– ಚೊಚ್ಚಲ ಆವೃತ್ತಿಯಲ್ಲೇ ಕಿರೀಟ ಗೆದ್ದುಕೊಟ್ಟಿದ್ದ ಪಾಂಡ್ಯಗೆ ದೊಡ್ಡ ಹಿನ್ನಡೆ
ಮುಂಬೈ: 2022ರ ಪದಾರ್ಪಣೆ ಆವೃತ್ತಿಯಲ್ಲೇ ಗುಜರಾತ್ ಟೈಟಾನ್ಸ್ (Gujarat Titans) ತಂಡಕ್ಕೆ ಟ್ರೋಫಿ ತಂದುಕೊಡುವಲ್ಲಿ ಯಶಸ್ವಿಯಾಗಿದ್ದ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿ ನಿರಾಕರಿಸಿದೆ.
ಸದ್ಯ ಮುಂಬೈ ತಂಡದ (Mumbai Indians Team) ನಾಯಕನಾಗಿರುವ ಹಾರ್ದಿಕ್ ಪಾಂಡ್ಯ ಅವರನ್ನ ಮರಳಿ ತಂಡಕ್ಕೆ ಸೇರಲು ಗುಜರಾತ್ ಫ್ರಾಂಚೈಸಿ ಮಾತುಕತೆ ನಡೆಸಿತ್ತು. ಆದ್ರೆ ನಾಯಕತ್ವದ ಷರತ್ತು ಮುಂದಿಟ್ಟ ಹಿನ್ನೆಲೆ ಪಾಂಡ್ಯ ಅವರನ್ನ ತಂಡಕ್ಕೆ ಕರೆದುಕೊಳ್ಳಲು ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ನಿರಾಕರಿಸಿದೆ. ಇದು ಹಾರ್ದಿಕ್ ಪಾಂಡ್ಯ ಅವರಿಗೆ ದೊಡ್ಡ ಹಿನ್ನಡೆಯಾಗಿದೆ.
32 ವರ್ಷದ ಹಾರ್ದಿಕ್ ಪಾಂಡ್ಯ 2022 ರಲ್ಲಿ ಪದಾರ್ಪಣೆ ಮಾಡಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ತಂದುಕೊಟ್ಟಿದ್ದರು. 2023 ರಲ್ಲಿ ತಂಡವನ್ನ ಫೈನಲ್‌ವರೆಗೆ ಕೊಂಡೊಯ್ದಿದ್ದರು. 2024 ರಲ್ಲಿ ಮುಂಬೈ ಇಂಡಿಯನ್ಸ್‌ಗೆ ಮರಳಿದ್ದರು. ಇದಕ್ಕೂ ಮುನ್ನ ಮುಂಬೈ ಪರ 7 ಆವೃತ್ತಿಗಳಲ್ಲಿ ಆಟಗಾರನಾಗಿ ಆಡಿದ್ದ ಪಾಂಡ್ಯ 2024ರಲ್ಲಿ ನಾಯಕನಾಗಿ ತಂಡಕ್ಕೆ ಮರಳಿದರು.

2024, 2025, 2026 ರಲ್ಲಿ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದಲ್ಲಿ ಮುಂಬೈ ಹೀನಾಯ ಪ್ರದರ್ಶನ ನೀಡುತ್ತಾ ಬಂದಿತು. 2024ರಲ್ಲಿ ಲೀಗ್‌ನಲ್ಲಿ ಹೊರಬಿದ್ದ ಮುಂಬೈ 2025ರಲ್ಲಿ ಕ್ವಾಲಿಫೈಯರ್-2 ನಲ್ಲಿ ಪಂಜಾಬ್ ವಿರುದ್ಧ ಸೋಲು ಕಂಡಿತು. 2026ರಲ್ಲಿ ಹೀನಾಯವಾಗಿ ಸೋತು ಲೀಗ್‌ನಲ್ಲೇ ಹೊರ ನಡೆಯಿತು. ಕಳೆದ ಮೂರು ಆವೃತ್ತಿಗಳಲ್ಲಿ ಪ್ರಶಸ್ತಿ ಗೆದ್ದುಕೊಡುವಲ್ಲಿ ವಿಫಲವಾದ ಹಿನ್ನೆಲೆ ಹಾರ್ದಿಕ್ ಪಾಂಡ್ಯ ಅವರನ್ನ ತಂಡದಿಂದ ಹೊರದಬ್ಬುವ ನಿರ್ಧಾರಕ್ಕೆ ಮುಂಬೈ ಬಂದಿದೆ ಎನ್ನಲಾಗ್ತಿದೆ.
