ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoJK) ಉಗ್ರರನ್ನು ಅಳಿಯಂದಿರಂತೆ ನಡೆಸಿಕೊಂಡು, ನಾಗರಿಕರನ್ನು ಕಗ್ಗೊಲೆ ಮಾಡಲಾಗ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್‌ಪಿ ವೈದ್ ಕಿಡಿಕಾರಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಪಾಕ್‌ನ (Pakistan) ಕರಾಳ ಮುಖವನ್ನು ಬಯಲಿಗೆಳೆದಿದ್ದಾರೆ. ಜಾಗತಿಕ ಭಯೋತ್ಪಾದಕರಾದ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್‌ರನ್ನು ಅಳಿಯಂದಿರಂತೆ ಪಾಕ್ ನಡೆಸಿಕೊಳ್ಳುತ್ತಿದೆ. ಅವರಿಗೆ ವಿವಿಐಪಿ ಸ್ಥಾನಮಾನ ನೀಡಲಾಗಿದೆ. ಅವರು ಭಯವಿಲ್ಲದೆ ಸರ್ಕಾರದ ಭದ್ರತೆಯಲ್ಲಿ ಓಡಾಡುತ್ತಿದ್ದಾರೆ. ಆದರೆ ಶಾಂತಿಯುತ ನಾಗರಿಕ ಸಮಾಜದ ನಾಯಕರನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳಲಾಗುತ್ತಿದೆ. ಅಂತವರ ಪತ್ತೆಗೆ ನಗದು ಬಹುಮಾನ ಘೋಷಿಸಲಾಗಿದೆ. ಇದು ಆಘಾತಕಾರಿ ಬೆಳವಣಿಗೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಏನೇ ಪರಿಹಾರ ಕೊಟ್ರೂ ಮಗ ಮರಳಿ ಬರೋದಿಲ್ಲ – ಪಹಲ್ಗಾಮ್‌ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಕುದುರೆ ರೈಡರ್ ತಂದೆ ಕಣ್ಣೀರು
ಹಣದುಬ್ಬರ, ಹಕ್ಕುಗಳು ಮತ್ತು ಆಡಳಿತದ ಕುರಿತು ಪಿಒಜೆಕೆಯಲ್ಲಿ ಸಾರ್ವಜನಿಕ ಪ್ರತಿಭಟನೆ ನಡೆಸಿದ ಜಂಟಿ ಅವಾಮಿ ಕ್ರಿಯಾ ಸಮಿತಿಯನ್ನು (ಜೆಎಎಸಿ) ಉಗ್ರ ಸಂಘಟನೆ ಎಂದು ಪಾಕ್ ಘೊಷಿಸಿದೆ. ಜೆಎಎಸಿ ನಾಯಕರ ತಲೆಗೆ 1 ಕೋಟಿ ರೂ. ಬಹುಮಾನ ಘೋಷಿಸಲಾಗಿದೆ. ಇದು ಎಂತಹ ವಿಪರ್ಯಾಸ. ಮೂಲಭೂತ ಹಕ್ಕುಗಳಿಗಾಗಿ ಧ್ವನಿ ಎತ್ತುವವರನ್ನು ಹತ್ಯೆ ಮಾಡಲಾಗುತ್ತಿದೆ. ಇಲ್ಲಿ ದೊಡ್ಡ ಪ್ರಮಾಣದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕಳೆದ ಮೂರು ದಶಕಗಳಲ್ಲಿ 5,000ಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದಾರೆ ಎಂದು ಸೂಚಿಸುವ ವಿಶ್ವಾಸಾರ್ಹ ವರದಿಗಳಿವೆ. ಪಾಕಿಸ್ತಾನ ಸೇನೆಯ ವಿರುದ್ಧ ಧ್ವನಿ ಎತ್ತಲು ಧೈರ್ಯ ಮಾಡಿದವರನ್ನು ಬಂಧಿಸಿ ಅವರ ಸುಳಿವು ಸಿಗದಂತೆ ಮಾಡಲಾಗಿದೆ. ಈ ಪ್ರದೇಶದ ಜನಸಂಖ್ಯಾ ಸ್ವರೂಪವನ್ನು ಬದಲಾಯಿಸುತ್ತಿದೆ. ಶಿಯಾ ಪ್ರಾಬಲ್ಯದ ಗಿಲ್ಗಿಟ್-ಬಾಲ್ಟಿಸ್ತಾನ್‌ನಲ್ಲಿ ಸುನ್ನಿಗಳು ನೆಲೆಸುತ್ತಿದ್ದಾರೆ. ಅದೇ ರೀತಿ, ಪಂಜಾಬ್‌ನ ಮಾಜಿ ಸೈನಿಕರನ್ನು ಪಿಒಜೆಕೆಗೆ ತಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಗೋಧಿ ಹಿಟ್ಟಿನ ಬೆಲೆ ಏರಿಕೆ, ವಿದ್ಯುತ್ ಸುಂಕಗಳು ಮತ್ತು ರಾಜಕೀಯ ಹಕ್ಕುಗಳಿಗಾಗಿ ಪಿಒಜೆಕೆ ಜೆಎಸಿ ನೇತೃತ್ವದಲ್ಲಿ ಪಿಒಕೆಯಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಈ ಸಮಯದಲ್ಲಿ ವೈದ್ ಅವರು ಮಾತಾಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಹೆದ್ದಾರಿಯಲ್ಲಿ ಸಿಸಿಟಿವಿ ಅಳವಡಿಸಿ ಸೇನೆಯ ಚಲನವಲನ ಪಾಕಿಸ್ತಾನಕ್ಕೆ ರವಾನೆ – ಪಂಜಾಬ್ ವ್ಯಕ್ತಿ ಅರೆಸ್ಟ್
