ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್(Anirudh Ravichander) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ತಂಡದ ಸಹ-ಮಾಲೀಕರು ಹಾಗೂ ಸಿಇಒ ಕಾವ್ಯಾ ಮಾರನ್(Kavya Maran) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು(ನ.11) ಗ್ರೀಸ್ನಲ್ಲಿ(Greece) ನಡೆದ ಅದ್ಧೂರಿ ಸಮಾರಂಭದಲ್ಲಿ ಈ ಜೋಡಿ ವಿವಾಹವಾಗಿದ್ದು, ನವದಂಪತಿಯ ಮೊದಲ ಫೋಟೋಗಳು ಪ್ರಕಟವಾಗಿವೆ.
ಮದುವೆಯ ಸುಂದರ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಅನಿರುದ್ಧ್, “My once in a lifetime, for a lifetime 11.11” ಎಂದು ಬರೆದುಕೊಂಡಿದ್ದಾರೆ. ಮದುವೆಯಲ್ಲಿ ಅನಿರುದ್ಧ್ ಐವರಿ ಬಣ್ಣದ ಕುರ್ತಾ, ಅದಕ್ಕೆ ಹೊಂದುವ ಪಂಚೆ ಹಾಗೂ ಸೂಕ್ಷ್ಮ ಕಸೂತಿ ಇರುವ ಉದ್ದನೆಯ ಜಾಕೆಟ್ ಧರಿಸಿ ಕ್ಲಾಸಿಕ್ ಲುಕ್ನಲ್ಲಿ ಮಿಂಚಿದ್ದಾರೆ. ಕಾವ್ಯಾ ಮಾರನ್ ಬ್ಲಶ್-ಪಿಂಕ್ ಬಣ್ಣದ ಕಸೂತಿ ಹಾಗೂ ಸೀಕ್ವಿನ್ ವರ್ಕ್ ಇರುವ ಲೆಹೆಂಗಾ, ಆಕರ್ಷಕ ಚೋಕರ್ ಹಾಗೂ ಕಿವಿಯೋಲೆಗಳನ್ನು ಧರಿಸಿ ಕಂಗೊಳಿಸಿದ್ದಾರೆ. ಪ್ಯಾಸ್ಟೆಲ್ ಬಣ್ಣದ ಉಡುಪಿನಲ್ಲಿ ನವಜೋಡಿ ಮುದ್ದಾಗಿ ಕಾಣಿಸಿಕೊಂಡಿದೆ.
ನವೆಂಬರ್ 10 ಮತ್ತು11 ರಂದು ಎರಡು ದಿನಗಳ ಕಾಲ ಮದುವೆ ಸಮಾರಂಭ ನಡೆದಿತ್ತು. ಮಂಗಳವಾರ ನಿಶ್ಚಿತಾರ್ಥ ನಡೆದರೆ, ಬುಧವಾರ ಮಾಂಗಲ್ಯ ಧಾರಣೆ ನಡೆಯಿತು. ಗುರು ಹಿರಿಯರ ಸಮ್ಮುಖದಲ್ಲಿ ದಂಪತಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪ್ರಕಟವಾಗಿರುವ ಫೋಟೋದಲ್ಲಿ ತಮಿಳುನಾಡು ಮಾಜಿ ಸಿಎಂ ಸ್ಟಾಲಿನ್, ಸೂಪರ್ಸ್ಟಾರ್ ರಜನಿಕಾಂತ್, ಸನ್ ಗ್ರೂಪ್ ಮುಖ್ಯಸ್ಥ ಹಾಗೂ ಕಾವ್ಯಾ ಮಾರನ್ ತಂದೆ ಕಲಾನಿಧಿ ಮಾರನ್, ದಯಾನಿಧಿ ಮಾರನ್ ಹಾಗೂ ಅವರ ಪತ್ನಿ ಪ್ರಿಯಾ ಮಾರನ್ ಇದ್ದಾರೆ.
ಚೆನ್ನೈನಲ್ಲಿ ಆರತಕ್ಷತೆ
ನವೆಂಬರ್ 21ರಂದು ಚೆನ್ನೈನಲ್ಲಿ ಭವ್ಯ ಆರತಕ್ಷತೆ (Reception) ಆಯೋಜಿಸಲಾಗಿದೆ. ಕಾವ್ಯಾ ಅವರ ಪೋಷಕರಾದ ಕಲಾನಿಧಿ ಮಾರನ್ ಮತ್ತು ಕಾವೇರಿ ಮಾರನ್ ಅವರು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿ ಆಹ್ವಾನಿಸಿದ ನಂತರ ತೆಲಂಗಾಣ ಸಿಎಂಒ (CMO) ಹಂಚಿಕೊಂಡ ಪೋಸ್ಟ್ನಲ್ಲಿ ಆರತಕ್ಷತೆಯ ದಿನಾಂಕ ಖಚಿತವಾಗಿತ್ತು.
