ನವದೆಹಲಿ: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಸಸ್ಪೆನ್ಸ್ ಈಗ ಅತ್ಯಂತ ರೋಚಕ ತಿರುವು ಪಡೆದುಕೊಂಡಿದೆ. ದೆಹಲಿಯಲ್ಲಿ ನಡೆದ ಸುಮಾರು 6 ಗಂಟೆಗಳ ಸುದೀರ್ಘ ಮ್ಯಾರಾಥಾನ್ ಸಭೆಯಲ್ಲಿ, ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಬಿಗ್ ಆಫರ್ ನೀಡಿದೆ.
ರಾಜ್ಯದಲ್ಲಿ ಉಂಟಾಗಿರುವ ಮುಖ್ಯಮಂತ್ರಿ ಕುರ್ಚಿಯ ಬಿಕ್ಕಟ್ಟನ್ನು ಸೌಹಾರ್ದಯುತವಾಗಿ ಬಗೆಹರಿಸಲು ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರ ಮುಂದೆ ಹೊಸ ಸೂತ್ರವೊಂದನ್ನು ಇಟ್ಟಿದ್ದಾರೆ ಎನ್ನಲಾಗಿದೆ.
ವಿಧಾನ ಪರಿಷತ್ ಹಾಗೂ ಮುಂಬರುವ ರಾಜ್ಯಸಭಾ ಚುನಾವಣೆಗಳ ಬೆನ್ನಲ್ಲೇ ಈ ಸಭೆ ನಡೆದಿರುವುದರಿಂದ, ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಸಭಾ ಸದಸ್ಯತ್ವ (MP) ನೀಡಿ, ಕೇಂದ್ರದಲ್ಲಿ ಪಕ್ಷದ ಪ್ರಮುಖ ಜವಾಬ್ದಾರಿ ವಹಿಸುವ ಆಫರ್ ಅನ್ನು ಹೈಕಮಾಂಡ್ ನೀಡಿದೆ. ಆ ಮೂಲಕ ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡಲು ಹಾದಿ ಸುಗಮಗೊಳಿಸುವುದು ದೆಹಲಿ ನಾಯಕರ ಪ್ಲಾನ್ ಆಗಿತ್ತು ಎನ್ನಲಾಗಿದೆ.
ಹೈಕಮಾಂಡ್ ನೀಡಿದ ಈ ಆಫರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣಕ್ಕೆ ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಕರ್ನಾಟಕದ ರಾಜಕಾರಣದಲ್ಲೇ (Karnataka Politics) ಮುಂದುವರಿಯಲು ತಮಗೆ ಹೆಚ್ಚಿನ ಆಸಕ್ತಿ ಇರುವುದಾಗಿ ಅವರು ಹೈಕಮಾಂಡ್ ನಾಯಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಸದ್ಯಕ್ಕೆ ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದು, ಈಗಲೇ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವುದು ಸೂಕ್ತವಲ್ಲ ಎಂಬ ವಾದವನ್ನು ಅವರು ಮಂಡಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಫೈನಲ್ ಫೈಟ್| 6 ಗಂಟೆಗಳ ಮ್ಯಾರಾಥಾನ್ ಸಭೆ – ಸಿಎಂ, ಡಿಸಿಎಂಗೆ ಹೈಕಮಾಂಡ್ ಸಂದೇಶ ಏನು?
