- 18 ಉಗ್ರರನ್ನು ಹತ್ಯೆಗೈದಿದ್ದೇವೆ ಎಂದ ಪೊಲೀಸರು
ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಖೈಬರ್ ಪಖ್ತುಂಖ್ವಾದ ಕೊಹಾಟ್ನಲ್ಲಿ ಪೊಲೀಸ್ ವಾಹನಗಳ ಮೇಲೆ ಉಗ್ರರು ಭೀಕರ ದಾಳಿ ನಡೆಸಿದ್ದು, 11 ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಈ ದಾಳಿಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ.
ಪೊಲೀಸರು ಅಕ್ರಮ ಚಿನ್ನದ ಗಣಿಗಾರಿಕೆ ವಿರುದ್ಧ ಕಾರ್ಯಾಚರಣೆ ನಡೆಸಿ ವಾಪಸಾಗುತ್ತಿದ್ದರು. ಈ ವೇಳೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಡಿಎಸ್ಪಿ ಸೇರಿ 11 ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಐದು ಪೊಲೀಸ್ ವಾಹನಗಳಿಗೂ ಉಗ್ರರು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಇದನ್ನೂ ಓದಿ: `ನಿಮ್ಮನ್ನು ಸುಮ್ಮನೆ ಬಿಡಲ್ಲʼ – CRPF ಚೆಕ್ಪೋಸ್ಟ್ ಮೇಲೆ ದಾಳಿಗೂ ಮುನ್ನ ಬೆದರಿಕೆ ಹಾಕಿದ್ದ ಬಾಲಕ!
ಟಿಟಿಪಿ ಉಗ್ರ ಸಂಘಟನೆ ಈ ದಾಳಿಯ (TTP Attack) ಹೊಣೆ ಹೊತ್ತಿದೆ. ಸ್ಥಳದಲ್ಲಿ ಭದ್ರತಾ ಪಡೆಗಳು ಉಗ್ರರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಅವರು ಈ ದಾಳಿಯನ್ನು ಖಂಡಿಸಿದ್ದಾರೆ. ದಾಳಿಯಲ್ಲಿ ಹುತಾತ್ಮರಾದ ಅಧಿಕಾರಿಗಳಿಗೆ ಗೌರವ ನಮನ ಸಲ್ಲಿಸಿದ್ದಾರೆ. ಇನ್ನೂ ಇತ್ತೀಚೆಗೆ ಪಾಕ್ನಲ್ಲಿ ಟಿಟಿಪಿ ಉಗ್ರರ ದಾಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪಾಕಿಸ್ತಾನದ ಹದಗೆಡುತ್ತಿರುವ ಭದ್ರತಾ ಸವಾಲುಗಳನ್ನು ಎತ್ತಿ ತೋರಿಸುತ್ತಿದೆ.
ಉಗ್ರರ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಖೈಬರ್ ಪಖ್ತುಂಕ್ವಾ ಪೊಲೀಸರು, ಈ ಗುಂಡಿನ ಚಕಮಕಿಯಲ್ಲಿ 18 ಖವಾರಿಜ್’ (ಪಾಕಿಸ್ತಾನ ಸರ್ಕಾರ ಪಾಕಿಸ್ತಾನಿ ತಾಲಿಬಾನ್ಗೆ ಬಳಸುವ ಪದ) ಕೂಡ ಹತರಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ದಾಳಿಕೋರರು ಅಪರಾಧ ಜಾಲಗಳೊಂದಿಗೆ ಶಾಮೀಲಾಗಿದ್ದರು. ಅಪರಾಧ ಜಾಲಗಳು ಮತ್ತು ಪಾಕಿಸ್ತಾನಿ ತಾಲಿಬಾನ್ ನಡುವಿನ ನಂಟನ್ನು ಈ ದಾಳಿ ಎತ್ತಿ ತೋರಿಸುತ್ತದೆ. ವಿದೇಶಿ ಶಕ್ತಿಗಳ ಕುಮ್ಮಕ್ಕಿನಿಂದ ಇವೆರಡೂ ಗುಂಪುಗಳು ಕೈಜೋಡಿಸಿವೆ ಎಂದು ಆರೋಪಿಸಿದ್ದಾರೆ. ಆದರೆ, ಈ ಆರೋಪಗಳಿಗೆ ಪೂರಕವಾದ ಯಾವುದೇ ಸಾಕ್ಷ್ಯವನ್ನು ಪೊಲೀಸರು ನೀಡಿಲ್ಲ.
ಉಗ್ರರಿಗೆ ಮತ್ತು ಅಪರಾಧ ಜಾಲಗಳಿಗೆ ನೆರವು ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ಮಿಸ್ಸಿಂಗ್ – ವ್ಯಾಪಕ ಶೋಧ
