ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯಿಂದ(Strait of Hormuz) ದಾಟಿದ್ದ ಭಾರತೀಯ ಹಡಗುಗಳ(Indian Ship) ಮೇಲೆ ದಾಳಿ ನಡೆಸಿದ್ದು ಯಾರು ಎಂಬ ಪ್ರಶ್ನೆ ಈಗ ಎದ್ದಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮಾಡಿರುವ ಪೋಸ್ಟ್‌ನಿಂದ ಈ ಪ್ರಶ್ನೆ ಈಗ ಹುಟ್ಟಿಕೊಂಡಿದೆ.
ಇರಾನ್ ನಡೆಸಿದ ಡ್ರೋನ್ ದಾಳಿಯನ್ನು ಟ್ರಂಪ್ ತೀವ್ರವಾಗಿ ಖಂಡಿಸಿದ್ದು ಈ ದಾಳಿಯನ್ನು ಖಂಡಿತವಾಗಿಯೂ ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಹೋರ್ಮುಜ್ ಜಲಸಂಧಿಯಿಂದ ಹೊರಡುತ್ತಿದ್ದ ಭಾರತೀಯ ಹಡಗುಗಳ ಮೇಲೆ ಇರಾನ್ ನಿನ್ನೆ ರಾತ್ರಿ ನಡೆಸಿದ ಡ್ರೋನ್ ದಾಳಿಯನ್ನು (Drone Attack) ಸಂಪೂರ್ಣವಾಗಿ ತಡೆಯಲಾಗಿದೆ. ಇರಾನ್ ತಕ್ಷಣವೇ ತನ್ನ ಬುದ್ಧಿ ಕಲಿಯಬೇಕು, ಅದೂ ಬೇಗನೇ ಎಂದು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಶಾಂತಿ ಒಪ್ಪಂದದ ಬಗ್ಗೆ ಇರಾನ್ ಸುಳ್ಳು ಸುದ್ದಿಗಳನ್ನು (Fake News) ಹರಡುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. ನಾವು ಲಿಖಿತವಾಗಿ ಒಪ್ಪಿಕೊಂಡಿರುವ ನಿಯಮಗಳಿಗೂ, ಇರಾನ್ ಮಾಧ್ಯಮಗಳಿಗೆ ಸೋರಿಕೆ ಮಾಡಿರುವ ನಿಯಮಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಇರಾನ್ ಮಾಡಿರುವ ದುರ್ಬಲ ಹೇಳಿಕೆಗಳು ಸತ್ಯಕ್ಕೆ ದೂರವಾಗಿವೆ. ಇರಾನ್‌ನವರನ್ನು ಅಪ್ರಾಮಾಣಿಕ ಜನರು ಎಂದು ಕರೆದಿರುವ ಟ್ರಂಪ್ ಅವರೊಂದಿಗೆ ಪ್ರಾಮಾಣಿಕವಾಗಿ ವ್ಯವಹರಿಸಲು ಸಾಧ್ಯವೇ ಇಲ್ಲ ಎಂದು ಬರೆದಿದ್ದಾರೆ. ಇದನ್ನೂ ಓದಿ: ಭಾರತದ ವಿರುದ್ಧ ಯುರೋಪ್ ಶಸ್ತ್ರಾಸ್ತ್ರಗಳ ಬಳಕೆ – ರಷ್ಯಾದಿಂದ ತೈಲ ಖರೀದಿ ಟೀಕೆಗೆ ಜೈಶಂಕರ್ ಕಿಡಿ
ಈ ವಾರ ಓಮನ್ ಕರಾವಳಿಯ ಬಳಿ ನಡೆದ ಅಮೆರಿಕ ಮಿಲಿಟರಿ ದಾಳಿಯಲ್ಲಿ ತೈಲ ಹಡಗಿನಲ್ಲಿದ್ದ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದಾರೆ. ಭಾರತೀಯ ಸಿಬ್ಬಂದಿ ಇರುವ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿರುವುದಕ್ಕೆ ಭಾರತ ಸರ್ಕಾರವು ಅಮೆರಿಕದ ರಾಯಭಾರಿಯನ್ನು ಕರೆಸಿ ತನ್ನ ತೀವ್ರ ಪ್ರತಿಭಟನೆಯನ್ನು ದಾಖಲಿಸಿದೆ. ಇಂತಹ ದಾಳಿಗಳು ತೀವ್ರ ಕಳವಳಕಾರಿ ಎಂದು ಭಾರತ ಹೇಳಿದೆ.
