-ಪ್ರಶ್ನೆಪತ್ರಿಕೆ ಸೋರಿಕೆ ಹಿಂದೆ ಡಾಕ್ಟರ್, ಎಂಬಿಬಿಎಸ್ ಸ್ಟೂಡೆಂಟ್, ಸಿಕಾರ್‌ನ ಪಿಜಿ ಕೈವಾಡ ಶಂಕೆ
– ಅಕ್ರಮದ ಕಿಂಗ್‌ಪಿನ್ ಸೇರಿದಂತೆ 5 ರಾಜ್ಯಗಳಲ್ಲಿ 9 ಕಿಡಿಗೇಡಿಗಳ ಬಂಧನ
ನವದೆಹಲಿ: ನೀವು ನೀಟ್ ಪರೀಕ್ಷೆ (Neet Exam) ಬರೆದಿದ್ದರೆ ಮರುನೋಂದಣಿ ಅಗತ್ಯವಿಲ್ಲ. ಹೊಸ ಪ್ರವೇಶ ಪತ್ರ ಕೊಡುತ್ತಾರೆ. ಜೊತೆಗೆ ಈಗಾಗಲೇ ನಿಮ್ಮ ಪರೀಕ್ಷಾ ಶುಲ್ಕವನ್ನು ಮರುಪಾವತಿ ಮಾಡಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (NTA) ಮಹಾನಿರ್ದೇಶಕ (DG) ಅಭಿಷೇಕ್ ಸಿಂಗ್ ತಿಳಿಸಿದ್ದಾರೆ.
ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶಾತಿಗಾಗಿ ಮೇ 3ರಂದು ನಡೆದಿದ್ದ ನೀಟ್ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯೇ ಸೋರಿಕೆಯಾಗಿದೆ. ಪರೀಕ್ಷಾ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆ ನೀಟ್ ಪರೀಕ್ಷೆಯನ್ನು ಎನ್‌ಟಿಎ ರದ್ದುಗೊಳಿಸಿದೆ. ಪರೀಕ್ಷೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರದ (Central Govt) ಅನುಮೋದನೆಯನ್ನು ಪಡೆದಿದ್ದೇವೆ. ಮುಂದಿನ ಮೂರು ವಾರಗಳಲ್ಲಿ ಮರು ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಹೊಸದಾಗಿ ನೋಂದಣಿ ಮಾಡಿಕೊಳ್ಳಬೇಕಿಲ್ಲ. ಮತ್ತೆ ಪರೀಕ್ಷಾ ಶುಲ್ಕ ಕಟ್ಟಿಸಿಕೊಳ್ಳಲ್ಲ. ಈಗಾಗಲೇ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ಮರುಪಾವತಿ ಮಾಡಲಾಗಿದೆ. ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಮೇ 3 ರಂದು ನಡೆದ ನೀಟ್ ಪರೀಕ್ಷೆ ರದ್ದು
ಇನ್ನು, ಪ್ರಶ್ನೆಪತ್ರಿಕೆ ಸೋರಿಕೆ ಹಿಂದೆ ಓರ್ವ ಡಾಕ್ಟರ್, ಎಂಬಿಬಿಎಸ್ ಸ್ಟೂಡೆಂಟ್ ಹಾಗೂ ಸಿಕಾರ್‌ನ ಪಿಜಿ ಕೈವಾಡ ಇದೆ ಅನ್ನೋದು ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ (Maharashtra) ನಾಸಿಕ್‌ನಲ್ಲಿ (Nasik) ಪೇಪರ್ ಲೀಕ್ ಆಗಿದ್ದು, ಬಳಿಕ ನಾಸಿಕ್‌ನಿಂದ ಹರ್ಯಾಣದ ಗುರುಗ್ರಾಮಕ್ಕೆ, ಅಲ್ಲಿಂದ ರಾಜಸ್ಥಾನದ ಜೈಪುರ, ಜಾಮ್ ವಾರಾಮ್‌ಗಢ, ಸಿಕಾರ್‌ಕ್ಕೆ ರವಾನೆಯಾಗಿದೆ. ರಾಜಸ್ಥಾನದ ಸಿಕಾರ್‌ನಿಂದ ದೇಶದ ಹಲವೆಡೆಗೆ ಪ್ರಶ್ನೆ ಪತ್ರಿಕೆ ಹಂಚಿಕೆಯಾಗಿದೆ. ಸಿಕಾರ್‌ನಿಂದ ಜಮ್ಮು & ಕಾಶ್ಮೀರ, ಬಿಹಾರ, ಕೇರಳ, ಉತ್ತರಾಖಂಡ್‌ಗೆ ಹಾಗೂ ಸಿಕಾರ್‌ನಿಂದ ಕೋಚಿಂಗ್, ಕೌನ್ಸಿಲಿಂಗ್, ವಿದ್ಯಾರ್ಥಿ ವಾಟ್ಸಪ್ ಗುಂಪುಗಳಿಗೆ ಹಂಚಿಕೆಯಾಗಿದೆ. ಒಂದು ಪ್ರಶ್ನೆಪತ್ರಿಕೆಗೆ 5,000 ರೂ.ಯಿಂದ 28 ಲಕ್ಷ ರೂ.ವರೆಗೆ ಪೇಪರ್ ಡೀಲ್ ಆಗಿದೆ ಎಂದು ತಿಳಿದುಬಂದಿದೆ.
