– ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅವಾಂತರ
ಧಾರವಾಡ: ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದ್ದು, ರೈತರು (Farmers) ಬಿತ್ತನೆ ಕಾರ್ಯ ಮಾಡಲು ಹವಾಮಾನ ಇಲಾಖೆ ವಿಜ್ಞಾನಿಗಳು ಸೂಚನೆ ನೀಡಿದ್ದಾರೆ.
ಕೇರಳಕ್ಕೆ ಮುಂಗಾರು ಮಳೆ (Rain) ತಡವಾಗಿ ಪ್ರವೇಶವಾದರೂ, ರಾಜ್ಯಕ್ಕೆ ಸಮಯಕ್ಕೆ ಸರಿಯಾಗಿ ಪ್ರವೇಶವಾಗಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ವ್ಯಾಪಕ ಮಳೆಯಾಗುವ ಸಾದ್ಯತೆ ಇದೆ. ಉಳಿದ ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಧಾರವಾಡ ಕೃಷಿ ವಿವಿಯ ಹವಾಮಾನ ಇಲಾಖೆ ವರದಿ ಮಾಡಿದೆ. ಇದನ್ನೂ ಓದಿ: ಕೇರಳಕ್ಕೆ ಎಂಟ್ರಿ ಕೊಟ್ಟ ಮುಂಗಾರು – ಇನ್ನೆರೆಡು ದಿನದಲ್ಲಿ ಕರ್ನಾಟಕಕ್ಕೆ ಭಾರೀ ಮಳೆ ಮುನ್ಸೂಚನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅವಾಂತರ
ರಾಜ್ಯಕ್ಕೆ ಮುಂಗಾರು ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೇರಳಂ ರಾಜ್ಯಕ್ಕೆ ಈಗಾಗಲೇ ಮುಂಗಾರು ಮಾರುತಗಳು ಅಪ್ಪಳಿಸಿದ್ದು, ರಾಜ್ಯಕ್ಕೆ ಮುಂಗಾರು ಆಗಮನಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಡಳಿತ ಭಾರೀ ಮಳೆಯನ್ನು ಎದುರಿಸಲು ಸಜ್ಜಾಗಿದೆ. ಈ ನಡುವೆ ಹಲವೆಡೆ ಸುರಿದ ಭಾರೀ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದ್ದು ಕೆಲವೆಡೆ ಅವಾಂತರವನ್ನೇ ಸೃಷ್ಟಿಸಿದೆ. ಮೊದಲ ಮಳೆಗೆ ರಾಷ್ಟ್ರೀಯ ಹೆದ್ದಾರಿಯ ಕಳೆಪೆ ಕಾಮಗಾರಿ ಅನಾವರಣಗೊಂಡಿದೆ. ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಮಿಜಾರಿನಲ್ಲಿ ನೀರಿನ ರಭಸಕ್ಕೆ ಮಣ್ಣು ಕುಸಿದು ಜಲ್ಲಿಕಲ್ಲು ನೀರುಪಾಲಾಗಿದೆ. ಯಾವುದೇ ಕ್ಷಣದಲ್ಲೂ ಮತ್ತಷ್ಟು ಕುಸಿತ ಆಗೋ ಭೀತಿ ಎದುರಾಗಿದೆ. ಅಪಾಯದ ನಡುವೆಯೂ ವಾಹನ ಸಂಚಾರ ಆಗುತ್ತಿದೆ. ಮೊದಲ ಮಳೆಯನ್ನೇ ತಡೆದುಕೊಳ್ಳದ ಕಾಮಗಾರಿಯ ಗುಣಮಟ್ಟ ಹೇಗಿರಬಹುದೆಂದು ಜನ ಡಿಬಿಎಲ್ ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ, ಕೇರಳಂ ರಾಜ್ಯದಲ್ಲಿ ಸುರಿದ ಭಾರೀ ಮಳೆಗೆ ಕಾಸರಗೋಡಿನ ಕಾಂಞಂಗಾಡ್ ಯುಬಿಎಂಸಿಶಾಲೆಯ ಆವರಣದ ಗೋಡೆ ಕುಸಿದುಬಿದ್ದಿದ್ದು. ಯಾವುದೇ ಅನಾಹುತ ಸಂಭವಿಸಿಲ್ಲ. ಇನ್ನು ಕಾಂಪೌಂಡ್ ಕುಸಿತದ ಭೀಕರ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.

ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 92 ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಲಾಗಿದೆ. ಬೆಳ್ತಂಗಡಿಯಲ್ಲಿ ಗರಿಷ್ಠ 32 ಹಾಗೂ ಉಳ್ಳಾಲದಲ್ಲಿ ಕನಿಷ್ಠ 3 ಸಂಭವನೀಯ ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಲಾಗಿದೆ. 88 ಕಡೆ ಸಂಭವನೀಯ ಭೂಕುಸಿತ ಪ್ರದೇಶವೆಂದು ಗುರುತಿಸಲಾಗಿದೆ. ಇದು ಕೂಡಾ ಬೆಳ್ತಂಗಡಿಯಲ್ಲಿ ಗರಿಷ್ಠ 35 ಹಾಗೂ ಪುತ್ತೂರಿನಲ್ಲಿ ಕನಿಷ್ಠ 3 ಕಡೆ ಭೂ ಕುಸಿತ ಪ್ರದೇಶಗಳನ್ನು ಗುರುತಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ ಒಟ್ಟು 115 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ.
ಅಧಿಕಾರಿಗಳು ಸರ್ವ ಸನ್ನದ್ಧ ಸ್ಥಿತಿಯಲ್ಲಿ ಇರಬೇಕೆಂದು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಂಗಳೂರು ಮಹಾ ನಗರ ಪಾಲಿಕೆಯ 60 ವಾರ್ಡ್‌ಗಳಿಗೆ ಇಂಜಿನಿಯರ್‌ಗಳನ್ನು, 223 ಗ್ರಾಪಂ ವ್ಯಾಪ್ತಿಯಲ್ಲಿ ಪಿಡಿಒಗಳು, 13 ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಾಧಿಕಾರಿಗಳನ್ನು ಇನ್ಸಿಡೆಂಟ್ ಕಮಾಂಡರ್‌ಗಳಾಗಿ ನೇಮಕ ಮಾಡಲಾಗಿದೆ.
ಜಿಲ್ಲಾಡಳಿತದಿಂದ ವಿವಿಧ ಪ್ರದೇಶಗಳಿಗೆ ನೇಮಿಸಲಾಗಿರುವ ಇನ್ಸಿಡೆಂಟ್ ಕಮಾಂಡರ್‌ಗಳು ಜಾಗೃತರಾಗಿದ್ದು, ಸಾರ್ವಜನಿಕ ದೂರುಗಳಿಗೆ ಸ್ಪಂದಿಸುವುದು ಮತ್ತು ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯೊಳಗೆ ನಿರಂತರ 25 ಸಿಬ್ಬಂದಿಯನ್ನೊಳಗೊಂಡ ಎನ್‌ಡಿಆರ್‌ಎಫ್ ತಂಡ ಪುತ್ತೂರು ತಾಲೂಕಿನಲ್ಲಿ ನಿಯೋಜಿಸಲಾಗಿದ್ದು, 10 ಸಿಬ್ಬಂದಿಯ ಎನ್‌ಡಿಆರ್‌ಎಫ್ ತಂಡವನ್ನು ಸುಬ್ರಹ್ಮಣ್ಯದಲ್ಲಿ ನಿಯೋಜಿಸಲಾಗಿದೆ. ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸಲು 28 ಬೋಟ್ ಕಟ್ಟರ್, ಲೈಫ್ ಜಾಕೆಟ್, ಜೀವ ರಕ್ಷಕರು, ಜೆಸಿಬಿ ಯಂತ್ರ, ಟಿಪ್ಪರ್, ಕ್ರೇನ್‌ಗಳನ್ನು ಸಿದ್ಧಗೊಳಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಕಳೆದ ಬಾರಿಯ ಮಳೆಗಾಲದಲ್ಲಿ ಸಾಕಷ್ಟು ಸಾವು-ನೋವುಗಳನ್ನು ಕಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯೂ ಮಳೆಗಾಲ ನಡುಕ ಹುಟ್ಟಿಸಿದೆ. ಒಟ್ಟಿನಲ್ಲಿ ಉತ್ತಮ ಮಳೆಯಾಗಲಿ, ಆದರೆ ಜನರ ಬದುಕಲ್ಲಿ ಕಾರ್ಮೋಡ ಆವರಿಸದಿರಲಿ ಅನ್ನೋದೇ ನಮ್ಮ ಆಶಯ ಎಂದಿದ್ದಾರೆ. ಇದನ್ನೂ ಓದಿ: 3,395 ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ
