– ಹಣದ ಮೂಲದ ಬಗ್ಗೆ ಮಾಹಿತಿ ನೀಡಲು ಜಡ್ಜ್ ವಿಫಲ
– ತ್ರಿಸದಸ್ಯ ಸಮಿತಿಯ ತನಿಖಾ ವರದಿಯಲ್ಲಿ ಉಲ್ಲೇಖ
ನವದೆಹಲಿ: ಮನೆಯಲ್ಲಿ ಹಣ ಪತ್ತೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾ. ಯಶವಂತ್ ವರ್ಮಾ (Yashwant Varma) ಅವರ ವಿರುದ್ಧದ ಮೂರು ಆರೋಪಗಳು ಸಾಬೀತಾಗಿವೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ರಚಿಸಿದ್ದ ಮೂವರು ಸದಸ್ಯರ ವಿಚಾರಣಾ ಸಮಿತಿ ಹೇಳಿದೆ.
ನ್ಯಾಯಾಧೀಶರ (ವಿಚಾರಣಾ) ಕಾಯ್ದೆ, 1968 ರ ಅಡಿಯಲ್ಲಿ ಸಲ್ಲಿಸಿದ ತನ್ನ ವರದಿಯಲ್ಲಿ ಸಮಿತಿಯು, ನ್ಯಾಯಾಧೀಶ ವರ್ಮಾ ಅವರ ಅಧಿಕೃತ ನಿವಾಸದ ಆವರಣದ ಭಾಗವಾಗಿರುವ ಸ್ಟೋರ್ ರೂಂನೊಳಗೆ ಅಪಾರ ಪ್ರಮಾಣದಲ್ಲಿ 500 ರೂ. ಮುಖಬೆಲೆಯ ಕರೆನ್ಸಿ ನೋಟುಗಳು ಕಂಡುಬಂದಿವೆ ಎಂದು ತೀರ್ಮಾನಿಸಿದೆ. ನಗದು ವಸೂಲಾತಿ ಪ್ರಕರಣದಲ್ಲಿ ಮಾಜಿ ನ್ಯಾಯಾಧೀಶರನ್ನು ತಪ್ಪಿತಸ್ಥರೆಂದು ಸಮಿತಿಯು ಘೋಷಿಸಿದೆ. ಇದನ್ನೂ ಓದಿ: ನ್ಯಾ.ಯಶವಂತ್ ವರ್ಮಾ ವಿರುದ್ಧ ಭ್ರಷ್ಟಾಚಾರ ಆರೋಪ – ಲೋಕಸಭಾ ಸ್ಪೀಕರ್ ಓಂ ಬಿರ್ಲಾಗೆ ವರದಿ ಸಲ್ಲಿಸಿದ ವಿಚಾರಣಾ ಸಮಿತಿ
2025ರ ಮಾರ್ಚ್ 14 ರಂದು ರಾತ್ರಿ ನ್ಯಾ. ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯನ್ನು ನಂದಿಸಲು ಬಂದಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ, ನಿವಾಸದ ಕೋಣೆಯಲ್ಲಿ ಅಪಾರ ಪ್ರಮಾಣದ ಸುಟ್ಟ ಕರೆನ್ಸಿಗಳನ್ನು ಕಂಡುಕೊಂಡಿದ್ದರು.
ನವದೆಹಲಿಯ ತುಘಲಕ್ ಕ್ರೆಸೆಂಟ್‌ನ 30ನೇ ಸಂಖ್ಯೆಯ ಅಧಿಕೃತ ನಿವಾಸದೊಳಗಿನ ಕೊಠಡಿಯಲ್ಲಿ 500 ರೂ. ಮುಖಬೆಲೆಯ ನೋಟುಗಳು ದೊಡ್ಡ ಪ್ರಮಾಣದಲ್ಲಿ ಪತ್ತೆಯಾಗಿವೆ. ನಗದು ಇರುವಿಕೆ ಮತ್ತು ಮಾಲೀಕತ್ವದ ಬಗ್ಗೆ ನ್ಯಾಯಾಧೀಶರು ತೃಪ್ತಿದಾಯಕ ವಿವರಣೆಯನ್ನು ನೀಡಲು ವಿಫಲರಾಗಿದ್ದಾರೆ ಎಂದು ಸಮಿತಿಯು ತನ್ನ ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆ ಕೇಸ್ – ಹೈಕೋರ್ಟ್ ನ್ಯಾ.ಯಶವಂತ್ ವರ್ಮಾ ರಾಜೀನಾಮೆ

