– ಹಾಸ್ಟೆಲ್‌ನಲ್ಲಿದ್ದ ಬಾಲಕಿ ಮೇಲೆ 3 ತಿಂಗಳಿಂದ ನಿರಂತರ ದೌರ್ಜನ್ಯ
ಚಿಕ್ಕಬಳ್ಳಾಪುರ: ಚರ್ಚ್ ಪಾದ್ರಿಯೊಬ್ಬರ (Church Father) ವಿರುದ್ಧ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ದೇವನಹಳ್ಳಿ (Devanahalli) ತಾಲೂಕಿನ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಳಿಬಂದಿದೆ.
ಹಾಸ್ಟೆಲ್‌ನಲ್ಲಿದ್ದ 13 ವರ್ಷದ ಬಾಲಕಿಗೆ ಚರ್ಚ್ ಪಾದ್ರಿ 3 ತಿಂಗಳಿನಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಾಸ್ಟೆಲ್‌ನ ಶೌಚಾಲಯ ಸ್ವಚ್ಛಗೊಳಿಸಲು ಬಾಲಕಿಯನ್ನ ಕಳುಹಿಸಿ, ಆಕೆಯ ಹಿಂದಿನಿಂದ ಬಂದು ಕಿರುಕುಳ ನೀಡುತ್ತಿದ್ದ ಎಂದು ಸಂತ್ರಸ್ತ ಬಾಲಕಿ ತನ್ನ ಚಿಕ್ಕಮ್ಮನ ಬಳಿ ಭಾವುಕವಾಗಿ ಹೇಳಿಕೊಂಡಿದ್ದಾಳೆ ಎನ್ನಲಾಗಿದೆ.

ಮೂರು ತಿಂಗಳ ಅವಧಿಯಲ್ಲಿ ಐದಕ್ಕಿಂತ ಹೆಚ್ಚು ಬಾರಿ ಕಿರುಕುಳ ನೀಡಲಾಗಿದೆ ಅಂತ ದೂರಿನಲ್ಲಿ ಉಲ್ಲೇಖಿಸಿಲಾಗಿದೆ. ಘಟನೆ ಬಗ್ಗೆ ಬಾಲಕಿ ತನ್ನ ಚಿಕ್ಕಮ್ಮನಿಗೆ ಮಾಹಿತಿ ನೀಡಿದ್ದಾಳೆ, ಬಳಿಕವೇ ವಿಷಯ ಪೋಷಕರಿಗೂ ತಿಳಿದಿದೆ. ಕೂಡಲೇ ಪೋಷಕರು ಹಾಸ್ಟೆಲ್‌ಗೆ ತೆರಳಿ ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ಪಾದ್ರಿ, ತನ್ನ ಗಮನಕ್ಕೆ ತರದೆ ಹಾಸ್ಟೆಲ್‌ಗೆ ಏಕೆ ಬಂದಿದ್ದೀರಿ? ಎಂದು ಪೋಷಕರನ್ನೇ ಪ್ರಶ್ನಿಸಿ ಬೈದಿದ್ದಾರೆ. ಬಾಲಕಿ ನೀಡಿದ ಮಾಹಿತಿ ಆಧರಿಸಿ ಘಟನೆ ಕುರಿತು ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

