ನವದೆಹಲಿ: ನ್ಯಾಯಮೂರ್ತಿ ಯಶವಂತ್ ವರ್ಮಾ (Justice Yashwant Varma) ವಿರುದ್ಧದ ಭ್ರಷ್ಟಾಚಾರ ಆರೋಪದ ತನಿಖೆ ನಡೆಸುತ್ತಿರುವ ಸಂಸತ್‌ನ ವಿಚಾರಣಾ ಸಮಿತಿಯು ನಿನ್ನೆ (ಮೇ 18) ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Om Birla) ಅವರಿಗೆ ವರದಿಯನ್ನು ಸಲ್ಲಿಸಿದೆ. ಮುಂಬರುವ ಮುಂಗಾರು ಅಧಿವೇಶನದಲ್ಲಿ ಈ ವರದಿಯನ್ನು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮಂಡಿಸಲಾಗುವುದು.
ದೆಹಲಿ ಹೈಕೋರ್ಟ್ ನ್ಯಾಯಧೀಶರಾಗಿದ್ದ ಯಶವಂತ್ ವರ್ಮಾ ಅವರ ಸರ್ಕಾರಿ ನಿವಾಸದಲ್ಲಿ 2025ರ ಮಾರ್ಚ್ 14ರ ರಾತ್ರಿ ಬೆಂಕಿ ದುರಂತ ಸಂಭವಿಸಿತ್ತು. ಬೆಂಕಿ ನಂದಿಸಲು ಬಂದ ಸಿಬ್ಬಂದಿ ಕೊಠಡಿಯೊಂದರಲ್ಲಿ ದೊಡ್ಡ ಪ್ರಮಾಣದಲ್ಲಿ ಸುಟ್ಟ ಹಣದ ನೋಟುಗಳನ್ನು ಪತ್ತೆ ಹಚ್ಚಿದ್ದರು. ಈ ಪ್ರಕರಣ ದೇಶದ್ಯಾಂತ ಸಂಚಲನ ಸೃಷ್ಠಿಸಿತ್ತು. ಇದನ್ನೂ ಓದಿ: ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆ ಕೇಸ್ – ಹೈಕೋರ್ಟ್ ನ್ಯಾ.ಯಶವಂತ್ ವರ್ಮಾ ರಾಜೀನಾಮೆ
ಪ್ರಕರಣದ ಬೆನ್ನಲ್ಲೇ ದೆಹಲಿ ಹೈಕೋರ್ಟ್ನಿಂದ ಅಲಾಹಾಬಾದ್ ಹೈಕೋರ್ಟ್‌ಗೆ ನ್ಯಾ. ವರ್ಮಾ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಅಂದಿನ ಮುಖ್ಯ ನ್ಯಾಯಾಧೀಶರಾದ ಸಂಜೀವ್ ಖನ್ನಾ ಅವರು ಒಂದು ಆಂತರಿಕ ಸಮಿತಿಯನ್ನು ರಚಿಸಿದ್ದರು. ಇದರ ನಂತರ 2025ರ ಜುಲೈನಲ್ಲಿ 200ಕ್ಕೂ ಹೆಚ್ಚು ಸಂಸದರು ನ್ಯಾ. ವರ್ಮಾ ಅವರನ್ನು ಪದಚ್ಯುತಗೊಳಿಸುವ ಪ್ರಸ್ತಾವನೆಗೆ ಸಹಿ ಹಾಕಿದ್ದರು.
ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಾಧೀಶರನ್ನು ತೆಗೆದುಹಾಕುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ. ಇದಕ್ಕಾಗಿ 1968ರ ಜಡ್ಜಸ್ ಇನ್‌ಕ್ವೈರಿ ಆಕ್ಟ್ ಅಡಿಯಲ್ಲಿ ಪ್ರಕ್ರಿಯೆಯನ್ನು ಅನುಸರಿಸಬೇಕು. ಇದರ ಆಧಾರದ ಮೇಲೆ ಲೋಕಸಭಾ ಸ್ಪೀಕರ್ ಅವರು 2025ರ ಆಗಸ್ಟ್ 12ರಂದು ಮೂರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದ್ದರು.
ಸಂಸತ್ತಿನಿಂದ ಪದಚ್ಯುತಿಯ ಸಾಧ್ಯತೆ ಕಂಡುಬಂದ ಹಿನ್ನೆಲೆ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಇತ್ತೀಚೆಗೆ ಅಲಾಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ಪದವಿಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ನಂತರ ಅವರನ್ನು ಪದಚ್ಯುತಗೊಳಿಸುವ ಕಾರ್ಯವಿಧಾನಕ್ಕೆ ಹೆಚ್ಚು ಪ್ರಾಮುಖ್ಯತೆ ಉಳಿಯುವುದಿಲ್ಲ. ನ್ಯಾಯಾಧೀಶರು ರಾಷ್ಟ್ರಪತಿಗೆ ರಾಜೀನಾಮೆ ಸಲ್ಲಿಸಿ, ಅದನ್ನು ಪ್ರಕಟಿಸಿದರೆ ಅದು ಸ್ವೀಕೃತವಾದಂತೆ ಪರಿಗಣಿಸಲಾಗುತ್ತದೆ. ಆದರೂ ಅವರ ಹೆಸರು ಇನ್ನೂ ಅಲಾಹಾಬಾದ್ ಹೈಕೋರ್ಟ್‌ನ ಪ್ರಸ್ತುತ ನ್ಯಾಯಾಧೀಶರ ಪಟ್ಟಿಯಲ್ಲಿರುವುದು ಗಮನಾರ್ಹ.ಇದನ್ನೂ ಓದಿ: ಕಂತೆ ಕಂತೆ ಹಣ ಕೇಸ್ – ನ್ಯಾ.ಯಶವಂತ್ ವರ್ಮಾ ಅರ್ಜಿ ವಜಾ

