ಲಂಡನ್: ಭಾರತೀಯ ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ರೋಹಿತ್ ಶರ್ಮಾ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಕುರಿತು ಮತ್ತೆ ಚರ್ಚೆಗಳು ಜೋರಾಗಿವೆ. ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆಯಲಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯವೇ ರೋಹಿತ್ (Rohit Sharma) ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಬಹುದು ಎಂಬ ವರದಿಗಳು ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿವೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಏಕದಿನ ಪಂದ್ಯವು ಜು.19 ರಂದು ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಇದರ ಬಳಿಕ ರೋಹಿತ್ ಶರ್ಮಾ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ ಎಂಬ ವದಂತಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

2027ರ ಏಕದಿನ ವಿಶ್ವಕಪ್ ಉದ್ದೇಶದಿಂದ ಹೊಸ ಪ್ಲ್ಯಾನ್?
ಮೂಲಗಳ ಪ್ರಕಾರ, ಟೀಂ ಇಂಡಿಯಾ ಆಯ್ಕೆ ಸಮಿತಿಯು ಮುಂದಿನ ಏಕದಿನ ವಿಶ್ವಕಪ್‌ಗಾಗಿ ಬಲಿಷ್ಠ ತಂಡ ಕಟ್ಟುವತ್ತ ಗಮನ ಹರಿಸಿದೆ. ಇಂಗ್ಲೆಂಡ್ ಪ್ರವಾಸದಲ್ಲೇ ತಂಡದೊಂದಿಗೆ ಇರುವ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಹಾಗೂ ಆಯ್ಕೆ ಸಮಿತಿಯು ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ.
ಜೈಸ್ವಾಲ್‌ಗೆ ಸಿಹಲಿದೆಯಾ ಲಕ್?
ಸದ್ಯ ಆಯ್ಕೆ ಸಮಿತಿಯು ಯುವ ಕ್ರಿಕೆಟಿಗರಿಗೆ ಮಣೆ ಹಾಕಲು ಉತ್ಸಾಹ ತೋರಿದ್ದು, ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರಿಗೆ ಇದರ ಪ್ರಯೋಜನ ಸಿಗುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ. ಜೈಸ್ವಾಲ್ ಕಳೆದ 3 ಏಕದಿನ ಇನ್ನಿಂಗ್ಸ್‌ಗಳಲ್ಲಿ 2 ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಹೀಗಾಗಿ ಅವರನ್ನ ಏಕದಿನ ತಂಡದ ಭವಿಷ್ಯದ ಆರಂಭಿಕ ಆಟಗಾರನಾಗಿ ಪರಿಗಣಿಸಲಾಗುತ್ತಿದೆ ಎಂದು ಹೇಳಲಾಗ್ತಿದೆ.

BCCI ಮೂಲಗಳ ಪ್ರಕಾರ, ಮುಂದಿನ ವಿಶ್ವಕಪ್‌ಗೆ ಮುನ್ನ ಭಾರತಕ್ಕೆ ಸೀಮಿತ ಸಂಖ್ಯೆಯ ಏಕದಿನ ಪಂದ್ಯಗಳಷ್ಟೇ ಇರುವುದರಿಂದ, ಜೈಸ್ವಾಲ್‌ಗೆ ನಿರಂತರ ಅವಕಾಶ ನೀಡುವುದು ಅಗತ್ಯ ಎಂಬ ಅಭಿಪ್ರಾಯ ಆಯ್ಕೆ ಸಮಿತಿಯಿಂದ ಕೇಳಿಬಂದಿದೆ.
ರೋಹಿತ್ ಶರ್ಮಾ ಅವರ ನಿರ್ಧಾರವೇ ಅಂತಿಮ
ಮತ್ತೊಂದು ಮೂಲಗಳ ಪ್ರಕಾರ, ರೋಹಿತ್ ಶರ್ಮಾಗೆ ನಿವೃತ್ತಿ ಘೋಷಿಸುವಂತೆ ಯಾರೂ ಹೇಳಲು ಸಾಧ್ಯವಿಲ್ಲ. ಅಂತಿಮ ನಿರ್ಧಾರ ಸಂಪೂರ್ಣವಾಗಿ ಅವರದ್ದೇ ಆಗಿರುತ್ತದೆ. ಆದರೆ ಸೆಪ್ಟೆಂಬರ್‌ನಲ್ಲಿ ವಿಂಡೀಸ್ ವಿರುದ್ಧ ತವರಿನಲ್ಲಿ ನಡೆಯಲಿರುವ ಸರಣಿಯಿಂದ ಹೊಸ ತಂಡದತ್ತ ಗಮನ ಹರಿಸುವ ಆಯ್ಕೆ ಸಮಿತಿಯ ಆಲೋಚನೆ ಉದೆ ಎಂಬ ಮಾಹಿತಿ ಹೊರಬಿದ್ದಿದೆ.
ಹಿಟ್‌ಮ್ಯಾನ್‌ಗೆ ಫಾರ್ಮ್ ಚಿಂತೆ
ಇತ್ತೀಚಿನ ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ನಿರೀಕ್ಷಿತ ಮಟ್ಟದಲ್ಲಿಲ್ಲ. ಕಳೆದ 8 ಏಕದಿನ ಇನ್ನಿಂಗ್ಸ್‌ಗಳಲ್ಲಿ ಅವರು 241 ರನ್‌ಗಳನ್ನು ಮಾತ್ರ ಗಳಿಸಿದ್ದು, ಅವರ ಸರಾಸರಿ 30.1 ಹಾಗೂ ಸ್ಟ್ರೈಕ್ ರೇಟ್ 88.6 ಆಗಿದೆ. ಈ ಅವಧಿಯಲ್ಲಿ ಅವರ ಬ್ಯಾಟ್‌ನಿಂದ ಕೇವಲ 1 ಅರ್ಧಶತಕ ಮಾತ್ರ ಬಂದಿದೆ. ಹೀಗಾಗಿ ರೋಹಿತ್ ಅವರ ನಿವೃತ್ತಿ ವಿಚಾರ ಮುನ್ನೆಲೆಗೆ ಬಂದಿದೆ.
