– ವಿಐಪಿ ಬ್ಯಾರಕ್‌ನಲ್ಲಿ ಫೋನಲ್ಲಿ ಬಿಂದಾಸ್ ಮಾತು
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail) ರೇಪ್ ಪ್ರಕರಣದ ಅಪರಾಧಿ ಪ್ರಜ್ವಲ್ ರೇವಣ್ಣ ಬಿಂದಾಸ್ ಆಗಿ ಫೋನಲ್ಲಿ ಮಾತನಾಡ್ತಿರುವ ವಿಡಿರೋ ʻಪಬ್ಲಿಕ್‌ಟಿವಿʼಗೆ ಲಭ್ಯವಾಗಿದೆ.
ಡಿಸಿಪಿ ಹರಿಬಾಬು ಮತ್ತು ಇಮಾಮ್ ಖಾಸೀಂ ನೇತೃತ್ವದಲ್ಲಿ ಸಿಸಿಬಿಯು ಆಗಸ್ಟ್ 6ರಂದು ದಿಢೀರ್ ದಾಳಿ ನಡೆಸಿದ್ದು, ಜೈಲಲ್ಲಿ ಪ್ರಜ್ವಲ್ ರೇವಣ್ಣ (Prajwal Revanna), ಕೈದಿಗಳು ಧರಿಸುವ ಬಿಳಿವಸ್ತ್ರ ಧರಿಸದೇ ಕಲರ್ ಡ್ರೆಸ್‌ನಲ್ಲಿ ಇರೋದು ಪತ್ತೆಯಾಗಿದೆ.
ಅಷ್ಟೇ ಅಲ್ಲದೇ, ವಿಐಪಿ ಬ್ಯಾರಕ್‌ನಲ್ಲಿ ನಿಂತು ಪ್ರಜ್ವಲ್ ರೇವಣ್ಣ ಬಿಂದಾಸ್ ಆಗಿ ಸ್ನೇಹಿತರ ಜೊತೆಗೆ ಮಾತಾಡುತ್ತಿರುವ ವಿಡಿಯೋ ಸಿಕ್ಕಿದೆ. ಪ್ರಜ್ವಲ್ ರೇವಣ್ಣ ಕೈಯಲ್ಲಿ ಮೊಬೈಲ್ ಪತ್ತೆಯಾಗಿರುವ ಬೆನ್ನಲ್ಲೇ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರಜ್ವಲ್ ಬ್ಯಾರಕ್‌ನಲ್ಲಿದ್ದ ಪ್ರತಾಪ್ ರೈ ಎ-1 ಹಾಗೂ ಪ್ರಜ್ವಲ್ ರೇವಣ್ಣ ಎ-2 ಅಂತ ಉಲ್ಲೇಖಿಸಲಾಗಿದೆ. ಇನ್ನು, ಪ್ರಜ್ವಲ್ ಬಿಳಿ ವಸ್ತ್ರ ಧರಿಸದೇ ಕಲರ್ ಡ್ರೆಸ್ ಧರಿಸಿರುವುದನ್ನು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಗಂಭೀರವಾಗಿ ಪರಿಗಣಿಸಿದ್ದಾರೆ. ಕರ್ತವ್ಯಲೋಪದ ಹಿನ್ನೆಲೆ ಅಸಿಸ್ಟೆಂಟ್ ಸೂಪರಿಂಡೆಂಟ್ ಈರಣ್ಣ ರಂಗಾಪುರ ಅವರನ್ನು ಅಮಾನತುಗೊಳಿಸಿದ್ದಾರೆ.
ಜೈಲು ಮುಖ್ಯ ಅಧೀಕ್ಷಕ ಅನ್ಶುಕುಮಾರ್‌ಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. ಪ್ರಜ್ವಲ್ ರೇವಣ್ಣನನ್ನು ವಿಐಪಿ ಸೆಲ್‌ನಿಂದ ಬ್ಯಾರಕ್‌ಗೆ ಶಿಫ್ಟ್ ಮಾಡಲು ಸೂಚಿಸಿದ್ದಾರೆ. ಈ ಮಧ್ಯೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾತಾಡಿ, ರೇಡ್‌ಗೆ ಸೂಚಿಸಿದ್ದು ನಾನೇ, ಕಠಿಣ ಕ್ರಮ ತಗೋತೇವೆ ಅಂದಿದ್ದಾರೆ.

