– ಭಾರತದ ಮೇಲೆ ದಾಳಿ ಮಾಡಲು ಯುರೋಪ್ ದೇಶಗಳ ಶಸ್ತ್ರಾಸ್ತ್ರ ಬಳಕೆ; ಆರೋಪ
ಹೆಲ್ಸಿಂಕಿ: ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ನಿಯಂತ್ರಣದಲ್ಲಿರಲಿ ಎಂಬ ಉದ್ದೇಶದಿಂದ ರಷ್ಯಾದಿಂದ ತೈಲ ಖರೀದಿಸುವಂತೆ ಅಮೆರಿಕವೇ ಭಾರತಕ್ಕೆ ಖುದ್ದಾಗಿ ವಿನಂತಿಸಿತ್ತು ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಹೇಳಿದ್ದಾರೆ.
ಫಿನ್‌ಲ್ಯಾಂಡ್‌ನ ಕುಲ್ತಾರಂತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾದ ನಂತರ, ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು (Russian Crude Oil) ಖರೀದಿಸುತ್ತಿರುವುದನ್ನ ಸಮರ್ಥಿಸಿಕೊಂಡಿದ್ದಾರೆ.

ರಷ್ಯಾದ ತೈಲದ ಮೇಲೆ ಅಮೆರಿಕ ವಿಧಿಸಿರುವ ಅಸ್ಥಿರ ನಿರ್ಬಂಧಗಳನ್ನು ಟೀಕಿಸಿರುವ ಜೈಶಂಕರ್, 2022 ರಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದಾಗ ಅಮೆರಿಕವು (America) ರಷ್ಯಾದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿತ್ತು. ಜೊತೆಗೆ ರಷ್ಯಾದ ತೈಲಕ್ಕೆ ಕಡಿಮೆ ಬೆಲೆಯನ್ನು ನಿಗದಿಪಡಿಸಿತ್ತು. ಆ ಸಮಯದಲ್ಲಿ ಭಾರತ ರಷ್ಯಾದಿಂದ ತೈಲ ಖರೀದಿ ಮಾಡಲು ಮುಂದಾಯಿತು. ಭಾರತವು ರಷ್ಯಾ ತೈಲ ಖರೀದಿಸುತ್ತಿರುವುದಕ್ಕೆ ಅಮೆರಿಕ ನಮ್ಮ ಮೇಲೆ ಸುಂಕಗಳನ್ನು ವಿಧಿಸಿತು. ಆದರೆ ಆಮೇಲೆ ತಾನೇ ಆ ನಿರ್ಬಂಧಗಳನ್ನು ಹಿಂಪಡೆಯಿತು ಎಂದು ತಿಳಿಸಿದ್ದಾರೆ.
ಭಾರತವು ರಷ್ಯಾ ಕಡೆಗೆ ಹೆಚ್ಚು ಸಹಾನುಭೂತಿ ಹೊಂದಿದೆಯೇ ಮತ್ತು ತೈಲ ಖರೀದಿಸಲು ಅತಿಯಾದ ಆಸಕ್ತಿ ತೋರುತ್ತಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿ, ನಾವು ತೈಲವನ್ನು ಅದರ ಬೆಲೆ ಮತ್ತು ಲಭ್ಯತೆಯ ಆಧಾರದ ಮೇಲೆ ಖರೀದಿಸುತ್ತೇವೆ. ಆ ಸಮಯದಲ್ಲಿ ಯುರೋಪಿಯನ್ ದೇಶಗಳು ಭಾರತದ ಸಾಂಪ್ರದಾಯಿಕ ಪೂರೈಕೆದಾರರಾಗಿದ್ದ ಮಧ್ಯಪ್ರಾಚ್ಯದ (ಮಧ್ಯ ಪ್ರಾಚ್ಯ ದೇಶಗಳ) ತೈಲವನ್ನು ಸಂಪೂರ್ಣವಾಗಿ ಖರೀದಿಸುತ್ತಿದ್ದವು. ಹೀಗಾಗಿ ಅಂದಿನ ಪರಿಸ್ಥಿತಿಯಿಂದಾಗಿ ಭಾರತವು (India) ರಷ್ಯಾದಿಂದ ತೈಲ ಖರೀದಿ ಮಾಡಲು ಮುಂದಾಯಿತು. ರಷ್ಯಾ ತೈಲ ಪೂರೈಕೆ ಬಗ್ಗೆ ನಮಗೆ ನಂಬಿಕೆಯಿದೆ ಎಂದು ತಿಳಿಸಿದ್ದಾರೆ.

