿಯನ್ ಯೂನಿಯನ್ (EU) ದೇಶಗಳು ವಿಶೇಷ ಪರವಾನಗಿ ಅಡಿಯಲ್ಲಿ ಸಕ್ಕರೆ ಆಮದು ಮಾಡಿಕೊಳ್ಳುತ್ತವೆ. ಸದ್ಯ ಭಾರತ ಸರ್ಕಾರವು ಸಕ್ಕರೆ ರಫ್ತಿನ ಮೇಲೆ ನಿಷೇಧ ಹೇರಿದ್ದರೂ ಕೂಡ ಮುಂಚಿತವಾಗಿ ಒಪ್ಪಂದ ಮಾಡಿಕೊಂಡಿದ್ದ ಕೆಲವು ದೇಶಗಳಿಗೆ ಹಾಗೂ ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್‌ನಂತಹ ದೇಶಗಳಿಗೆ ನಿರ್ದಿಷ್ಟ ಕೋಟಾದ ಅಡಿಯಲ್ಲಿ ಮಾತ್ರ ಸೀಮಿತ ಪ್ರಮಾಣದ ರಫ್ತಿಗೆ ವಿನಾಯಿತಿ ನೀಡಿದೆ.

ರಫ್ತು ಪ್ರಮಾಣ ಎಷ್ಟು?
ಭಾರತದಿಂದ ಸಕ್ಕರೆ ರಫ್ತು ಮಾಡಿಕೊಳ್ಳುವ ಪ್ರಮಾಣವು ಪ್ರತಿ ವರ್ಷ ಸರ್ಕಾರದ ಕೋಟಾ ಮತ್ತು ನಿಯಮಗಳ ಆಧಾರದ ಮೇಲೆ ಬದಲಾಗುತ್ತಿರುತ್ತದೆ. ಪ್ರಸ್ತುತ ಸಾಲಿನಲ್ಲಿ (2025-26ರ ಮಾರುಕಟ್ಟೆ ವರ್ಷದಲ್ಲಿ) ಭಾರತ ಸರ್ಕಾರವು ದೇಶೀಯ ಮಾರುಕಟ್ಟೆಯ ದರ ನಿಯಂತ್ರಣಕ್ಕಾಗಿ ರಫ್ತಿನ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿದ್ದರಿಂದ, ಒಟ್ಟು ರಫ್ತು ಪ್ರಮಾಣ ಸುಮಾರು 7.5 ರಿಂದ 8 ಲಕ್ಷ ಟನ್‌ಗಳಷ್ಟಾಗಬಹುದು ಎಂದು ಅಂದಾಜಿಸಲಾಗಿದೆ.
ಸಂಪೂರ್ಣ ರಫ್ತು ಯಾವಾಗ ಆರಂಭ?
ಭಾರತ ಸರ್ಕಾರವು ಸಕ್ಕರೆ ರಫ್ತನ್ನು ‘ನಿರ್ಬಂಧಿತ’ (Restricted) ವಿಭಾಗದಿಂದ ಸಂಪೂರ್ಣ ‘ನಿಷೇಧಿತ’ (Prohibited) ವಿಭಾಗಕ್ಕೆ ಬದಲಾಯಿಸಿದ್ದು, ಈ ನಿಷೇಧವು ಪ್ರಸ್ತುತ 2026ರ ಸೆಪ್ಟೆಂಬರ್ 30 ರವರೆಗೆ ಜಾರಿಯಲ್ಲಿರಲಿದೆ.
2026ರ ಅಕ್ಟೋಬರ್ ಅಥವಾ ನವೆಂಬರ್ ತಿಂಗಳ ಪರಿಸ್ಥಿತಿಯ ಆಧಾರದ ಮೇಲೆ ಸಕ್ಕರೆ ರಫ್ತು ಮತ್ತೆ ಮೊದಲಿನಂತೆ ಮುಕ್ತವಾಗಿ ಆರಂಭವಾಗಲಿದೆ. ಈ ವರ್ಷದ ಮುಂಗಾರು ಮಳೆ ಉತ್ತಮವಾಗಿ ಬಂದು, ಅಕ್ಟೋಬರ್ ವೇಳೆಗೆ ಕಬ್ಬಿನ ಹೊಸ ಇಳುವರಿ ಮತ್ತು ಸಕ್ಕರೆ ಉತ್ಪಾದನೆ ನಿರೀಕ್ಷೆಗಿಂತ ಹೆಚ್ಚಾಗುವ ಮುನ್ಸೂಚನೆ ಸಿಕ್ಕರೆ ಮೊದಲಿನಂತೆ ರಫ್ತು ಶುರುವಾಗುತ್ತದೆ.
