ನವದೆಹಲಿ: ದೇಶದ ರಾಜಕೀಯ ವಲಯದಲ್ಲಿ ಇದೀಗ ಅತ್ಯಂತ ದೊಡ್ಡ ಧ್ರುವೀಕರಣದ ಚರ್ಚೆಯೊಂದು ಮುಂಚೂಣಿಗೆ ಬಂದಿದೆ. ದಶಕಗಳ ಹಿಂದೆ ಮಾತೃ ಸಂಸ್ಥೆಯಿಂದ ದೂರವಾಗಿದ್ದ ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸಿ ಮತ್ತೆ ‘ಅಖಂಡ ಕಾಂಗ್ರೆಸ್’ ಸ್ಥಾಪಿಸುವ ಕುರಿತು INDIA ಒಕ್ಕೂಟದ ನಾಯಕರ ನಡುವೆ ಗಂಭೀರ ಮಾತುಕತೆಗಳು ಆರಂಭವಾಗಿವೆ ಎಂಬ ವದಂತಿ ದಟ್ಟವಾಗಿದೆ.
ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಕಚ್ಚಾಟ ತೀವ್ರಗೊಂಡಿರುವ ಬೆನ್ನಲ್ಲೇ ಈ ಚರ್ಚೆ ಮುನ್ನೆಲೆಗೆ ಬಂದಿದ್ದು, ಟಿಎಂಸಿ ಹಾಗೂ ಮಹಾರಾಷ್ಟ್ರದ ಶರದ್ ಪವಾರ್(Sharad Pawar) ನೇತೃತ್ವದ ಎನ್‌ಸಿಪಿ(NCP) ಪಕ್ಷಗಳು ಕಾಂಗ್ರೆಸ್‌ನಲ್ಲಿ (Congress) ವಿಲೀನವಾಗಲಿವೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ಸಮಾನ ಮನಸ್ಕ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಜೊತೆ ವಿಲೀನಗೊಳ್ಳಲು ಸಿದ್ಧತೆ ನಡೆಸುತ್ತಿವೆ. ಈ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ(Mamata Banerjee) ಹಾಗೂ ಶರದ್ ಪವಾರ್ ಅವರು ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ನಿರಂತರ ಮಾತುಕತೆಯಲ್ಲಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾನಾ ಪಟೋಲೆ ನೀಡಿರುವ ಹೇಳಿಕೆ ಈ ಎಲ್ಲಾ ಚರ್ಚೆಗಳಿಗೆ ತುಪ್ಪ ಸುರಿದಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಳಸಲಾಗಿದ್ದ 4,000 ಇವಿಎಂ ಭಸ್ಮ – ಅಗ್ನಿ ಅವಘಡದ ಸುತ್ತ ಅನುಮಾನದ ಹುತ್ತ
VIDEO | Nagpur, Maharashtra: Congress leader Nana Patole, says, “The proposal from the NCP was already there. Many people now feel that the way the BJP-led government under Narendra Modi at the Centre has worked to weaken constitutional institutions, undermine the Constitution,… pic.twitter.com/xi1CjTr1oz
— Press Trust of India (@PTI_News) June 12, 2026
ಇದಕ್ಕೂ ಮುನ್ನ, ಶಿವಸೇನೆ ಉದ್ಧವ್ ಬಣ ನಾಯಕ ಸಂಜಯ್ ರಾವತ್ ಕೂಡ, “ದಶಕಗಳ ಹಿಂದೆ ಕಾಂಗ್ರೆಸ್‌ನಿಂದ ಬೇರ್ಪಟ್ಟಿದ್ದ ಪ್ರಾದೇಶಿಕ ಪಕ್ಷಗಳು ಮತ್ತೆ ಮಾತೃ ಪಕ್ಷವನ್ನು ಸೇರುವುದು ದೇಶದ ಸದ್ಯದ ಪರಿಸ್ಥಿತಿಯಲ್ಲಿ ಉತ್ತಮ ನಿರ್ಧಾರ” ಎಂದು ಅಭಿಪ್ರಾಯಪಟ್ಟಿದ್ದರು. ಇದನ್ನೂ ಓದಿ: ರಾಜೀನಾಮೆ ಪರ್ವದ ನಡುವೆ ಟಿಎಂಸಿಗೆ ಶಾಕ್ – ಮಮತಾ ಬ್ಯಾನರ್ಜಿ ವಿರುದ್ಧ FIR
ಇತಿಹಾಸ ಏನು?
