ನವದೆಹಲಿ: ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹದಿಂದ (Nepal Flood) ಉಂಟಾಗಿರುವ ಜೀವಹಾನಿ ಮತ್ತು ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಪ್ರತ್ಯೇಕ ಪತ್ರ ಬರೆದಿರುವ ಅವರು, ನೇಪಾಳಕ್ಕೆ ತಕ್ಷಣವೇ ಮಾನವೀಯ ಹಾಗೂ ವಿಪತ್ತು ಪರಿಹಾರ ನೆರವು ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ, ನೇಪಾಳದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ರಕ್ಷಣಾ ಮತ್ತು ಸ್ಥಳಾಂತರ ಕಾರ್ಯಾಚರಣೆಗಳನ್ನು ತ್ವರಿತಗೊಳಿಸುವಂತೆ ಖರ್ಗೆ ಮನವಿ ಮಾಡಿದ್ದಾರೆ. ವಿದೇಶಾಂಗ ಸಚಿವಾಲಯದ ಇತ್ತೀಚಿನ ಮಾಹಿತಿಯನ್ನು ಉಲ್ಲೇಖಿಸಿರುವ ಅವರು, ನೇಪಾಳದಲ್ಲಿ ಸುಮಾರು 320 ಭಾರತೀಯರು ಇನ್ನೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿಗೆ ಮೂರರ ಸಂಭ್ರಮ – ಗುಲಾಬಿ ಬಣ್ಣದ ಬೆಳಕಿನಲ್ಲಿ ಕಂಗೊಳಿಸಲಿವೆ ವಿಧಾನಸೌಧ, ಸುವರ್ಣಸೌಧ, ಮೈಸೂರು ಅರಮನೆ
ಪ್ರವಾಹದಿಂದ ನೇಪಾಳದಲ್ಲಿ ಭಾರೀ ಪ್ರಮಾಣದ ಜೀವಹಾನಿಯಾಗಿದ್ದು, 600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಹಾಗೂ ಸುಮಾರು 2,000 ಮಂದಿ ನಾಪತ್ತೆಯಾಗಿದ್ದಾರೆ ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಖರ್ಗೆ ಹೇಳಿದ್ದಾರೆ. ಸಾವಿರಾರು ಮಂದಿ ಆಹಾರ, ಔಷಧ, ಆಶ್ರಯ ಸೇರಿದಂತೆ ಅಗತ್ಯ ನೆರವಿಗಾಗಿ ಪರದಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಭ್ರಷ್ಟ ರಾಜ್ಯ ಸರ್ಕಾರದ ವಿರುದ್ಧ ಪಾದಯಾತ್ರೆ ಮುಂದುವರಿಯುತ್ತದೆ: ವಿಜಯೇಂದ್ರ
ಎನ್‌ಡಿಆರ್‌ಎಫ್ ತಂಡ ನಿಯೋಜನೆಗೆ ಮನವಿ:
ಗೃಹ ಸಚಿವ ಅಮಿತ್ ಶಾಗೆ ಬರೆದ ಪತ್ರದಲ್ಲಿ ಖರ್ಗೆ, ನೇಪಾಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಗತ್ಯವಿರುವ ಕಡೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡಗಳನ್ನು ನಿಯೋಜಿಸುವ ಕುರಿತು ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ನೇಪಾಳ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ರಕ್ಷಣಾ, ಸ್ಥಳಾಂತರ ಮತ್ತು ಪರಿಹಾರ ಕಾರ್ಯಗಳಿಗೆ ನೆರವಾಗಬೇಕು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಖರ್ಗೆ ವೇದಿಕೆ ಶುದ್ಧೀಕರಿಸಿದವರ ವಿರುದ್ಧ FIR ಗೆ ಮೋದಿ ಆದೇಶಿಸಬೇಕು: ರಾಹುಲ್ ಗಾಂಧಿ ಒತ್ತಾಯ
ಭಾರತದ ಜನರಿಗೆ ನೇಪಾಳದ ಜನರೊಂದಿಗೆ ಆಳವಾದ ಮತ್ತು ಶಾಶ್ವತ ಸಂಬಂಧವಿದೆ. ಈ ದುಃಖದ ಸಂದರ್ಭದಲ್ಲಿ ಭಾರತ ತನ್ನ ನೆರೆ ರಾಷ್ಟ್ರದೊಂದಿಗೆ ದೃಢವಾಗಿ ನಿಲ್ಲಬೇಕು ಎಂದು ಖರ್ಗೆ ತಮ್ಮ ಪತ್ರದಲ್ಲಿ ಒತ್ತಿಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ತಮ್ಮ ರಾಜಕೀಯಕ್ಕಾಗಿ ನಿರಪರಾಧಿಯನ್ನ ಬಲಿ ತೆಗೆದುಕೊಂಡಿದೆ: ಡಿಕೆಶಿ
ನೇಪಾಳಕ್ಕೆ ತಕ್ಷಣ ಹಾಗೂ ವ್ಯಾಪಕ ಮಾನವೀಯ ನೆರವು ನೀಡಲು ಕೇಂದ್ರ ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕು. ಸಂಕಷ್ಟದಲ್ಲಿರುವ ಭಾರತೀಯರು ಹಾಗೂ ನೇಪಾಳದ ಜನರ ನೆರವಿಗೆ ಭಾರತ ಸಂಪೂರ್ಣವಾಗಿ ಮುಂದಾಗಬೇಕು ಎಂದು ಕಾಂಗ್ರೆಸ್ ಅಧ್ಯಕ್ಷರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಇನ್ನೊಂದು ಗಂಟೆ ಪ್ರಯಾಣ ಮಾಡಿದ್ರೂ ಅಪಾಯಕ್ಕೆ ಸಿಲುಕುತ್ತಿದ್ದೆ – ನೇಪಾಳದಿಂದ ವಾಪಸ್ ಆದ ಕನ್ನಡಿಗ ಮಲ್ಲಿನಾಥ್ ಮಾತು