ಸೆಪ್ಟೆಂಬರ್ 30ಕ್ಕೆ ಪ್ರಸ್ತುತ ಮಾರುಕಟ್ಟೆ ವರ್ಷ ಮುಗಿಯಲಿದ್ದು, ಆಗ ದೇಶದಲ್ಲಿರುವ ಸಕ್ಕರೆ ದಾಸ್ತಾನನ್ನು (Opening Stocks) ಸರ್ಕಾರ ಪರೀಕ್ಷಿಸುತ್ತದೆ. ದೇಶದ ಅಗತ್ಯಕ್ಕೆ ಬೇಕಾಗುವಷ್ಟು ಸಕ್ಕರೆ ಸಂಗ್ರಹವಿದೆ ಎಂದು ಖಚಿತವಾದರೆ ಮಾತ್ರ ರಫ್ತು ನೀತಿಯನ್ನು ಸಡಿಲಗೊಳಿಸಲಾಗುತ್ತದೆ.

ಸರ್ಕಾರವು ಇಂಧನಕ್ಕಾಗಿ ಕಬ್ಬಿನಿಂದ ಎಥನಾಲ್ ಉತ್ಪಾದನೆಗೂ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ, ದೇಶೀಯ ಸಕ್ಕರೆ ಲಭ್ಯತೆ ಸಂಪೂರ್ಣವಾಗಿ ಸ್ಥಿರವಾದ ಮೇಲಷ್ಟೇ ರಫ್ತಿಗೆ ಮುಕ್ತ ಅವಕಾಶ ಸಿಗುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಕೇವಲ ಅಮೆರಿಕ, ಯುರೋಪಿಯನ್ ಯೂನಿಯನ್‌ನಂತಹ ದೇಶಗಳಿಗೆ ಮೊದಲೇ ನಿಗದಿಯಾದ ವಿಶೇಷ ಕೋಟಾ ಅಡಿಯಲ್ಲಿ ಮತ್ತು ಇತರ ದೇಶಗಳ ಆಹಾರ ಭದ್ರತೆಯ ತುರ್ತು ಕೋರಿಕೆಯ ಮೇರೆಗೆ ಸರ್ಕಾರಿ ಮಟ್ಟದಲ್ಲಿ ಮಾತ್ರ ಸೀಮಿತ ರಫ್ತಿಗೆ ಅವಕಾಶವಿರುತ್ತದೆ.
ಪರಿಣಾಮ ಏನು?
ಬ್ರೆಜಿಲ್ ಬಿಟ್ಟರೆ ಭಾರತವೇ ವಿಶ್ವದ ಅತಿ ದೊಡ್ಡ ಸಕ್ಕರೆ ಉತ್ಪಾದಕ ದೇಶವಾಗಿರುವುದರಿಂದ ಈ ನಿರ್ಧಾರವು ಜಾಗತಿಕ ಆಹಾರ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಸಕ್ಕರೆ ಬೆಲೆ ಏರಿಕೆಯಿಂದಾಗಿ ಜಾಗತಿಕವಾಗಿ ಸಿಹಿತಿಂಡಿ, ಸಾಫ್ಟ್ ಡ್ರಿಂಕ್ಸ್ ಮತ್ತು ಬೇಕರಿ ಉತ್ಪನ್ನಗಳ ಬೆಲೆ ಹೆಚ್ಚಾಗಲಿದೆ.
ಭಾರತವು ಮಾರುಕಟ್ಟೆಯಿಂದ ಹಿಂದೆ ಸರಿದಿರುವುದರಿಂದ ಬ್ರೆಜಿಲ್ ಮತ್ತು ಥೈಲ್ಯಾಂಡ್‌ನಂತಹ ಪ್ರತಿಸ್ಪರ್ಧಿ ದೇಶಗಳು ಏಷ್ಯಾ ಮತ್ತು ಆಫ್ರಿಕಾದ ದೇಶಗಳಿಗೆ ಹೆಚ್ಚಿನ ರಫ್ತು ಮಾಡಲು ದಾರಿ ಸುಗಮವಾಗಿದೆ.

