– ಹಾಸನದಲ್ಲೂ ಬಿಡದಿ ಮಾದರಿ ಹೋರಾಟಕ್ಕೆ ಸಜ್ಜಾದ ರೈತರು
ಹಾಸನ: ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕಾಗಿ ಕೃಷಿಭೂಮಿ ಸ್ವಾಧೀನಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ ನಿರಂತರ ಹೋರಾಟ ನಡೆಸುತ್ತಿದ್ದು, ಹಾಸನದಲ್ಲೂ ಅದೇ ಮಾದರಿಯ ಹೋರಾಟಕ್ಕೆ ಐದಾರು ಹಳ್ಳಿಗಳ ರೈತರು ಮುಂದಾಗಿದ್ದಾರೆ.
ಹಾಸನ ತಾಲ್ಲೂಕಿನ ಹೂವಿನಹಳ್ಳಿ ಕಾವಲು, ಹೂವಿನಹಳ್ಳಿ ಕೊಪ್ಪಲು, ಹೊಸೂರು ಸೇರಿದಂತೆ ಆರು ಗ್ರಾಮಗಳ 400 ರೈತರ 494.14 ಎಕರೆ ಭೂಮಿಯಲ್ಲಿ ಕರ್ನಾಟಕ ಗೃಹಮಂಡಳಿ ವತಿಯಿಂದ ಬಡಾವಣೆ ನಿರ್ಮಿಸಲು ನೋಟೀಸ್ ನೀಡಿದ್ದು, ಇದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ʼಯಾವುದೇ ಕಾರಣಕ್ಕೂ ಭೂಮಿ ಕೊಡುವುದಿಲ್ಲ. ಬಲವಂತವಾಗಿ ಭೂಮಿ ಕಿತ್ತುಕೊಳ್ಳಲು ಬಂದರೆ ಪ್ರಾಣ ಬಿಡಲು ತಯಾರಿದ್ದೇವೆ. ಪ್ರಾಣ ತೆಗೆಯಲು ಸಿದ್ಧರಿದ್ದೇವೆʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಸತಿ ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಳ್ಳಲು ರೈತರಿಗೆ ಕಲಂ 15 (2) ರ ಅಡಿಯಲ್ಲಿ ವಿಚಾರಣಾ ನೋಟಿಸ್ ಜಾರಿಯಾಗಿದೆ. ಅದಕ್ಕೆ ರೈತರು ಸಾಮೂಹಿಕವಾಗಿ ಆಕ್ಷೇಪಣೆ ಸಲ್ಲಿಸಿದ್ದಾರೆ. ಯಾರಿಗೋ ನಿವೇಶನಗಳನ್ನು ನೀಡುವ ಉದ್ದೇಶಕ್ಕಾಗಿ ನಮ್ಮ ಜೀವನಕ್ಕೆ ಆಧಾರವಾಗಿರುವ ಫಲವತ್ತಾದ ಕೃಷಿ ಭೂಮಿಯನ್ನು ಕಸಿದುಕೊಳ್ಳಲು ಗೃಹಮಂಡಳಿ ಮುಂದಾಗಿದೆ. ಈಗಾಗಲೇ ಎರಡು ಬಾರಿ ನೋಟಿಸ್ ನೀಡುವುದರ ಜೊತೆಗೆ ವಿಶೇಷ ಭೂಸ್ವಾಧೀನಾಧಿಕಾರಿ ಕೆಲವು ರೈತರನ್ನು ಕರೆದು ಅಭಿಪ್ರಾಯ ಕೇಳಿದ್ದಾರೆ. ಈ ವೇಳೆ ನಮ್ಮ ಭೂಮಿ ನೀಡುವುದಿಲ್ಲ ಎಂದು ಎಲ್ಲಾ ರೈತರು ಹೇಳಿದ್ದಾರೆ. ಮೆಕ್ಕೆಜೋಳ, ಅಡಿಕೆ, ತೆಂಗು, ಸೇಬು, ರೇಷ್ಮೆ ಬೆಳೆದು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಇದೇ ಜಮೀನಿನ ಮೇಲೆ ರೈತರ ಸಾಲ ಮಾಡಿದ್ದಾರೆ. ಬಹುತೇಕರು ಸಣ್ಣ ರೈತರಾಗಿದ್ದು ಈ ಜಮೀನು ಬಿಟ್ಟರೆ ಬೇರೆ ಯಾವುದೇ ಆಸ್ತಿ ಇಲ್ಲ. ಇಂತಹ ಭೂಮಿ ಮೇಲೆ ಗೃಹಮಂಡಳಿ ಕಣ್ಣು ಹಾಕಿದೆ ಎಂದು ರೈತರು ಕಿಡಿಕಾರಿದ್ದಾರೆ.