ಪರೀಕ್ಷಾ ಅಕ್ರಮ ತಡೆಗೆ ವಿಶಿಷ್ಟವಾದ, ಪತ್ತೆ ಹಚ್ಚಬಹುದಾದ ವಾಟರ್‌ಮಾರ್ಕ್ ಗುರುತಿಸುವಿಕೆಗಳನ್ನು ಹೊಂದಿರುವ ಜಿಪಿಎಸ್-ಟ್ರ‍್ಯಾಕ್ ಮಾಡಲಾದ ವಾಹನಗಳಲ್ಲಿ ಪೇಪರ್ ಸಾಗಿಸಲಾಗಿತ್ತು. ಜೊತೆಗೆ, ಪರೀಕ್ಷಾ ಕೇಂದ್ರಗಳಲ್ಲಿ ಕೇಂದ್ರ ನಿಯಂತ್ರಣ ಕೊಠಡಿಯಿಂದ ಎಐ ನೆರವಿನ ಸಿಸಿಟಿವಿ ಕಣ್ಗಾವಲಿನಲ್ಲಿ ನಿಗಾ ಇಟ್ಟರೂ, ಪೇಪರ್ ಲೀಕ್ ಆಗಿರೋದು ಅಚ್ಚರಿ ಮೂಡಿಸಿದೆ. ಇನ್ನು, ಮರುಪರೀಕ್ಷೆಗೆ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲಿ ಪೇಪರ್ ಲೀಕ್ ಆಗಿದ್ಯೋ ಅಲ್ಲಿ ಮಾತ್ರ ಪರೀಕ್ಷೆ ಮಾಡಲಿ. ಮತ್ತೆ ಓದಬೇಕು ಅಂತೆಲ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ನೀಟ್ ಪೇಪರ್ ಲೀಕ್ ಖಂಡಿಸಿ ಎನ್‌ಎಸ್‌ಯುಐ ದೆಹಲಿಯಲ್ಲಿ ಪ್ರತಿಭಟನೆ ಮಾಡಿದೆ. ಸದ್ಯ ರಾಜಸ್ಥಾನದ ಎಸ್‌ಓಜಿ ಹಾಗೂ ಸಿಬಿಐ ಇಡೀ ಜಾಲ, ಹಂಚಿಕೆ ಕೇಂದ್ರದ ಬೆನ್ನುಬಿದ್ದಿದ್ದಾರೆ.ಇದನ್ನೂ ಓದಿ: ನೀಟ್ ಮರು ಪರೀಕ್ಷೆ ತಕ್ಷಣವೇ ಆಗಲಿ – ಅಶ್ವಥ್ ನಾರಾಯಣ
ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆ ಮೇ 8ರಂದು ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಪರಿಶೀಲನೆಗೆ ಕೇಂದ್ರ ಸರ್ಕಾರಕ್ಕೆ ಎನ್‌ಟಿಎ ಮನವಿ ಮಾಡಿತ್ತು. ಹೀಗಾಗಿ, 22.79 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿ ಹಿನ್ನೆಲೆ ಕೇಂದ್ರ ಸರ್ಕಾರವು ಈಗ ಸಿಬಿಐ (CBI) ತನಿಖೆಗೆ ಆದೇಶಿಸಿದೆ. ಇನ್ನು, ರಾಜಸ್ಥಾನ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದ್ದು, ಅಕ್ರಮದ ಬೆನ್ನು ಹತ್ತಿದೆ. ಈಗಾಗಲೇ, ಪ್ರಶ್ನೆ ಪತ್ರಿಕೆ ಅಕ್ರಮದ ಕಿಂಗ್‌ಪಿನ್ ಸೇರಿದಂತೆ 9 ಕಿಡಿಗೇಡಿಗಳನ್ನು 5 ರಾಜ್ಯಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮಾತ್ರವಲ್ಲ ಮಹಾರಾಷ್ಟ್ರ, ಜಮ್ಮು ಕಾಶ್ಮೀರ, ಬಿಹಾರ, ಉತ್ತರಾಖಂಡ್, ತೆಲಂಗಾಣ ಹಾಗೂ ಕೇರಳದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎನ್ನಲಾಗಿದೆ. ಹೀಗಾಗಿ, ಸಿಬಿಐ ಸಮಗ್ರ ತನಿಖೆ ಆರಂಭಿಸಿದ್ದು, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಉತ್ತರಾಖಂಡ್‌ನಲ್ಲಿ ರೇಡ್ ಮಾಡುವ ಸಾಧ್ಯತೆ ಇದೆ.
2024 ಮತ್ತು 2025ರಲ್ಲೂ ಇಂತಹದೇ ಆರೋಪಗಳು ಕೇಳಿಬಂದಿದ್ದವು. 2024ರ ಪ್ರಕರಣದಲ್ಲಿ ಸಿಬಿಐ ಪಾಟ್ನಾ ಮತ್ತು ಹಜಾರಿಬಾಗ್‌ನಲ್ಲಿ ಕೆಲವು ಆರೋಪಿಗಳನ್ನು ಬಂಧಿಸಿತ್ತು.ಇದನ್ನೂ ಓದಿ: KPSC ಹಾಳಾಗೋಕೆ ಕಾಂಗ್ರೆಸ್ ಕಾರಣ, ಇವರ ಅವಧಿಯಲ್ಲಿ ಎಷ್ಟು ಬಾರಿ ಪೇಪರ್ ಲೀಕ್ ಆಗಿದೆ: ಹೆಚ್‌ಡಿಕೆ ಕಿಡಿ

