– ರಸ್ತೆಯಿಲ್ಲ… ಸೇತುವೆಯಿಲ್ಲ… ಬದುಕುವ ಹಕ್ಕಿಗೂ ಹೋರಾಟ
ಮಡಿಕೇರಿ: ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳು ಕಳೆದಿವೆ. ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಆದರೆ, ಇಂದಿಗೂ ಕೆಲವು ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳ ಬೆಳಕು ತಲುಪಿಲ್ಲ. ಮಳೆಗಾಲ ಬಂದರೆ ಹೊಟ್ಟೆ ತುಂಬಿಸಿಕೊಳ್ಳುವುದೇ ದೊಡ್ಡ ಸವಾಲು. ಪುಟ್ಟ ಮಕ್ಕಳು ಶಾಲೆಗೆ ಹೋಗಬೇಕೆಂದರೆ ಜೀವವನ್ನೇ ಪಣಕ್ಕಿಡಬೇಕಾದ ಪರಿಸ್ಥಿತಿ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಅನೆಕಲ್‌ತಮಲೆ ಗ್ರಾಮದ ಜನರ ಕಣ್ಣೀರಿನ ಕಥೆ ಇದು. ಇಲ್ಲಿದೆ ಒಂದು ಮಾನವೀಯ ವರದಿ.

ಸುತ್ತಲೂ ದಟ್ಟ ಕಾಡು… ಹಸಿರಿನ ಸಿರಿ… ಧುಮ್ಮಿಕ್ಕಿ ಹರಿಯುವ ಜಲಪಾತ… ಪ್ರಕೃತಿಯ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ಆದರೆ, ಇದೇ ಪ್ರಕೃತಿಯ ಮಡಿಲಿನಲ್ಲಿ ಬದುಕುತ್ತಿರುವ ಕೆಲ ಕುಟುಂಬಗಳ ಬದುಕು ಮಾತ್ರ ಪ್ರತಿದಿನ ನೋವಿನ ಪಯಣವಾಗಿದೆ.
ಹೌದು, ಮಡಿಕೇರಿ ತಾಲೂಕಿನ ಅನೆಕಲ್‌ತಮಲೆ ಗ್ರಾಮದಲ್ಲಿ ಕೇವಲ 7 ಕುಟುಂಬಗಳು ವಾಸಿಸುತ್ತಿವೆ. ಆದರೆ, ಈ ಕುಟುಂಬಗಳಿಗೆ ರಸ್ತೆ, ಸೇತುವೆ, ಆರೋಗ್ಯ, ಶಿಕ್ಷಣ ಸೇರಿದಂತೆ ಮೂಲಭೂತ ಸೌಲಭ್ಯಗಳೇ ಇಲ್ಲ. ಮಳೆಗಾಲ ಆರಂಭವಾದರೆ ಇವರ ಬದುಕು ಇನ್ನಷ್ಟು ದುಸ್ತರವಾಗುತ್ತದೆ. ಗ್ರಾಮ ಸಂಪೂರ್ಣವಾಗಿ ಹೊರಜಗತ್ತಿನ ಸಂಪರ್ಕ ಕಳೆದುಕೊಳ್ಳುತ್ತದೆ. ಕೆಲಸಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಆಹಾರ ಸಾಮಗ್ರಿಗಳು ತಲುಪುವುದಿಲ್ಲ. ಕೆಲವೊಮ್ಮೆ ಹೊಟ್ಟೆ ಹಸಿವು ತಣಿಸಿಕೊಳ್ಳಲು ಕಾಡಿನಲ್ಲಿ ಸಿಗುವ ಗೇಡೆ ಗೆಣಸನ್ನೇ ಬೇಯಿಸಿ ತಿನ್ನುವ ಪರಿಸ್ಥಿತಿ ಎದುರಾಗುತ್ತದೆ.

