ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಲಿಕತ್ವದಲ್ಲಿ ಬದಲಾವಣೆಗಳಾಗಿದ್ದರೂ, ಮುಂಬರುವ 2027 ಐಪಿಎಲ್ (IPL) ಆವೃತ್ತಿಗೆ ಈಗಿರುವ ವಿಜೇತ ತಂಡವೇ ಆಡುವ ಸಾಧ್ಯತೆಯಿದೆ.
ಐಪಿಎಲ್‌ನ ಮುಂದಿನ ಮೆಗಾ ಹರಾಜು (Mega Auction) 2028ರಲ್ಲಿ ನಡೆಯಲಿರುವ ಕಾರಣ, ಅಲ್ಲಿಯವರೆಗೂ ಈಗಿರುವ ಬಲಿಷ್ಠ ಆಟಗಾರರ ದಂಡನ್ನು ಉಳಿಸಿಕೊಳ್ಳಲು ಆಡಳಿತ ಮಂಡಳಿ ಒಲವು ತೋರಬಹುದು ಎಂದು ವಿಶ್ಲೇಷಿಸಲಾಗುತ್ತದೆ. ಒಂದು ವೇಳೆ ಇದೇ ತಂಡ ಮುಂದುವರಿದರೆ ಆರ್‌ಸಿಬಿ ಅಭಿಮಾನಿಗಳಿಗೆ ಇದೇ ಸ್ಟಾರ್ ಆಟಗಾರರ ಜುಗಲ್‌ಬಂದಿ ಮೈದಾನದಲ್ಲಿ ನೋಡಲು ಸಿಗಲಿದೆ.
ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಆರ್‌ಸಿಬಿ, ಈ ಬಾರಿಯ ಟೂರ್ನಿಯಲ್ಲೂ ಬಹುತೇಕ ಅದೇ ಆಟಗಾರರನ್ನು ಕಣಕ್ಕಿಳಿಸಿತ್ತು. ಕಳೆದ ಬಾರಿ ತಂಡದಲ್ಲಿದ್ದ ವೇಗಿ ಯಶ್ ದಯಾಳ್ ಬದಲಿಗೆ ಈ ಸಲ ರಸಿಕ್ ಸಲಾಂ ಅವರಿಗೆ ಮಾತ್ರ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಲಾಗಿತ್ತು. ಕೆಲ ಸಣ್ಣ ಬದಲಾವಣೆಯನ್ನು ಹೊರತುಪಡಿಸಿದರೆ ತಂಡದ ಕೋರ್ ತಂಡ ಹಾಗೇ ಉಳಿದುಕೊಂಡಿದೆ.
ಕಳೆದ ಬಾರಿ ಆಡಿದ್ದ ವಿರಾಟ್ ಕೊಹ್ಲಿ, ರಜತ್ ಪಟಿದಾರ್, ದೇವದತ್ ಪಡಿಕ್ಕಲ್, ಕೃನಾಲ್ ಪಾಂಡ್ಯ, ಜಿತೇಶ್ ಶರ್ಮಾ, ರೊಮಾರಿಯೋ ಶೆಫರ್ಡ್, ಟಿಮ್ ಡೇವಿಡ್, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್ ಈ ಬಾರಿಯೂ ಫೈನಲ್ ಪಂದ್ಯ ಆಡಿದ್ದರು.

ಹ್ಯಾಟ್ರಿಕ್ ಟ್ರೋಫಿ ಗೆಲ್ಲುವ ಸುವರ್ಣಾವಕಾಶ:
ಈಗಾಗಲೇ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಅದ್ಭುತ ಲಯದಲ್ಲಿರುವ ಈ ತಂಡವನ್ನು ಮುಂದಿನ ವರ್ಷವೂ ಮುಂದುವರಿಸುವ ಮೂಲಕ, ಐಪಿಎಲ್ ಇತಿಹಾಸದಲ್ಲೇ ಸತತ ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿ ‘ಹ್ಯಾಟ್ರಿಕ್ ಟ್ರೋಫಿ’ ಮುಡಿಗೇರಿಸಿಕೊಳ್ಳುವ ಸುಲಭ ತಂತ್ರಗಾರಿಕೆ ಆರ್‌ಸಿಬಿ ಮುಂದಿದೆ.
ಬದಲಾವಣೆ ಯಾಕಿಲ್ಲ?
ಈ ವರ್ಷ ಆರ್‌ಸಿಬಿ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಸಮತೋಲನವನ್ನು ಹೊಂದಿತ್ತು. ಇದಕ್ಕೆ ಸಾಕ್ಷಿ ಟೂರ್ನಿಯಲ್ಲಿ ಪಡೆದ ಪಂದ್ಯಶ್ರೇಷ್ಠ ಗೌರವಗಳು. ಆರ್‌ಸಿಬಿ ಪೈಕಿ ರೊಮಾರಿಯೊ ಶೆಫರ್ಡ್ ಈ ಬಾರಿ ವಿಫಲರಾಗಿದ್ದಾರೆ. ಜಿತೇಶ್ ಶರ್ಮಾ ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದರೂ ಕೀಪಿಂಗ್‌ನಲ್ಲಿ 15 ಕ್ಯಾಚ್, 2 ಸ್ಟಂಪ್ ಮಾಡಿದ್ದಾರೆ.

ಯಾವ ತಂಡದ ವಿರುದ್ಧ ಯಾರಿಗೆ ಪಂದ್ಯಶ್ರೇಷ್ಠ ಗೌರವ?
ವಿರಾಟ್ ಕೊಹ್ಲಿ – ಕೋಲ್ಕತ್ತಾ ನೈಟ್ ರೈಡರ್ಸ್, ಗುಜರಾತ್ ಜೈಂಟ್ಸ್(ಲೀಗ್ ಮತ್ತು ಫೈನಲ್)
ಜಾಕೋಬ್ ಡಫಿ – ಸನ್‌ರೈಸರ್ಸ್ ಹೈದರಾಬಾದ್
ಟಿಮ್ ಡೇವಿಡ್ – ಚೆನ್ನೈ ಸೂಪರ್ ಕಿಂಗ್ಸ್
ಫಿಲ್ ಸಾಲ್ಟ್ – ಮುಂಬೈ ಇಂಡಿಯನ್ಸ್
ಜೋಶ್ ಹೇಜಲ್‌ವುಡ್ – ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್
ಭುವನೇಶ್ವರ್ ಕುಮಾರ್ – ಮುಂಬೈ ಇಂಡಿಯನ್ಸ್
ವೆಂಕಟೇಶ್ ಅಯ್ಯರ್ – ಪಂಜಾಬ್ ಕಿಂಗ್ಸ್
ರಜತ್ ಪಟಿದಾರ್ – ಗುಜರಾತ್ ಟೈಟಾನ್ಸ್(ಕ್ವಾಲಿಫೈಯರ್ -1)
