ಮಡಿಕೇರಿ: ಕಾಡಾನೆ ದಾಳಿಗೆ ವಿರಾಜಪೇಟೆಯ ಯಡೂರು ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಬಲಿಯಾಗಿದ್ದಾರೆ.
ಯಡೂರು ಗ್ರಾಮದ ಅಣ್ಣಪ್ಪ (40) ಕಾಡಾನೆ ದಾಳಿಗೆ ಬಲಿಯಾದ ಕಾರ್ಮಿಕ. ಹಸುವನ್ನು ಹುಡುಕಲು ಅಣ್ಣಪ್ಪ ಕಾಫಿತೋಟಕ್ಕೆ ತೆರಳಿದ್ದರು. ಈ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಇದರಿಂದ ಅವರ ಸೊಂಟ ಮತ್ತು ಬೆನ್ನಿಗೆ ತೀವ್ರ ಪೆಟ್ಟಾಗಿತ್ತು. ಅವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಿತಿ ಮೀರಿದ ʻಕೆ.ಪಿ ಕಾಲರ್ʼ ಪುಂಡಾಟ – ಸೆರೆಗೆ ಕುಮ್ಕಿ ಆನೆಗಳ ತಂಡ ಆಗಮನ
ಶಾಸಕ ಎ.ಎಸ್. ಪೊನ್ನಣ್ಣ ಅವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು, ಸರ್ಕಾರದ ಪರಿಹಾರ ಧನವನ್ನೂ ವಿತರಿಸಿದ್ದಾರೆ. ಇನ್ನೊಂದೆಡೆ, ಈ ದುರಂತವನ್ನು ಖಂಡಿಸಿ ವಿರಾಜಪೇಟೆ ತಾಲೂಕಿನ ಒಂಟಿಯಂಗಡಿಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಹೋರಾಟಕ್ಕೆ ಜನ ಬೆಂಬಲ ಸೂಚಿಸಿದ್ದಾರೆ.
ಪ್ರತಿಭಟನಾಕಾರರು, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಪಷ್ಟ ಭರವಸೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಘಟನೆಯ ಬಳಿಕ ಯಡೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಭೀತಿ ಮನೆ ಮಾಡಿದೆ. ಇದನ್ನೂ ಓದಿ: ಹಗಲು ವಿಶ್ರಾಂತಿ, ರಾತ್ರಿ ವೇಳೆ ಪುಂಡಾಟ – ಸಿಕ್ಕಸಿಕ್ಕ ವಾಹನ, ಜನರ ಮೇಲೆ ʻಗಜಾಸುರʼನ ಅಟ್ಟಹಾಸ