ವರದಿಗಳ ಪ್ರಕಾರ, ಈ ಆರತಕ್ಷತೆಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್, ತೆಲಂಗಾಣ ಸಿಎಂ ಎ. ರೇವಂತ್ ರೆಡ್ಡಿ, ಆಂಧ್ರಪ್ರದೇಶ ಸಿಎಂ ಎನ್. ಚಂದ್ರಬಾಬು ನಾಯ್ಡು, ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ರಾಜಕೀಯ ಗಣ್ಯರಿಗೆ ಆಹ್ವಾನ ನೀಡಲಾಗಿದೆ.
ಚಿತ್ರರಂಗದಿಂದ ರಜನಿಕಾಂತ್, ಎ.ಆರ್. ರೆಹಮಾನ್, ಕಮಲ್ ಹಾಸನ್, ಧನುಷ್, ಅಜಿತ್ ಕುಮಾರ್ ಮತ್ತು ಶಾಲಿನಿ, ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ, ಶಿವಕಾರ್ತಿಕೇಯನ್ ಮತ್ತು ಆರತಿ, ನಿರ್ದೇಶಕ ನೆಲ್ಸನ್ ದಿಲೀಪ್ಕುಮಾರ್, ಆಂಡ್ರಿಯಾ ಜೆರೆಮಿಯಾ, ಪ್ರಸನ್ನ ಹಾಗೂ ಸೂರಜ್ ವೆಂಜರಮೂಡು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಲ್ಲದೆ, ಕಾವ್ಯಾ ಮಾರನ್ ಸನ್ರೈಸರ್ಸ್ ಹೈದರಾಬಾದ್ ತಂಡದೊಂದಿಗೆ ಗುರುತಿಸಿಕೊಂಡಿರುವುದರಿಂದ ಕ್ರಿಕೆಟ್ ಲೋಕದ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಸೇರಿದಂತೆ ಹಲವು ಆಟಗಾರರು ಭಾಗವಹಿಸುವ ಸಾಧ್ಯತೆಯಿದೆ.
View this post on Instagram
ಧನುಷ್ ನಟನೆಯ ‘ವೈ ದಿಸ್ ಕೊಲವೆರಿ ಡಿ’ ಹಾಡಿನ ಮೂಲಕ ಖ್ಯಾತಿ ಪಡೆದ ಅನಿರುದ್ಧ್, ಶಾರುಖ್ ಖಾನ್, ಪವನ್ ಕಲ್ಯಾಣ್, ವಿಜಯ್ ಸೇರಿದಂತೆ ಹಲವು ಸ್ಟಾರ್ ನಟರ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಇತ್ತೀಚೆಗೆ ರಜನಿಕಾಂತ್ ಅವರ ‘ಜೈಲರ್ 2’ ಚಿತ್ರಕ್ಕೂ ಕೆಲಸ ಮಾಡಿದ್ದಾರೆ. ಇನ್ನು ಕಾವ್ಯಾ ಮಾರನ್ ಯುಕೆಯ ವಾರ್ವಿಕ್ ಬ್ಯುಸಿನೆಸ್ ಸ್ಕೂಲ್ನಲ್ಲಿ ಎಂಬಿಎ ಪೂರ್ಣಗೊಳಿಸಿ, 2019ರಲ್ಲಿ ಸನ್ ಟಿವಿ ನೆಟ್ವರ್ಕ್ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಸೇರ್ಪಡೆಯಾದರು. ಪ್ರಸ್ತುತ ಸನ್ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಆಗಿದ್ದಾರೆ.
2025ರಲ್ಲಿ ರೆಡ್ಡಿಟ್ ಪೋಸ್ಟ್ ಮೂಲಕ ಇವರಿಬ್ಬರ ಮದುವೆ ವದಂತಿ ಹಬ್ಬಿತ್ತು. ಆಗ ಅನಿರುದ್ಧ್ “ಮದುವೆಯಾ? ಹಾಹಾ… ಕೂಲ್ ಆಗಿರಿ, ವದಂತಿ ಹಬ್ಬಿಸಬೇಡಿ” ಎಂದು ತಳ್ಳಿಹಾಕಿದ್ದರು. ಆದರೆ 2026ರ ಜೂನ್ನಲ್ಲಿ ಅನಿರುದ್ಧ್ ಅವರ ಚಿಕ್ಕಪ್ಪ ಹಾಗೂ ನಟ ವೈ.ಜಿ. ಮಹೇಂದ್ರನ್ ಸಂದರ್ಶನವೊಂದರಲ್ಲಿ ಇವರಿಬ್ಬರ ಮದುವೆಯಾಗುವುದು ಖಚಿತ ಎಂಬ ಸುಳಿವು ನೀಡಿದ್ದರು.