ಕರ್ನಾಟಕ ಗೃಹ ಮಂಡಳಿ ಸುಮಾರು 494.14 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು, ಅದರಲ್ಲಿ ಕೇವಲ 6 ಎಕರೆ ಮಾತ್ರ ಖರಾಬು ಭೂಮಿಯಾಗಿದೆ. ಉಳಿದ ಬಹುತೇಕ ಭೂಮಿ ನೀರಾವರಿ ಸೌಲಭ್ಯ ಹೊಂದಿರುವ ಫಲವತ್ತಾದ ಕೃಷಿ ಪ್ರದೇಶವಾಗಿದೆ. ಇದೇ ಭೂಮಿ ನೂರಾರು ರೈತ ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿದೆ ಎಂದು ರೈತರು ತಮ್ಮ ಆಕ್ಷೇಪಣೆಯಲ್ಲಿ ಉಲ್ಲೇಖಿಸಿದ್ದಾರೆ.
ಕೃಷಿಯ ಜೊತೆಗೆ ಹೈನುಗಾರಿಕೆ ಮಾಡುತ್ತಿದ್ದು, ಪ್ರತಿದಿನ ಸುಮಾರು 2,500 ರಿಂದ 3,000 ಲೀಟರ್ ಹಾಲನ್ನು ಹಾಲು ಒಕ್ಕೂಟಕ್ಕೆ ಪೂರೈಕೆ ಮಾಡುತ್ತಿದ್ದಾರೆ. ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಈಗಾಗಲೇ ಸುಮಾರು 13 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಅಭಿವೃದ್ಧಿಪಡಿಸಿದ್ದು, ಅವುಗಳ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಎಸ್.ಎಂ.ಕೃಷ್ಣ ಬಡಾವಣೆಯಲ್ಲಿಯೇ ಸಾಕಷ್ಟು ನಿವೇಶನಗಳು ಖಾಲಿ ಉಳಿದಿವೆ. ಕರ್ನಾಟಕ ಗೃಹ ಮಂಡಳಿಯ ಹಿಂದಿನ ಯೋಜನೆಗಳಲ್ಲಿಯೂ ಇನ್ನೂ ಅನೇಕ ಕಡೆ ನಿವೇಶನಗಳು ಮಾರಾಟ ಹಂಚಿಕೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ಹೊಸದಾಗಿ ನೂರಾರು ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಮತ್ತೊಂದು ಬಡಾವಣೆ ನಿರ್ಮಿಸಲು ಮುಂದಾಗಿರುವುದು ರೈತರ ಒಕ್ಕಲೆಬ್ಬಿಸುವ ಹುನ್ನಾರ ಎಂದು ಆರೋಪಿಸಿದ್ದಾರೆ. ಗೃಹಮಂಡಳಿ ಹಾಗೂ ಸರ್ಕಾರ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಧಾರದಿಂದ ತಕ್ಷಣವೇ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ಬಿಡದಿ ರೈತರ ಹೋರಾಟದ ಮಾದರಿಯಲ್ಲೇ ಪ್ರತಿಭಟನೆಗಿಳಿಯಲು ನಿರ್ಧರಿಸಿದ್ದು, ಒಂದು ವೇಳೆ ದಬ್ಬಾಳಿಕೆಯಿಂದ ಭೂಸ್ವಾಧೀನಕ್ಕೆ ಮುಂದಾದರೆ ಆಗುವ ಘಟನೆಗಳಿಗೆ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದ್ದಾರೆ.
