ಇಸ್ಲಾಮಾಬಾದ್: ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾದ ಬಲೂಚಿಸ್ತಾನ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಸುದ್ದಿಯಲ್ಲಿದೆ. `ರಿಪಬ್ಲಿಕ್ ಆಫ್ ಬಲೂಚಿಸ್ತಾನ’ (Republic of Balochistan) ಹೆಸರಿನಲ್ಲಿ ಬಿಡುಗಡೆಯಾಗಿದೆ ಎನ್ನಲಾದ ಪತ್ರವೊಂದು, ಬಲೂಚಿಸ್ತಾನವು ಪಾಕಿಸ್ತಾನದಿಂದ ಸ್ವಾತಂತ್ರ್ಯ ಘೋಷಿಸಿಕೊಂಡಿದೆ ಎಂಬ ಚರ್ಚೆ ಹುಟ್ಟುಹಾಕಿದೆ.
ಈ ಪತ್ರದ ಸತ್ಯಾಸತ್ಯತೆಯನ್ನು ಯಾವುದೇ ಸ್ವತಂತ್ರ ಸಂಸ್ಥೆ ಇನ್ನೂ ದೃಢೀಕರಿಸಿಲ್ಲ. ಮತ್ತೊಂದು ಕಡೆ ಪಾಕಿಸ್ತಾನ ಸರ್ಕಾರ (Pakistan Govt) ಇನ್ನೂ ಸಂಪೂರ್ಣ ಪ್ರದೇಶದ ಮೇಲೆ ತನ್ನ ಆಡಳಿತ ಮುಂದುವರಿದಿದೆ ಎಂದು ಹೇಳುತ್ತಿದೆ. ಇತ್ತ ಬಲೂಚ್ ಪ್ರತ್ಯೇಕತಾವಾದಿಗಳು ಬಲೂಚಿಸ್ತಾನದ ಸುಮಾರು 85% ಪ್ರದೇಶ ನಮ್ಮ ನಿಯಂತ್ರಣದಲ್ಲಿದೆ ಎಂದು ಹೇಳಿಕೊಂಡಿದ್ದಾರೆ.
ಹಾಗಾದರೆ… ಯಾವುದೇ ಪ್ರದೇಶವು ತನ್ನನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದ ತಕ್ಷಣವೇ ಅದಕ್ಕೆ ದೇಶದ ಮಾನ್ಯತೆ ಸಿಗುತ್ತದೆಯೇ? ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಒಂದು ಹೊಸ ದೇಶವಾಗಲು ಯಾವೆಲ್ಲಾ ಷರತ್ತುಗಳನ್ನು ಪೂರೈಸಬೇಕು? ಎನ್ನುವ ಮಾಹಿತಿ ಇಲ್ಲಿದೆ….

ಅಂತಾರಾಷ್ಟ್ರೀಯ ಕಾನೂನು ಏನು ಹೇಳುತ್ತೆ?
ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ, ಯಾವುದೇ ಪ್ರದೇಶವು ರಾಷ್ಟ್ರವಾಗಬೇಕಾದರೆ ನಾಲ್ಕು ಪ್ರಮುಖ ಷರತ್ತುಗಳನ್ನು ಪೂರೈಸಬೇಕು. ಶಾಶ್ವತ ಜನಸಂಖ್ಯೆ, ಸ್ಪಷ್ಟ ಗಡಿಯನ್ನ ಹೊಂದಿರುವ ಪ್ರದೇಶ, ಪರಿಣಾಮಕಾರಿ ಸರ್ಕಾರ ಮತ್ತು ಇತರ ರಾಷ್ಟ್ರಗಳೊಂದಿಗೆ ಸ್ವತಂತ್ರವಾಗಿ ರಾಜತಾಂತ್ರಿಕ ಸಂಬಂಧ ಬೆಳೆಸುವ ಸಾಮರ್ಥ್ಯ ಹೊಂದಿರಬೇಕು.
ಇಷ್ಟೇ ಸಾಕಾಗುವುದಿಲ್ಲ. ಹೊಸ ರಾಷ್ಟ್ರಕ್ಕೆ ಜಾಗತಿಕ ಮಾನ್ಯತೆ ಪಡೆಯುವುದು ಅತಿ ದೊಡ್ಡ ಸವಾಲು. ವಿಶ್ವಸಂಸ್ಥೆಯ ಸದಸ್ಯತ್ವ ಪಡೆಯಲು ಮೊದಲು ಭದ್ರತಾ ಮಂಡಳಿಯ ಶಿಫಾರಸು, ನಂತರ ಸಾಮಾನ್ಯ ಸಭೆಯಲ್ಲಿ ಮೂರರಲ್ಲಿ ಎರಡು ಭಾಗದ ಸದಸ್ಯ ರಾಷ್ಟ್ರಗಳ ಬೆಂಬಲ ಅಗತ್ಯವಿರುತ್ತದೆ.
ಪಾಕಿಸ್ತಾನ ಬಲೂಚಿಸ್ತಾನವನ್ನ ತನ್ನ ಅವಿಭಾಜ್ಯ ಅಂಗವೆಂದು ಪರಿಗಣಿಸುತ್ತಿರುವುದರಿಂದ, ಯಾವುದೇ ಸ್ವಾತಂತ್ರ್ಯ ಪ್ರಯತ್ನಕ್ಕೆ ರಾಜಕೀಯ, ಭದ್ರತಾ ಮತ್ತು ರಾಜತಾಂತ್ರಿಕ ಅಡೆತಡೆಗಳು ಎದುರಾಗುವ ಸಾಧ್ಯತೆ ಇದೆ. ಜೊತೆಗೆ ಚೀನಾ ಸೇರಿದಂತೆ ಪ್ರಮುಖ ರಾಷ್ಟ್ರಗಳ ನಿಲುವು ಕೂಡ ನಿರ್ಣಾಯಕವಾಗಲಿದೆ.

ಒಟ್ಟಾರೆ, ಸ್ವಾತಂತ್ರ್ಯ ಘೋಷಣೆ ಮಾತ್ರ ಸಾಕಾಗುವುದಿಲ್ಲ. ಪರಿಣಾಮಕಾರಿ ಆಡಳಿತ, ಭೂಪ್ರದೇಶದ ಮೇಲಿನ ನಿಯಂತ್ರಣ ಮತ್ತು ಅಂತರರಾಷ್ಟ್ರೀಯ ಬೆಂಬಲ ದೊರೆತಾಗ ಮಾತ್ರ ಒಂದು ಪ್ರದೇಶಕ್ಕೆ ಮಾನ್ಯತೆ ಪಡೆದ ರಾಷ್ಟ್ರವಾಗುವ ಅವಕಾಶ ಸಿಗುತ್ತದೆ ಎಂದು ಅಂತಾರಾಷ್ಟ್ರೀಯ ಮಾನದಂಡಗಳು ಹೇಳುತ್ತವೆ.
ಸದ್ಯಕ್ಕೆ ಬಲೂಚಿಸ್ತಾನದ ಸ್ವಾತಂತ್ರ್ಯ ಘೋಷಣೆ ಕುರಿತ ದಾವೆಗಳನ್ನ ಪಾಕಿಸ್ತಾನ ದೃಢೀಕರಿಸಲಾಗಿಲ್ಲ. ಆದ್ದರಿಂದ ಈ ಬೆಳವಣಿಗೆಗಳ ಬಗ್ಗೆ ಅಧಿಕೃತ ಮಾಹಿತಿಗಾಗಿ ಕಾಯಬೇಕಾಗಿದೆ.
