ಕಲಬುರಗಿ: ಅಮರನಾಥ ಯಾತ್ರೆಯ ಪ್ರವಾಸದಲ್ಲಿರುವ ಬಬಲಾದ ಶ್ರೀಗಳು ಸೇರಿ 14 ಜನ ಭಕ್ತರ ತಂಡ ಹಾಗೂ ಮೇಘಸ್ಫೋಟದಲ್ಲಿ ಸಿಲುಕಿದ ಗಾಣಗಾಪುರದ 11 ಜನ ಭಕ್ತರ ತಂಡ ಮತ್ತು ಕಲಬುರಗಿಯ 30 ಜನರ ಒಂದು ತಂಡ ಸೇರಿದಂತೆ ಒಟ್ಟು 3 ಪ್ರತ್ಯೇಕ ತಂಡದ 55 ಜನ ಸುರಕ್ಷಿತವಾಗಿದ್ದಾರೆ.
ಅಫಜಲಪುರ ತಾಲೂಕಿನ ಗಾಣಗಾಪುರದ 11 ಜನ ನಿವಾಸಿಗಳು ಜುಲೈ 3ರಂದು ಕಲಬುರಗಿಯಿಂದ ಅಮರಾನಾಥ ಯಾತ್ರೆಗೆ ಹೋಗಿದ್ದರು. ನಿನ್ನೆ ಸಂಜೆ ಅಮರನಾಥ ಶಿವಲಿಂಗ ದರ್ಶನ ಪಡೆದಿದ್ದು, ಹೆಚ್ಚಿನ ಮಳೆ ಆರಂಭವಾದ ಹಿನ್ನೆಲೆ ತಕ್ಷಣ ನಡೆದುಕೊಂಡು ಸುರಕ್ಷಿತ ಸ್ಥಳಕ್ಕೆ ಸೇರಿದ್ದಾಗಿ ಮಾಹಿತಿ ನೀಡಿದ್ದಾರೆ.
Advertisement
Advertisement
ಅದರಂತೆ ಅಮರನಾಥ ದರ್ಶನಕ್ಕೆ ತೆರಳಿದ ಕಲಬುರಗಿ ತಾಲೂಕಿನ ಬಬಲಾದ ಶ್ರೀಗಳು ಸೇರಿ 14 ಜನರ ಭಕ್ತರ ತಂಡ ಸುರಕ್ಷಿತರಾಗಿದೆ. ಬಬಲಾದ ಶ್ರೀ ಗುರುಪಾದಲಿಂಗ ಮಹಾ ಶಿವಯೋಗಿಗಳು ತಮ್ಮ ಭಕ್ತ ಸಮೂಹದೊಂದಿಗೆ ಕಳೆದ ಸೋಮವಾರ ಕಲಬುರಗಿಯಿಂದ ಅಮರನಾಥ್ ದರ್ಶನಕ್ಕೆ ಹೋಗಿದ್ದರು. ಇದೀಗ ಶ್ರೀಗಳು ಅಮರನಾಥದಿಂದ ಸುರಕ್ಷಿತರಾಗಿ ವೈಷ್ಣವಿ ದೇವಿಯತ್ತ ಪ್ರವಾಸ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.
Advertisement
Advertisement
ಕಲಬುರಗಿ ನಗರದ 30 ಜನರಿರುವ ಮತ್ತೊಂದು ತಂಡ ಕಳೆದ ಸೋಮವಾರ ಅಮರನಾಥ ಯಾತ್ರೆಗೆ ತೆರಳಿದ್ದು, ವೈಷ್ಣವಿ ದೇವಿ ದರ್ಶನ ಮುಗಿಸಿಕೊಂಡು ಅಮರನಾಥ ಶಿವಲಿಂಗ ದರ್ಶನಕ್ಕೆ ತೆರಳುವಾಗ ಮೇಘಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಮಾರ್ಗಮಧ್ಯೆ ಜಮ್ಮುವಿನಲ್ಲಿ ಬಿಎಸ್‍ಎಫ್‍ನವರು ತಡೆದು ಮರಳಿ ಊರಿಗೆ ತೆರಳುವಂತೆ ಕಳುಹಿಸಿ ಕೊಟ್ಟಿದ್ದಾರೆ. ಇದನ್ನೂ ಓದಿ: ಭಾರೀ ಮಳೆಯಿಂದಾಗಿ ಕೇದಾರನಾಥ ಯಾತ್ರೆ ಸ್ಥಗಿತ
ಆತಂಕದ ನಡುವೆ ಹೇಗಾದರೂ ದರ್ಶನ ಪಡೆಯಬೇಕೆಂದರೂ ಬಿಎಸ್‍ಎಫ್‍ನವರು ವಾಹನಗಳನ್ನು ಪಾರ್ಕಿಂಗ್ ಸಹ ಮಾಡಲು ಬಿಡದೆ ವಾಪಸ್ ಕಳಿಸಿದ್ದಾರೆಂದು ತಂಡದಲ್ಲಿರುವ ವೀರೇಶ್ ಎಂಬವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಮೂರು ಪ್ರತ್ಯೇಕ ತಂಡದಲ್ಲಿರುವ 55 ಜನರು ಸುರಕ್ಷಿತವಾಗಿದ್ದಾರೆ.