– SPGಯಿಂದ ಇಂಚಿಂಚೂ ಪರಿಶೀಲನೆ; 10 ದಿನಗಳ ಮುಂಚೆಯೇ ಬೆಂಗ್ಳೂರಲ್ಲಿ ಬೀಡುಬಿಟ್ಟಿರೋ ಟೀಮ್
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ಹಿನ್ನೆಲೆ ರಾಜಧಾನಿಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಪ್ರಧಾನಿ ಸಂಚರಿಸಲಿರುವ ರಸ್ತೆಗಳಲ್ಲಿ ಹದ್ದಿನ ಕಣ್ಣಿಡಲಾಗಿದ್ದು, ಸಣ್ಣ ಭದ್ರತಾ ಲೋಪವೂ ಆಗದಂತೆ SPG (ವಿಶೇಷ ರಕ್ಷಣಾ ಪಡೆ) ಹಾಗೂ ಬೆಂಗಳೂರು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಬರೋಬ್ಬರಿ 10 ದಿನಗಳ ಮುಂಚೆಯೇ SPG ತಂಡ ಬೆಂಗಳೂರಿಗೆ ಆಗಮಿಸಿದ್ದು, ಪ್ರಧಾನಿ ಸಂಚರಿಸಲಿರುವ ರಸ್ತೆ, ಮೆಟ್ರೋ ರೈಲು ಮಾರ್ಗ ಹಾಗೂ ವೇದಿಕೆ ಕಾರ್ಯಕ್ರಮದ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದೆ. SPGಯ 13 ತಂಡಗಳು ರಸ್ತೆಗಳನ್ನ ಇಂಚಿಂಚೂ ಪರಿಶೀಲಿಸುತ್ತಿದ್ದು, ಭದ್ರತಾ ವ್ಯವಸ್ಥೆಯನ್ನ ಖುದ್ದಾಗಿ ಮೇಲ್ವಿಚಾರಣೆ ಮಾಡುತ್ತಿವೆ.
ಜಿಲೆಟಿನ್ ಕಡ್ಡಿಗಳ ಬಾಕ್ಸ್ ಪತ್ತೆಯಾಗಿತ್ತು
ಕಳೆದ ಬಾರಿ ಪ್ರಧಾನಿ ಮೋದಿ ಸಂಚರಿಸಲಿದ್ದ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳ ಬಾಕ್ಸ್ ಪತ್ತೆಯಾಗಿದ್ದ ಘಟನೆ ಭದ್ರತಾ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿತ್ತು. ಈ ಪ್ರಕರಣದ ಬಳಿಕ ಭದ್ರತಾ ಲೋಪದ ಹಿನ್ನೆಲೆ 6 ಪೊಲೀಸ್ ಸಿಬ್ಬಂದಿಯನ್ನ ಅಮಾನತುಗೊಳಿಸಲಾಗಿತ್ತು. ಹೀಗಾಗಿ ಈ ಬಾರಿ ಯಾವುದೇ ರೀತಿಯ ಲೋಪಕ್ಕೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಪ್ರಧಾನಿ ಸಂಚರಿಸುವ ಮಾರ್ಗಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ಪ್ರಮುಖ ಕಟ್ಟಡಗಳ ಮೇಲೆ ಭದ್ರತಾ ಸಿಬ್ಬಂದಿ ನಿಯೋಜನೆ ಹಾಗೂ ಹೈರಿಸ್ಕ್ ಅಪಾರ್ಟ್ಮೆಂಟ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಅಪಾರ್ಟ್ಮೆಂಟ್ಗಳಿಗೆ ಹೊಸದಾಗಿ ಯಾರಾದರೂ ಆಗಮಿಸಿದರೆ ಅವರ ಮಾಹಿತಿಯನ್ನ ಪೊಲೀಸರಿಗೆ ನೀಡುವಂತೆ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ. ರಸ್ತೆಗಳಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸುವಂತೆಯೂ SPG ಸೂಚಿಸಿದೆ.
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಬೃಹತ್ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭದ್ರತಾ ಕಾರ್ಯಕ್ಕೆ ಮೂವರು ಜಂಟಿ ಪೊಲೀಸ್ ಆಯುಕ್ತರು, 15 ಡಿಸಿಪಿಗಳು, 20 ಎಸಿಪಿಗಳು, 30 ಇನ್ಸ್ಪೆಕ್ಟರ್ಗಳು, 100ಕ್ಕೂ ಹೆಚ್ಚು ಸಬ್ ಇನ್ಸ್ಪೆಕ್ಟರ್ಗಳು ಸೇರಿದಂತೆ 1 ಸಾವಿರಕ್ಕೂ ಅಧಿಕ ಸಿವಿಲ್ ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.
ಕಳೆದ ಬಾರಿ ಪ್ರಧಾನಿ ಮೋದಿ ಅವರು ಕಗ್ಗಲೀಪುರದ ತಾತಗುಣಿ ಬಳಿಯ ಆರ್ಟ್ ಆಫ್ ಲಿವಿಂಗ್ನ ರವಿಶಂಕರ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಿಲೆಟಿನ್ ಕಡ್ಡಿಗಳ ಬಾಕ್ಸ್ ಪತ್ತೆಯಾಗಿ ಭಾರೀ ಆತಂಕ ಸೃಷ್ಟಿಸಿತ್ತು. ಈ ಘಟನೆಯಿಂದ ಪಾಠ ಕಲಿತಿರುವ ಪೊಲೀಸರು ಈ ಬಾರಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿದ್ದಾರೆ.

