ಯಾದಗಿರಿ: ಚಾಮರಾಜನಗರ ಸುಳ್ವಾಡಿ ಮಾರಮ್ಮ ದೇವಿ ಪ್ರಸಾದಕ್ಕೆ ವಿಷ ಬೆರೆಸಿ 17 ಮಂದಿಯ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ದ್ವೇಷದಿಂದ ಗ್ರಾಮದ ಕುಡಿಯುವ ನೀರಿನ ಟ್ಯಾಂಕಿಗೆ ಕೀಟನಾಶಕ ಬೆರೆಸಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಮುದನೂರ ಕೆ ಗ್ರಾಮದಲ್ಲಿ ನಡೆದಿದೆ.
ಗ್ರಾಮಗಳಿಗೆ ನೀರು ಪೂರೈಸಲು ನಿರ್ಮಾಣ ಮಾಡಿದ್ದ ನೀರಿನ ಟ್ಯಾಂಕಿಗೆ ದುಷ್ಕರ್ಮಿಗಳು ಸುಮಾರು ಅರ್ಧ ಲೀಟರ್ ಎಂಡೋಸಲ್ಫಾನ್ ಕ್ರಿಮಿನಾಶಕ ಬೆರೆಸಿದ್ದು, ಇದೇ ನೀರನ್ನೇ ಶಾಖಾಪುರ, ತೆಗ್ಗಳ್ಳಿ ಗ್ರಾಮಕ್ಕೆ ಮಧ್ಯಾಹ್ನ 3 ಗಂಟೆಗೆ ನೀರು ಪೂರೈಕೆ ಮಾಡಲಾಗಿತ್ತು ಎಂಬ ಮಾಹಿತಿ ಲಭಿಸಿದೆ.
Advertisement
Advertisement
ಗ್ರಾಮದ ಜನರಿಗೆ ನೀರು ಪೂರೈಕೆ ಮಾಡುವ ವೇಳೆ ಪಂಪ್ ಆಪರೇಟರ್ ಮೌನೇಶ ಎಂಬವರು ನೀರಿನ ವಾಸನೆ ಕಂಡು ಅನುಮಾನಗೊಂಡಿದ್ದಾರೆ. ಈ ವೇಳೆ ನೀರನ್ನು ಪರೀಕ್ಷೆ ಮಾಡಲು ಮೌನೇಶ್ ಹಾಗೂ ಅವರ ತಾಯಿ ನಾಗಮ್ಮ ಸೇವನೆ ಮಾಡಿದ್ದು, ಆ ಬಳಿಕ ಕೆಲ ಸಮಯದಲ್ಲೇ ಅಸ್ವಸ್ಥರಾಗಿದ್ದಾರೆ. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ಆಪಾಯ ಇಲ್ಲ ಎನ್ನುವ ಮಾಹಿತಿ ಲಭಿಸಿದೆ. ಈ ಕುರಿತು ಮಾಹಿತಿ ಪಡೆದು ಸ್ಥಳೀಯ ಅಧಿಕಾರಿಗಳು ತಕ್ಷಣ ಎಚ್ಚೆತ್ತು ಗ್ರಾಮಗಳಿಗೆ ನೀರು ಪೂರೈಕೆಯನ್ನು ತಡೆದಿದ್ದಾರೆ. ಅಲ್ಲದೇ ಪೂರೈಕೆ ಮಾಡಲಾಗಿದ್ದ ನೀರನ್ನು ಸೇವನೆ ಮಾಡದಂತೆ ಗ್ರಾಮಗಳಲ್ಲಿ ಡಂಗೂರ ಸಾರಿ ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳ ಮುನ್ನೆಚ್ಚರಿಕೆಯಿಂದ ನಡೆಯಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ.
Advertisement
Advertisement
ಪ್ರತಿ ವರ್ಷ ಟ್ಯಾಂಕ್ ಹತ್ತಿರ ಪೈಪ್ ಹಾಗೂ ವೈರ್ ಕತ್ತರಿಸುತ್ತಿದ್ದ ಕಿಡಿಗೇಡಿಗಳು ಈ ಬಾರಿ ನೀರಿಗೆ ವಿಷ ಬೆರೆಸಿರುವ ಅನುಮಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಅಲ್ಲದೇ ದುಷ್ಕರ್ಮಿಗಳ ಈ ಕೃತ್ಯಕ್ಕೆ ಆತಂಕಗೊಂಡಿದ್ದಾರೆ. ಸದ್ಯ ಮುದನೂರ ಕೆ ನೀರಿನ ಟ್ಯಾಂಕ್ ಸ್ಥಳಕ್ಕೆ ಸುರಪುರ ತಾಲೂಕು ಅಧಿಕಾರಿ ಸುರೇಶ ಅಂಕಲಗಿ, ತಾಲೂಕು ಪಂಚಾಯಿತಿ ಇಓ ಜಗದೇವಪ್ಪ, ಪಿಡಿಓ ಸಿದ್ರಾಮಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಸ್ಥರಿಗೆ ಈ ಬಗ್ಗೆ ಮಾಹಿತಿ ನೀಡಿ ಭಯ ಪಡದಂತೆ ತಿಳಿಸಿದ್ದಾರೆ. ಅಲ್ಲದೇ ಗ್ರಾಮದ ಎಲ್ಲಾ ಮನೆಗಳಲ್ಲಿ ಸಂಗ್ರಹಿಸಿದ್ದ ನೀರನ್ನು ಖಾಲಿ ಮಾಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಘಟನೆ ಬಗ್ಗೆ ಕೆಂಬಾವಿ ಪೊಲೀಸ್ ಠಾಣೆಯಲ್ಲಿ ಘಟನೆ ಬಗ್ಗೆ ದೂರು ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv