– ಹಿಂದೂ ಸಂಸ್ಕೃತಿ ಮೇಲಿನ ಬಲವಂತದ ದಾಳಿ ಎಂದು ಬಿಜೆಪಿ ಆಕ್ರೋಶ
ಹೈದರಾಬಾದ್: ಶಾಲೆ ಮುಗಿದ ಮೇಲೆ ಮಕ್ಕಳಿಗೆ ಹೋಮ್ ವರ್ಕ್ (Homework) ಕೊಡೋದು ಕಾಮನ್. ಆದ್ರೆ ಇಲ್ಲೊಂದು ಶಾಲೆಯಲ್ಲಿ ಹೋಮ್ ವರ್ಕ್ ಜೊತೆಗೆ ಇಸ್ಲಾಮಿಕ್ ಪ್ರಾರ್ಥನೆಯ ಕಲ್ಮಾ ಪಠಿಸುವ ಹೋಮ್ ವರ್ಕ್ ಕೊಡಲಾಗಿದೆ.
ಮನೆಪಾಠದ ವಿಷಯ ಕೊಡೋ ಬದಲು ಧಾರ್ಮಿಕ ಪಠಣ ಹೋಮ್ ವರ್ಕ್ (Kalma Homework) ಕೊಟ್ಟ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. 2ನೇ ತರಗತಿಯ ಹಿಂದೂ ವಿದ್ಯಾರ್ಥಿಗೆ ಇಸ್ಲಾಮಿಕ್ ಪ್ರಾರ್ಥನೆಯ ಕಲ್ಮಾ ಮತ್ತು ಸೂರಾ ಫಾತಿಹಾವನ್ನು ಪಠಣದ ಹೋಮ್‌ವರ್ಕ್ ಕೊಟ್ಟ ಆರೋಪ ಕೇಳಿ ಬಂದಿದೆ.

ಹೈದರಾಬಾದ್‌ನ (Hyderabad) ಸಯೀದಾಬಾದ್‌ನಲ್ಲಿರುವ ‘ಸಕ್ಸಸ್, ದಿ ಸ್ಕೂಲ್ʼನಲ್ಲಿ ಘಟನೆ ನಡೆದಿದೆ. ಶಾಲೆಯ ಶಿಕ್ಷಕಿ ಶೇಖ್ ಆಯಿಷಾ ಪರ್ವಿನ್ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಮಗು ಮನೆಗೆ ಹೋದ ನಂತರ ಈ ವಿಚಾರ ಪೋಷಕರ ಗಮನಕ್ಕೆ ಬಂದಿದೆ. ಪೋಷಕರ ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ ಶಿಕ್ಷಕಿಯನ್ನ ಶಾಶ್ವತವಾಗಿ ಅನರ್ಹಗೊಳಿಸಲಾಗಿದೆ.
ಈ ಮಧ್ಯೆ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್, ಇದು ಹಿಂದೂ ಸಂಸ್ಕೃತಿ ಮೇಲಿನ ಬಲವಂತದ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ತರಗತಿಯಲ್ಲಿ 25 ಮಕ್ಕಳಿದ್ದು, ಒಬ್ಬ ವಿದ್ಯಾರ್ಥಿ ಹೊರತುಪಡಿಸಿ 24 ಮಕ್ಕಳು ಮುಸ್ಲಿಮರು. ಇದು ಶಾಲಾ ನಿಯಮಗಳ ಉಲ್ಲಂಘನೆ ಅಂತ ಚಾರ್‌ಮಿನಾರ್ ವಲಯದ ಡಿಸಿಪಿ ಹೇಳಿದ್ದಾರೆ.