ಇನ್ನೂ ಈ ಗ್ರಾಮದ ಪುಟ್ಟ ಮಕ್ಕಳ ನೋವು ಮತ್ತಷ್ಟು ದೊಡ್ಡದು. ಪ್ರತಿದಿನ ಶಾಲೆಗೆ ಹೋಗಲು ಶಂಖಪಾಲದ ಮೇಲೆ ನಡೆದುಕೊಂಡೇ ಹೋಗಬೇಕು. ಒಂದು ಕಡೆ ಉಕ್ಕಿ ಹರಿಯುವ ನೀರು… ಮತ್ತೊಂದು ಕಡೆ ಜೀವಭಯ. ಆದರೂ, ಶಿಕ್ಷಣಕ್ಕಾಗಿ ಮಕ್ಕಳು ಪ್ರತಿದಿನ ಇದೇ ಅಪಾಯಕಾರಿ ದಾರಿಯನ್ನು ಅವಲಂಬಿಸಬೇಕಾಗಿದೆ.
ಮಳೆಗಾಲದಲ್ಲಿ ಈ ಗ್ರಾಮದಲ್ಲಿ ಯಾರಿಗಾದರೂ ಅನಾರೋಗ್ಯ ಉಂಟಾದರೆ, ಆಸ್ಪತ್ರೆಗೆ ಕರೆದೊಯ್ಯುವುದೇ ಜೀವದ ಹೋರಾಟ. ಗರ್ಭಿಣಿಯರು, ವೃದ್ಧರು ಹಾಗೂ ಮಕ್ಕಳ ಪರಿಸ್ಥಿತಿ ಮಳೆಗಾಲದಲ್ಲಿ ಮತ್ತಷ್ಟು ಸಂಕಷ್ಟಕರವಾಗುತ್ತದೆ. ಒಂದೆಡೆ ಪ್ರಕೃತಿ ತನ್ನ ಸೌಂದರ್ಯವನ್ನು ಧಾರೆ ಎರೆಯುತ್ತಿದ್ದರೆ, ಮತ್ತೊಂದೆಡೆ ಇದೇ ಪ್ರಕೃತಿಯ ನಡುವೆ ಬದುಕುತ್ತಿರುವ ಈ ಕುಟುಂಬಗಳು ತಮ್ಮ ಮೂಲಭೂತ ಹಕ್ಕುಗಳಿಗಾಗಿ ಪರದಾಡುತ್ತಿವೆ.

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ, ಅಭಿವೃದ್ಧಿಯ ಪಥ ಇನ್ನೂ ಈ ಗ್ರಾಮವನ್ನು ತಲುಪಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈ ಗ್ರಾಮವೇ ಜೀವಂತ ಸಾಕ್ಷಿಯಾಗಿದೆ. ಹೀಗಾಗಿ, ಇಲ್ಲಿನ ಗ್ರಾಮಸ್ಥರು, “ನಮಗೆ ರಸ್ತೆ ಬೇಕು… ಸುರಕ್ಷಿತ ಸೇತುವೆ ಬೇಕು… ಮಕ್ಕಳಿಗೆ ಭದ್ರವಾಗಿ ಶಾಲೆಗೆ ಹೋಗುವ ವ್ಯವಸ್ಥೆ ಬೇಕು… ಸರ್ಕಾರ ನಮ್ಮ ಗ್ರಾಮವನ್ನು ಗಮನಿಸಬೇಕು…” ಎಂದು ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ, ಪ್ರಕೃತಿಯ ಸೌಂದರ್ಯದ ನಡುವೆ ಬದುಕುತ್ತಿರುವ ಅನೆಕಲ್‌ತಮಲೆ ಗ್ರಾಮದ ಈ 7 ಕುಟುಂಬಗಳಿಗೆ ಅಭಿವೃದ್ಧಿ ಎಂಬುದು ಇನ್ನೂ ಕನಸಾಗಿದೆ.
ಒಂದು ರಸ್ತೆ… ಒಂದು ಸುರಕ್ಷಿತ ಸೇತುವೆ… ಮಕ್ಕಳಿಗೆ ಶಿಕ್ಷಣದ ಭದ್ರತೆ… ಇಷ್ಟೇ ಇವರ ಬೇಡಿಕೆ. ಈ ವರದಿಯಾದರೂ ಸರ್ಕಾರದ ಕಣ್ಣು ತೆರೆಸಲಿ. ಈ ನತದೃಷ್ಟ ಕುಟುಂಬಗಳ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಲಿ ಎಂಬುದು ಎಲ್ಲರ ಆಶಯ.