ಮಮತಾ ಬ್ಯಾನರ್ಜಿ – 1998ರಲ್ಲಿ ಕಾಂಗ್ರೆಸ್‌ನಿಂದ ಹೊರಬಂದ ಮಮತಾ ಬ್ಯಾನರ್ಜಿ ಅವರು ತೃಣಮೂಲ ಕಾಂಗ್ರೆಸ್ (TMC) ಪಕ್ಷವನ್ನು ಸ್ಥಾಪಿಸಿ ಬಂಗಾಳದಲ್ಲಿ ಇತಿಹಾಸ ಸೃಷ್ಟಿಸಿದ್ದರು.
ಶರದ್ ಪವಾರ್ – 1999ರಲ್ಲಿ ಸೋನಿಯಾ ಗಾಂಧಿ ಅವರ ವಿದೇಶಿ ಮೂಲವನ್ನು ಪ್ರಶ್ನಿಸಿದ ಕಾರಣಕ್ಕಾಗಿ ಪಕ್ಷದಿಂದ ಹೊರಹಾಕಲ್ಪಟ್ಟ ನಂತರ, ಪಿ.ಎ. ಸಂಗ್ಮಾ ಮತ್ತು ತಾರಿಕ್ ಅನ್ವರ್ ಜೊತೆ ಸೇರಿ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷವನ್ನು (NCP) ಕಟ್ಟಿದ್ದರು. ಆದರೆ ಇತ್ತೀಚೆಗಷ್ಟೇ ಸೋದರಳಿಯ ಅಜಿತ್ ಪವಾರ್ ಬಂಡಾಯದಿಂದಾಗಿ ಶರದ್ ಪವಾರ್ ತಮ್ಮದೇ ಪಕ್ಷದ ಮೇಲಿನ ಹಿಡಿತ ಹಾಗೂ ಚಿಹ್ನೆಯನ್ನು ಕಳೆದುಕೊಳ್ಳುವಂತಾಗಿದೆ.
ಈ ‘ಅಖಂಡ ಕಾಂಗ್ರೆಸ್’ ಪರಿಕಲ್ಪನೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತೀವ್ರವಾಗಿ ಲೇವಡಿ ಮಾಡಿದ್ದಾರೆ. ಇದೆಲ್ಲಾ ಅತ್ಯುತ್ಸಾಹದ ಮಾತುಗಳಷ್ಟೇ. ಕಾಂಗ್ರೆಸ್ ಎನ್ನುವುದು ಮುಳುಗುತ್ತಿರುವ ಹಡಗು, ಅದರೊಂದಿಗೆ ವಿಲೀನಗೊಳ್ಳಲು ಯಾವುದೇ ಪ್ರಾದೇಶಿಕ ಪಕ್ಷಗಳು ಒಪ್ಪುವುದಿಲ್ಲ. ವಿರೋಧ ಪಕ್ಷಗಳು ಏನೇ ಸರ್ಕಸ್ ಮಾಡಿದರೂ ಅಂತಿಮವಾಗಿ ಅದು ಬಿಜೆಪಿಗೇ ಅನುಕೂಲ ಮಾಡಿಕೊಡಲಿದೆ ಎಂದು ಅವರು ಟಾಂಗ್ ನೀಡಿದ್ದಾರೆ.
