ಬಳ್ಳಾರಿ: ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಗೆ (Padma Shri Award) ಭಾಜನರಾಗಿ ಇಡೀ ನಾಡಿಗೆ ಕೀರ್ತಿ ತಂದಿದ್ದ ಜಾನಪದ ಕಲಾವಿದೆ ಮಂಜಮ್ಮ ಜೋಗತಿ(Manjamma Jogathi) ಅವರಿಗೆ ಇದೀಗ ಜೀವನ ನಿರ್ವಹಣೆಯೇ ದೊಡ್ಡ ಸವಾಲಾಗಿದೆ. ಆದಾಯದ ಮೂಲಗಳಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಅವರು, ಹೊಟ್ಟೆಪಾಡಿಗಾಗಿ ಮತ್ತೆ ತಮ್ಮ ಹಳೆಯ ಪ್ಲಾಸ್ಟಿಕ್ ವಯರ್ ಬುಟ್ಟಿಗಳನ್ನು ಕೈಯಿಂದ ನೇಯುವ ಕಾಯಕಕ್ಕೆ ಕಾಯಕಕ್ಕೆ ಇಳಿದಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ನೆಲೆಸಿರುವ ಮಂಜಮ್ಮ ಜೋಗತಿ ಅವರು, ಸದ್ಯ ಬದುಕು ಸಾಗಿಸಲು ನಿತ್ಯ ಶ್ರಮಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಬುಟ್ಟಿಯನ್ನು ಹೆಣೆಯಲು ಅವರು ಬರೋಬ್ಬರಿ ಒಂದು ದಿನದ ಶ್ರಮವನ್ನು ಹಾಕುತ್ತಿದ್ದಾರೆ. ಸುಮಾರು 300 ರೂಪಾಯಿ ವೆಚ್ಚದಲ್ಲಿ ಸಿದ್ಧವಾಗುವ ಬುಟ್ಟಿಗಳನ್ನು(Basket Weaving) 500 ರಿಂದ 600 ರೂಪಾಯಿಗೆ ಮಾರಾಟ ಮಾಡುವ ಮೂಲಕ ಅಲ್ಪ ಆದಾಯ ಕಂಡುಕೊಳ್ಳುತ್ತಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಬಂದ ಹೊಸತರಲ್ಲಿ ಹಲವು ಸಂಘ-ಸಂಸ್ಥೆಗಳು ಮಂಜಮ್ಮ ಜೋಗತಿ ಅವರನ್ನು ವಿವಿಧ ಕಾರ್ಯಕ್ರಮಗಳಿಗೆ ಆಹ್ವಾನಿಸಿ, ಗೌರವ ಸಂಭಾವನೆ ನೀಡಿ ಸನ್ಮಾನಿಸುತ್ತಿದ್ದವು. ಆದರೆ, ದಿನಕಳೆದಂತೆ ಕಾರ್ಯಕ್ರಮಗಳ ಆಹ್ವಾನವೂ ಕಡಿಮೆಯಾಗಿದ್ದು, ಗೌರವ ಸಂಭಾವನೆಯೂ ಇಲ್ಲದಂತಾಗಿದೆ. ಇದರ ಜೊತೆಗೆ ಸರ್ಕಾರದಿಂದ ಬರುವ ಮಾಶಾಸನವೂ ಸಮರ್ಪಕವಾಗಿ ಕೈಸೇರದ ಕಾರಣ, ದೈನಂದಿನ ಜೀವನ ನಿರ್ವಹಣೆಗೆ ತೀವ್ರ ಪರದಾಡುವಂತಾಗಿದೆ.
ಯಾರ ಮುಂದೆಯೂ ಕೈಚಾಚದೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿರುವ ಹಿರಿಯ ಕಲಾವಿದೆ, ತಮ್ಮ ಕೈಕಸುಬನ್ನೇ ನಂಬಿ ಬುಟ್ಟಿ ಹೆಣೆಯುತ್ತಿದ್ದಾರೆ.
