ನವದೆಹಲಿ: ಅಯೋಧ್ಯೆ ರಾಮಮಂದಿರ ದೇಣಿಗೆ ಹಗರಣ ಸಂಬಂಧ ಸ್ವತಂತ್ರ ನ್ಯಾಯಾಂಗ ತನಿಖೆ ಕೋರಿ ದಾಖಲಾಗಿರುವ ಎಲ್ಲಾ ಅರ್ಜಿಗಳ ವಿಚಾರಣೆ ನಾಳೆ ಸುಪ್ರೀಂ ಕೋರ್ಟ್ ಸಿಜೆ ಸೂರ್ಯಕಾಂತ್ ಪೀಠದಲ್ಲಿ ನಡೆಯಲಿದೆ.
ಸಿಇಓ ಅಧಿಕಾರಗಳನ್ನು ಅಯೋಧ್ಯೆ ಟ್ರಸ್ಟ್ ನಿರ್ಧರಿಸುತ್ತದೆಯೇ ಹೊರತು ಸರ್ಕಾರ ಅಲ್ಲ ಅಂತ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ. ಟ್ರಸ್ಟ್‌ನಲ್ಲಿ ಭಕ್ತರ ನಂಬಿಕೆಯನ್ನು ಎತ್ತಿಹಿಡಿಯುವುದು ಸಿಇಓ ಅವರ ಪ್ರಾಥಮಿಕ ಜವಾಬ್ದಾರಿಯಾಗಿದೆ. ಹೊಸ ಸಿಇಓ ಹಣಕಾಸಿನ ವ್ಯವಸ್ಥೆಗಳನ್ನು ಸಹ ನೋಡಿಕೊಳ್ಳುತ್ತಾರೆ. ಇದರಲ್ಲಿ ಯಾವುದೇ ‘ಸರ್ಕಾರದ ಹಸ್ತಕ್ಷೇಪ’ ಇರಲ್ಲ ಅಂತ ಮಿಶ್ರಾ ತಿಳಿಸಿದ್ದಾರೆ.
ಸಿಇಓ ನೇಮಕ ಸಂಬಂಧ ಜುಲೈ 22 ರಂದು ಮಹತ್ವದ ಸಭೆ ನಿಗದಿಯಾಗಿದೆ. ಇತ್ತ ಬಿಜೆಪಿ ವಿರುದ್ಧ ಕಾಂಗ್ರೆಸ್, ಆಪ್ ನಾಯಕರು ಮುಗಿಬಿದ್ದಿದ್ದಾರೆ. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಪ್ರಧಾನಿ ಮೋದಿ ಮೌನ ಪ್ರಶ್ನಿಸಿದ್ದಾರೆ. ದೇಶದ ಜನರು ಬಿಜೆಪಿ, ಆರ್‌ಎಸ್‌ಎಸ್ ಅನ್ನು ಎಂದಿಗೂ ಕ್ಷಮಿಸುವುದಿಲ್ಲ. ಈ ಕಳವು ಪ್ರಕರಣದಲ್ಲಿ ಕೆಲವೇ ಕಾರ್ಮಿಕರು ಭಾಗಿಯಾಗಿರಲು ಸಾಧ್ಯ ಇಲ್ಲ. ಸರ್ಕಾರವು ನಿಜವಾದ ಆರೋಪಿಗಳನ್ನು ರಕ್ಷಿಸುತ್ತಿದೆ. ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ಆಗ್ಬೇಕು. ಆರೋಪಗಳಿಗೆ ಕಠಿಣ ಶಿಕ್ಷೆ ಆಗಬೇಕು ಅಂತ ಜೈರಾಮ್ ರಮೇಶ್ ಎಕ್ಸ್ನಲ್ಲಿ ಖಂಡಿಸಿದ್ದಾರೆ.
ಆಪ್ ನಾಯಕ ಕೇಜ್ರಿವಾಲ್ ಕೂಡ ಇಡೀ ವ್ಯವಸ್ಥೆಯೇ ಕಳ್ಳರು-ಖದೀಮರ ರಕ್ಷಣೆಗೆ ನಿಂತಿದೆ ಅಂತಿದ್ದಾರೆ. ಈ ಮಧ್ಯೆ, ಬದರಿನಾಥ ದೇಗುಲ ದೇಣಿಗೆ ಹಗರಣ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಬದರಿನಾಥ-ಕೇದಾರನಾಥ ದೇಗುಲದ ಸಿಇಓಗೆ ಉತ್ತರಾಖಂಡ ಸಿಎಂ ಧಾಮಿ ಸೂಚಿಸಿದ್ದಾರೆ.
