-ಚಿಕಿತ್ಸೆ ಬಳಿಕ ಡಿಸ್ಚಾರ್ಜ್
ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ (A.R Rahman) ಅವರ ಪುತ್ರ, ಗಾಯಕ ಅಮೀನ್ ರೆಹಮಾನ್ (Ameen Rahman) ಕಾರು ಅಪಘಾತಕ್ಕೀಡಾಗಿರುವ ಘಟನೆ ಚೆನ್ನೈನ (Chennai) ಗಿಂಡಿಯ ಕತಿಪಾರಾ ಫ್ಲೈಓವರ್ ಸಮೀಪ ಸೋಮವಾರ ಮುಂಜಾನೆ ನಡೆದಿದೆ.
ಸೋಮವಾರ ಮುಂಜಾನೆ ಸುಮಾರು 3:30ರ ವೇಳೆಗೆ ಈ ಅಪಘಾತ ಸಂಭವಿಸಿದೆ. ಅಮೀನ್ ಅವರು ಕೊಯಂಬೇಡು ಕಡೆಯಿಂದ ಚೆನ್ನೈ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಒಲಿಂಪಿಯಾ ಟೆಕ್ ಪಾರ್ಕ್ (Olympia Tech Park) ಸಿಗ್ನಲ್ ಸಮೀಪ ಪಕ್ಕದ ರಸ್ತೆಯಿಂದ ಮುಖ್ಯ ರಸ್ತೆಗೆ ಬಂದ ವ್ಯಾಗನ್-ಆರ್ ಕಾರಿಗೆ ಅಮೀನ್ ಪ್ರಯಾಣಿಸುತ್ತಿದ್ದ ಪೋರ್ಷೆ ಕಾರು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಬಳಿಕ ಅಮೀನ್ ಹಾಗೂ ಕಾರಿನ ಚಾಲಕನನ್ನು ತಕ್ಷಣವೇ ಕಾವೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು ವ್ಯಾಗನ್-ಆರ್ ಕಾರಿನಲ್ಲಿದ್ದ ಗಾಯಾಳುವನ್ನು ಕಲೈಂಜರ್ ಸೆಂಟಿನರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದ ಬಳಿಕ ಅವರನ್ನೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಅಪಘಾತದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತನಿಖೆಯ ಭಾಗವಾಗಿ ಅಡ್ಯಾರ್ ಟ್ರಾಫಿಕ್ ಇನ್ವೆಸ್ಟಿಗೇಷನ್ ವಿಂಗ್ ಎರಡೂ ವಾಹನಗಳನ್ನು ವಶಕ್ಕೆ ಪಡೆದಿದೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ಪೊಲೀಸರು ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.
ಅಮೀನ್ ರೆಹಮಾನ್ ಯಾರು?
ಅಮೀನ್ ರೆಹಮಾನ್ ಅವರು ಖ್ಯಾತ ಸಂಗೀತ ನಿರ್ದೇಶಕ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್.ರೆಹಮಾನ್ ಮತ್ತು ಸೈರಾ ಬಾನು ಅವರ ಪುತ್ರ. ತಂದೆಯ ಹಾದಿಯಲ್ಲೇ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಅಮೀನ್, ಗಾಯಕನಾಗಿ ಹಲವು ಭಾಷೆಗಳಲ್ಲಿ ಹಾಗೂ ವಿಭಿನ್ನ ಸಂಗೀತ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ.
2015ರಲ್ಲಿ ಮಣಿರತ್ನಂ ನಿರ್ದೇಶನದ `ಓ ಕಾದಲ್ ಕಣ್ಮಣಿ’ ಚಿತ್ರದ ಮೂಲಕ ಅಮೀನ್ ಹಿನ್ನೆಲೆ ಗಾಯನಕ್ಕೆ ಕಾಲಿಟ್ಟರು. ಈ ಸಿನಿಮಾದ `ಮೌಲಾ ಸಲ್ಲೀ ವ ಸಲ್ಲಿಂ’ ಹಾಡಿಗೆ ಅವರು ಧ್ವನಿ ನೀಡಿದ್ದರು. ಅಮೀನ್ ವಿಭಿನ್ನ ರೀತಿಯ ಸಂಗೀತದಲ್ಲಿ ಪ್ರಯೋಗಗಳನ್ನು ನಡೆಸುತ್ತಾ ಬಂದಿದ್ದಾರೆ. ಹಲವು ಭಾಷೆಗಳ ಹಾಡುಗಳಿಗೆ ಧ್ವನಿ ನೀಡಿರುವ ಅವರು, ತಮ್ಮ ತಂದೆ ಎ.ಆರ್.ರೆಹಮಾನ್ ಅವರ ಅಂತಾರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳಲ್ಲೂ ವೇದಿಕೆ ಹಂಚಿಕೊಂಡಿದ್ದಾರೆ. ವಿಶ್ವದ ವಿವಿಧ ಭಾಗಗಳಲ್ಲಿ ಪ್ರೇಕ್ಷಕರ ಮುಂದೆ ಪ್ರದರ್ಶನ ನೀಡುವ ಮೂಲಕ ತಮ್ಮ ಸಂಗೀತ ಅನುಭವವನ್ನು ಹೆಚ್ಚಿಸಿಕೊಂಡಿದ್ದಾರೆ.
ಇತ್ತೀಚೆಗೆ ರಾಮ್ ಚರಣ್ ಅಭಿನಯದ `ಪೆಡ್ಡಿ’ ಸಿನಿಮಾದ `ಚಿಕಿರಿ ಚಿಕಿರಿ’ ಹಾಡಿನ ತಮಿಳು ಆವೃತ್ತಿಗೆ ಅಮೀನ್ ಧ್ವನಿ ನೀಡಿದ್ದಾರೆ. ಇದಲ್ಲದೆ ಗಾಯಕಿ-ಗೀತರಚನೆಕಾರ್ತಿ ಜಸ್ಲೀನ್ ರಾಯಲ್ ಅವರೊಂದಿಗೆ `ಭೀಗಿ ಭೀಗಿ’ ಎಂಬ ಸ್ವತಂತ್ರ ಹಾಡಿನಲ್ಲೂ ಅವರು ಕೆಲಸ ಮಾಡಿದ್ದಾರೆ. ಈ ಹಾಡಿನ ಮ್ಯೂಸಿಕ್ ವಿಡಿಯೋದಲ್ಲಿ ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ನಟಿಸಿದ್ದಾರೆ.