ಯುರೋಪಿಯನ್ ದೇಶಗಳ ದ್ವಂದ್ವ ನೀತಿಯ ಬಗ್ಗೆ ಮಾತನಾಡಿ, ಭಾರತದ ಶಸ್ತ್ರಾಸ್ತ್ರಗಳಿಂದ ಯಾವುದೇ ಯುರೋಪಿಯನ್ ದೇಶದ ಮೇಲೆ ದಾಳಿಯಾಗಿಲ್ಲ. ಆದರೆ ಯುರೋಪ್ ದೇಶಗಳು ಮಾರಾಟ ಮಾಡುವ ಶಸ್ತ್ರಾಸ್ತ್ರಗಳನ್ನು (Europe Weapons) ಭಾರತದ ಮೇಲಿನ ದಾಳಿಗಳಿಗೆ ಬಳಸಲಾಗುತ್ತಿದೆ. ಇದು ಇವತ್ತಿನ ಕಥೆ ಮಾತ್ರವಲ್ಲ. ಹಲವು ವರ್ಷಗಳಿಂದ ನಡೆಯುತ್ತಿದೆ. ಆದರೆ ಭಾರತೀಯರಾದ ನಾವು ಎಂದಿಗೂ ಯುರೋಪ್‌ಗೆ ಯಾವುದೇ ರೀತಿಯ ಹಾನಿ ಮಾಡಿಲ್ಲ ಎಂದು ಉತ್ತರ ನೀಡಿದರು.
ಈ ನಡುವೆ ಕೇಂದ್ರದ ಪೆಟ್ರೋಲಿಯಮ್ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಮಾತನಾಡಿ, ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಸಂಬಂಧಗಳು ಕಳೆದ ವರ್ಷ ಸ್ವಲ್ಪ ಹದಗೆಟ್ಟಿದ್ದವು. ಡೊನಾಲ್ಡ್ ಟ್ರಂಪ್ ಭಾರತದ ಸರಕುಗಳ ಮೇಲೆ ಶೇ.50 ರಷ್ಟು ಭಾರೀ ಸುಂಕ ವಿಧಿಸಿದ್ದರು. ಇದರಲ್ಲಿ ಭಾರತ ರಷ್ಯಾದಿಂದ ತೈಲ ಖರೀದಿಸಿದ್ದಕ್ಕಾಗಿ ವಿಧಿಸಲಾದ ಹೆಚ್ಚುವರಿ ಶೇ.25 ರಷ್ಟು ಸುಂಕವೂ ಸೇರಿತ್ತು. ನಂತರದ ದಿನಗಳಲ್ಲಿ ಭಾರತ ಮತ್ತು ಅಮೆರಿಕ ನಡುವೆ ಮಧ್ಯಂತರ ಒಪ್ಪಂದ ಏರ್ಪಟ್ಟಿದ್ದರಿಂದ ಈ ಸುಂಕವನ್ನು ಶೇ.18 ಕ್ಕೆ ಇಳಿಸಲಾಯಿತು. ತದನಂತರ ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಇದನ್ನು ಶೇ.10ಕ್ಕೆ ಇಳಿಸಲಾಯಿತು ಎಂದರು.
ಇತ್ತೀಚೆಗೆ ಮಧ್ಯಪ್ರಾಚ್ಯದಲ್ಲಿನ ತೈಲ ಬಿಕ್ಕಟ್ಟಿನಿಂದಾಗಿ ಜಾಗತಿಕ ತೈಲ ಪೂರೈಕೆಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅಮೆರಿಕವು ರಷ್ಯಾದ ಸಮುದ್ರ ಮಾರ್ಗದಿಂದ ತೈಲ ಖರೀದಿ ಮಾಡುವ ದೇಶಗಳ ಮೇಲಿನ ನಿರ್ಬಂಧಗಳನ್ನ ಸಡಿಲಗೊಳಿಸಿತು. ಅಮೆರಿಕದ ನಿಲುವುಗಳು ಹೀಗಿಯೇ ನಿರಂತರವಾಗಿ ಬದಲಾಗುತ್ತಿದೆ. ಇದರ ನಡುವೆಯೂ ಭಾರತ ಮಾತ್ರ ಅಮೆರಿಕದ ನಿರ್ಬಂಧಗಳ ವಿನಾಯಿತಿಗೆ ಕಾಯದೆ ತನ್ನದೇ ಆದ ವಾಣಿಜ್ಯ ಲಾಭ ಮತ್ತು ಇಂಧನ ಭದ್ರತೆಯ ಅಗತ್ಯತೆಗಳ ಆಧಾರದ ಮೇಲೆ ರಷ್ಯಾದಿಂದ ತೈಲವನ್ನು ಖರೀದಿಸುತ್ತಿದೆ. ಮುಂದೆಯೂ ಖರೀದಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
