ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಕುಲ್ಗಾಮ್ನಲ್ಲಿ ಸಿಆರ್ಪಿಎಫ್ (CRPF) ಚೆಕ್ಪೋಸ್ಟ್ ಮೇಲೆ ನಡೆದ ಗುಂಡಿನ ದಾಳಿ (Kulgam Attack) ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ದಾಳಿಗೂ ಎರಡು ದಿನದ ಮುನ್ನ ಬಾಲಕನೊಬ್ಬ ಯೋಧರಿಗೆ ಬೆದರಿಕೆ ಹಾಕಿದ್ದ ವಿಚಾರ ಬೆಳಕಿಗೆ ಬಂದಿದೆ.
ಸಿಆರ್ಪಿಎಫ್ ಚೆಕ್ಪೋಸ್ಟ್ಗೆ ಬಂದಿದ್ದ ಬಾಲಕ `ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಯೋಧರಿಗೆ ಎಚ್ಚರಿಕೆ ನೀಡಿದ್ದ. ಇದಾದ ಬಳಿಕ ನ.10 ರಂದು ಅದೇ ಚೆಕ್ಪೋಸ್ಟ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ ಮೂವರು ಸಿಆರ್ಪಿಎಫ್ ಯೋಧರಿಗೆ ಗಾಯವಾಗಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ CRPF ಶಿಬಿರದ ಮೇಲೆ ಉಗ್ರರಿಂದ ಗುಂಡಿನ ದಾಳಿ; ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ
ಬಾಲಕನ ಬೆದರಿಕೆ ಹಾಗೂ ಉಗ್ರರ ದಾಳಿಗೆ ಸಂಬಂಧವಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. 10ನೇ ತರಗತಿ ವಿದ್ಯಾರ್ಥಿ ಎನ್ನಲಾದ ಬಾಲಕನ ಗುರುತು ಪತ್ತೆಹಚ್ಚಲು ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಕುಲ್ಗಾಮ್ ಜಿಲ್ಲೆಯ ಮಿರ್ ಬಜಾರ್ ಸಮೀಪದ ಅಖ್ರಾನ್ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿತ್ತು. ಬೈಕ್ನಲ್ಲಿ ಬಂದ ಉಗ್ರರು ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದ ಚೆಕ್ಪೋಸ್ಟ್ ಬಳಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಬಳಿಕ ಅಲ್ಲಿಂದ ಉಗ್ರರು ಪರಾರಿಯಾಗಿದ್ದರು.
ದಾಳಿ ನಡೆಸಿ ಪರಾರಿಯಾಗಿರುವ ಉಗ್ರರ ಪತ್ತೆಗಾಗಿ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದಾರೆ. ಅಖ್ರಾನ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಅರಣ್ಯದಲ್ಲಿ ಗುಂಡಿನ ಸದ್ದು; ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ನಾಪತ್ತೆ