ತಮ್ಮ ನಿಲುವಿಗೆ ಬದ್ಧರಾಗಿರುವ ಸಿದ್ದರಾಮಯ್ಯ ಅವರು, ಹೈಕಮಾಂಡ್ ಪ್ರಸ್ತಾಪದ ಕುರಿತು ಯೋಚಿಸಲು ಮತ್ತು ರಾಜ್ಯದ ತಮ್ಮ ಆಪ್ತ ನಾಯಕರೊಂದಿಗೆ ಚರ್ಚಿಸಲು ಇನ್ನಷ್ಟು ಕಾಲಾವಕಾಶ ಬೇಕು ಎಂದು ರಾಹುಲ್ ಗಾಂಧಿ (Rahul Gandhi) ಅವರ ಬಳಿ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಮುಂಬರುವ ರಾಜ್ಯಸಭೆ ಚುನಾವಣೆ ಮುಗಿಯುವವರೆಗೂ ಸದ್ಯದ ಪರಿಸ್ಥಿತಿಯನ್ನೇ ಕಾಯ್ದುಕೊಳ್ಳುವಂತೆ ಮತ್ತು ತದನಂತರ ಈ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರೋಣ ಎಂದು ಅವರು ಮನವಿ ಮಾಡಿದ್ದಾರೆ.
ಇದಕ್ಕೆ ಸ್ಪಂದಿಸಿರುವ ಹೈಕಮಾಂಡ್, ಸದ್ಯಕ್ಕೆ ಸಾರ್ವಜನಿಕವಾಗಿ ಒಗ್ಗಟ್ಟು ಪ್ರದರ್ಶಿಸುವಂತೆ ಹಾಗೂ ಸಭೆಯ ರಹಸ್ಯವನ್ನು ಕಾಪಾಡುವಂತೆ ಉಭಯ ನಾಯಕರಿಗೆ ಸೂಚಿಸಿದೆ. ಅಲ್ಲಿಯವರೆಗೆ ಕರ್ನಾಟಕದ ಸಿಎಂ ಕುರ್ಚಿಯ ಈ ಹಗ್ಗಜಗ್ಗಾಟ ಸದ್ಯಕ್ಕೆ ಮುಂದೂಡಲ್ಪಟ್ಟಿದೆ. ಇದನ್ನೂ ಓದಿ: ಹೈಕಮಾಂಡ್ ಸಭೆಯಲ್ಲಿ ಡಿಕೆಶಿ ‘ತ್ರಿಶೂಲ ವ್ಯೂಹ’: ಮೂರು ಖಡಕ್ ಷರತ್ತು ವಿಧಿಸಿ ಬಿಗಿಪಟ್ಟು!
ರಾಷ್ಟ್ರ ರಾಜಕಾರಣದ ಬಗ್ಗೆ ಸಿಎಂ ನಿಲುವು ಏನು?
ಈ ಹಿಂದೆ ಹಲವು ಬಾರಿ ಮಾಧ್ಯಮಗಳು ಹಲವು ಬಾರಿ ಸಿದ್ದರಾಮಯ್ಯನವರಲ್ಲಿ ನೀವು ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತೀರಾ ಎಂದು ಪ್ರಶ್ನೆ ಕೇಳಿದ್ದವು. ಈ ಸಂದರ್ಭದಲ್ಲಿ ಅವರು, ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವ ಯಾವುದೇ ಇರಾದೆಯನ್ನು ಹೊಂದಿಲ್ಲ ಮತ್ತು ತಮ್ಮ ಗಮನ ಸಂಪೂರ್ಣವಾಗಿ ರಾಜ್ಯದ ಜನರ ಮೇಲೆಯೇ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದರು.
ತಮ್ಮ ರಾಜಕೀಯ ಭವಿಷ್ಯ ಮತ್ತು ಆಸಕ್ತಿಯು ಕೇವಲ ರಾಜ್ಯ ರಾಜಕಾರಣಕ್ಕೆ ಸೀಮಿತವಾಗಿರುತ್ತದೆ ಎಂದು ಅವರು ಹಲವಾರು ಬಾರಿ ಪುನರುಚ್ಚರಿಸಿದ್ದರು. ಹಿಂದಿ ಭಾಷೆಯ ಮೇಲಿರುವ ಹಿಡಿತದ ಕೊರತೆಯೂ ಸೇರಿದಂತೆ ಹಲವು ಕಾರಣಗಳಿಂದ ಸಿದ್ದರಾಮಯ್ಯ ರಾಜ್ಯದಲ್ಲೇ ಮುಂದುವರಿಯಲು ಬಯಸುತ್ತಾರೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿತ್ತು.