ನಾಯಕತ್ವ ಬೇಡಿಕೆ ತಿರಸ್ಕಾರ
ಪಾಂಡ್ಯ ಅವರನ್ನ ಮತ್ತೆ ನಾಯಕನಾಗಿ ನೇಮಕಗೊಳ್ಳಲು ಷರತ್ತು ವಿಧಿಸಿದ ನಂತರ ಗುಜರಾತ್ ಟೈಟಾನ್ಸ್ ಅವರ ಮರಳುವಿಕೆಯನ್ನೇ ತಿರಸ್ಕರಿಸಿದೆ ಎಂದು ವರದಿಯಾಗಿದೆ.
ಹಾರ್ದಿಕ್ ಪಾಂಡ್ಯ ಅವರು ತಂಡಕ್ಕೆ ಮರಳುವುದಾಗಿ ತಿಳಿಸಿದಾಗ ಫ್ರಾಂಚೈಸಿ ಒಪ್ಪಿಕೊಂಡಿತು, ನಾಯಕ ಶುಭಮನ್ ಗಿಲ್ ಅವರೊಂದಿಗೂ ಚರ್ಚಿಸಲಾಗಿತ್ತು, ಅವರೂ ಒಪ್ಪಿದ್ದರು. ಆದ್ರೆ ಪಾಂಡ್ಯ ಅವರು ವಿಧಿಸಿದ ನಾಯಕತ್ವದ ಷರತ್ತಿಗೆ ಎಲ್ಲರಿಂದಲೂ ಆಕ್ಷೇಪ ವ್ಯಕ್ತವಾಯಿತು. ಹೀಗಾಗಿ ಅವರನ್ನು ಮತ್ತೆ ತಂಡಕ್ಕೆ ಕರೆತರುವ ಪ್ರಯತ್ನವನ್ನ ಕೈಬಿಡಲಾಯಿತು.

ಚೆನ್ನೈ, ಕೆಕೆಆರ್ ಕಣ್ಣು
2027ರ ಐಪಿಎಲ್‌ಗಾಗಿ ಆಲ್ರೌಂಡರ್ ಪಾಂಡ್ಯರನ್ನ ಟ್ರೇಡ್ ಇನ್ ವಿಂಡೋ ನಿಯಮದಲ್ಲಿ ಬದಲಾವಣೆ ಮಾಡಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಗಳು ಆಸಕ್ತಿ ತೋರಿಸಿವೆ ಎನ್ನಲ್ತಾಗಿದೆ. ಆದ್ರೆ ಮುಂಬೈ ಚೆನ್ನೈ ತಂಡಕ್ಕೆ ಪಾಂಡ್ಯರನ್ನ ಬಿಟ್ಟುಕೊಡಲು ಶಿವಂ ದುಬೆ ಅವರನ್ನು ಬಿಟ್ಟುಕೊಡುವಂತೆ ಕೇಳಿದೆ. ಹೀಗಾಗಿ ಸಿಎಸ್‌ಕೆ ಫ್ರಾಂಚೈಸಿಯ ಮುಂದಿನ ನಿರ್ಧಾರದ ಬಗ್ಗೆ ಕಾದುನೋಡಬೇಕಿದೆ.

