CrimeLatestMain Post

ಮರ್ಯಾದಾ ಹತ್ಯೆ – ತಹಶೀಲ್ದಾರ್ ಕಚೇರಿಯಲ್ಲೇ ಚಾಕುವಿನಿಂದ ಇರಿದು ವ್ಯಕ್ತಿ ಬರ್ಬರ ಕೊಲೆ

ಹೈದರಾಬಾದ್: ಮರ್ಯಾದಾ ಹತ್ಯೆ ಘಟನೆಯೊಂದು ಹೈದರಾಬಾದ್‍ನ ಸರೂರ್‌ನಗರ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ. ಬೈಕ್‍ನಲ್ಲಿ ಬಂದ ದುಷ್ಕರ್ಮಿಯೋರ್ವ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.

ಮೃತದುರ್ದೈವಿಯನ್ನು ನಾಗರಾಜ್(25) ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಸರೂರನಗರ ತಹಸೀಲ್ದಾರ್ ಕಚೇರಿಗೆ ಬೈಕ್‍ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ನಾಗರಾಜ್‍ನನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆಯ ದೃಶ್ಯವನ್ನು ಅನೇಕ ದಾರಿಹೋಕರು ತಮ್ಮ ಫೋನ್‍ಗಳಲ್ಲಿ ಸೆರೆಹಿಡಿದಿದ್ದಾರೆ. ಇದೀಗ ಕುಟುಂಬಸ್ಥರು ನಾಗರಾಜ್ ಕೊಲೆಯ ಹಿಂದೆ ಪತ್ನಿಯ ಮನೆಯವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ?

CRIME 2

ಎರಡು ತಿಂಗಳ ಹಿಂದೆ ಜನವರಿ 31 ರಂದು ನಾಗರಾಜ್ 23 ವರ್ಷದ ಸೈಯದ್ ಅಶ್ರಿನ್ ಸುಲ್ತಾನಾ(ಪಲ್ಲವಿ) ಅವರನ್ನು ವಿವಾಹವಾಗಿದ್ದರು. ಕಾಲೇಜು ದಿನಗಳಿಂದಲೂ ನಾಗರಾಜ್ ಹಾಗೂ ಪಲ್ಲವಿ ಇಬ್ಬರೂ ಪ್ರೀತಿಸುತ್ತಿದ್ದರು. ಹೀಗಾಗಿ ಎರಡು ತಿಂಗಳ ಹಿಂದೆ ಹಳೆನಗರದ ಆರ್ಯ ಸಮಾಜ ಮಂದಿರದಲ್ಲಿ ಮದುವೆಯಾಗಿದ್ದರು. ಇಬ್ಬರು ಬೇರೆ, ಬೇರೆ ಧರ್ಮದವರಾಗಿದ್ದರಿಂದ ಪಲ್ಲವಿ ಮನೆಯವರು ನಾಗರಾಜ್‍ನನ್ನು ಕೊಂದಿದ್ದಾರೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.

POLICE JEEP

ಬಿಲ್ಲಾಪುರಂ ನಾಗರಾಜು ಸಿಕಂದರಾಬಾದ್‍ನ ಮರ್ರೆಡ್‍ಪಲ್ಲಿ ನಿವಾಸಿಯಾಗಿದ್ದು, ಓಲ್ಡ್ ಸಿಟಿಯ ಮಲಕ್‍ಪೇಟ್‍ನಲ್ಲಿರುವ ಜನಪ್ರಿಯ ಕಾರ್ ಶೋ ರೂಂನಲ್ಲಿ ಸೇಲ್ಸ್‍ಮ್ಯಾನ್ ಕಾರ್ಯನಿರ್ವಹಿಸುತ್ತಿದ್ದರು. ಈ ಘಟನೆಯ ಬಳಿಕ ಮೃತನ ಕುಟುಂಬಸ್ಥರಿಗೆ ನ್ಯಾಯ ಒದಗಿಸಿಕೊಡುವಂತೆ ಮತ್ತು ಆರೋಪಿಗಳನ್ನು ಬಂಧಿಸುವಂತೆ ಬಿಜೆಪಿ ಪ್ರತಿಭಟನೆ ನಡೆಸುವ ಮೂಲಕ ಒತ್ತಾಯಿಸುತ್ತಿದೆ. ಇದನ್ನೂ ಓದಿ: ಈ ಬಾರಿಯಾದ್ರೂ ಸಿಐಡಿ ವಿಚಾರಣೆಗೆ ಹಾಜರಾಗ್ತಾರಾ ಪ್ರಿಯಾಂಕ್ ಖರ್ಗೆ?

ಇದೀಗ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೇ ಇವರಿಬ್ಬರ ಪ್ರೇಮ ವಿವಾಹವೇ ಹತ್ಯೆಗೆ ಕಾರಣ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿರುವುದಾಗಿ ಸಹಾಯಕ ಪೊಲೀಸ್ ಆಯುಕ್ತ ಶ್ರೀಧರ್ ರೆಡ್ಡಿ ತಿಳಿಸಿದ್ದಾರೆ.

Leave a Reply

Your email address will not be published.

Back to top button